Advertisement

ಗುರುನಾರಾಯಣ ರಾತ್ರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ

03:18 PM Mar 17, 2017 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಪ್ರಾಯೋಜಿತ ಗುರುನಾರಾಯಣ ರಾತ್ರಿಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ  ಬೀಳ್ಕೊಡುವ ಕಾರ್ಯಕ್ರಮವು ಮಾ. 4ರಂದು ಶಾಲಾ ಸಭಾಗೃಹದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಶಾಲಾ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣವೇ ಬದುಕಿನ ಮೂಲಮಂತ್ರ ಎಂಬ ಧ್ಯೇಯವನ್ನಿಟ್ಟುಕೊಂಡು ಉತ್ತಮ ಶಿಕ್ಷಣವನ್ನು ಪಡೆದು ಗುರುಹಿರಿಯರ, ಮಾತಾಪಿತರ ಮಾರ್ಗದರ್ಶನದಲ್ಲಿ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಯಾವುದೇ ರೀತಿಯ ಪರೀಕ್ಷೆಯನ್ನು ಎದುರಿಸುವಾಗ ಸಕಾರಾತ್ಮಕ ಪ್ರಯತ್ನವಿದ್ದಲ್ಲಿ ಫಲ ಇದ್ದೇ ಇರುತ್ತದೆ. ಜೀವನದಲ್ಲಿ ಯಾವುದೇ ಸಾಧನೆ ಅಸಾಧ್ಯವಲ್ಲ. ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪ್ರಬಲವಾದ ಇಚ್ಛಾಶಕ್ತಿಯೊಂದಿಗೆ ಕಾರ್ಯನಿರ್ವಹಿಸಬೇಕು. ನಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆ ಇಂದು ರಾಜ್ಯದಲ್ಲೇ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದೆ. ಅದೇ ದಾರಿಯಲ್ಲಿ ಮಕ್ಕಳು ಮುಂದುವರಿಯಬೇಕು ಎಂದರು.

ಹತ್ತನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಾ ಧ್ಯಕ್ಷರು, ಶಿಕ್ಷಕವೃಂದ, ಶಿಕ್ಷಕೇತರ ಸಿಬಂದಿಗಳನ್ನು ಗೌರವಿಸಿದರು. ವಿದ್ಯಾರ್ಥಿ ಗಳು ಮಾತನಾಡಿ, ಶಾಲೆಯ ಫಲಿತಾಂಶ ಕಳೆದ ಮೂರು ವರ್ಷಗಳಿಂದ ಸತತ ಶೇ. 100 ಫಲಿತಾಂಶವನ್ನು ಸಾಧಿಸುತ್ತಿದ್ದು, ನಾವೆಲ್ಲರೂ ಅದೇ ನಿಟ್ಟಿನಲ್ಲಿ ಪ್ರಯತ್ನಿಸಿ ಈ ವರ್ಷವೂ ಶತ ಪ್ರತಿಶತ ಫಲಿತಾಂಶನ್ನು ತಂದು ಕೊಡುವುದಾಗಿ ಭರವಸೆ ನೀಡಿದರು.

ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರಯ್ಯ ಸಿ., ಶಿಕ್ಷಕ ವೃಂದದವರಾದ ಎಂ. ಐ. ಬಡಿಗೇರ, ಶಿವಾನಂದ ಪಾಟೀಲ್‌, ಸಿದ್ಧರಾಮ ದಶಮಾನೆ, ಶಿಕ್ಷಕಿ ವಿಮಲಾ ಡಿ. ಎಸ್‌., ಹೇಮಾ ಗೌಡ ಅವರು ವಿದ್ಯಾರ್ಥಿಗಳು ಪರೀಕ್ಷೆಯ ಮುಂಚಿತವಾಗಿ ಯಾವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿ ಶುಭ ಹಾರೈಸಿದರು.

ಶಾಲಾ ಸಮಿತಿಯ ಸದಸ್ಯೆ ಸುಷ್ಮಾ ಪೂಜಾರಿ ಉಪಸ್ಥಿತರಿದ್ದರು. ಶಿಕ್ಷಕೇತರ ಸಿಬ್ಬಂದಿಗಳಾದ ನಮಿತಾ ಸುವರ್ಣ ಮತ್ತು ಲಕ್ಷ್ಮಣ್‌ ಪೂಜಾರಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಹಳೆವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ವಾತಿ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು. ಶ್ರೀದೇವಿ ಮಾಣಕೋಜಿ ವಂದಿಸಿದರು. ಶಾಲೆಯ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next