ಗುರುಮಠಕಲ್: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದೂ ಧರ್ಮದ ರಕ್ಷಣೆ ಜತೆಗೆ ರಾಷ್ಟ್ರೀಯತೆ ಸಾರುವ ಕೆಲಸ ಮಾಡುತ್ತಿದೆ ಎಂದು ವಕ್ತಾರ ಡಾ| ಪ್ರಕಾಶ ಕುಲಕರ್ಣಿ ಹೇಳಿದರು.
ಪಟ್ಟಣದ ಕೇಶವ ಉದ್ಯಾನ ವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಆಯೋಜಿಸಿದ್ದ ಗಣವೇಷ ಧಾರಿಗಳ ಪಥ ಸಂಚಲನದಲ್ಲಿ ಅವರು ಮಾತನಾಡಿದರು. ದೇಶಭಕ್ತಿ ಸಂಘಟನೆಯಾದ ಆರ್‌ಎಸ್‌ಎಸ್‌ನಲ್ಲಿ ಹಿಂದೂಗಳು ಮಾತ್ರವಿಲ್ಲ. ಎಲ್ಲ ಧರ್ಮದ ಬಂಧುಗಳು ಶಿಸ್ತಿನ ಸಂಘಟನೆಯಲ್ಲಿ ಸದಸ್ಯರಾಗಿ ದೇಶ ಸೇವೆಯಲ್ಲಿ ತೊಡಗಿದ್ದಾರೆ. ಪ್ರಪಂಚಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಭಾರತೀಯ ಪರಂಪರೆ ಉಳಿಸುವ ನಿಟ್ಟಿನಲ್ಲಿ ದೇಶದಲ್ಲಿ ಉತ್ತಮ ಕೆಲಸಗಳು ಸಂಘದಿಂದ ನಡೆಯುತ್ತಿವೆ ಎಂದರು.
ಮುಖ್ಯ ಅಥಿತಿಯಾಗಿ ಮಧುಸೂದನ ಜಿ.ವಿ ಆಚಾರ್ಯ ಮಾತನಾಡಿ, ದೇಶ ಸೇವೆ ಮಾಡುವ ಯುವಕರ ಸಂಖ್ಯೆ ಜಾಸ್ತಿಯಾಗಬೇಕು. ದೇಶಭಕ್ತಿ ಮೂಡಿಸುವ ಆರ್‌ಎಸ್‌ಎಸ್ ಸಂಘಟನೆಯಲ್ಲಿ ತೊಡಗಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಲು ಯುವಕರಿಗೆ ಉತ್ತಮ ಅವಕಾಶವಿದೆ ಎಂದು ಹೇಳಿದರು.
ಗುರುಮಠಕಲ್ ಪಟ್ಟಣದಲ್ಲಿ ನಡೆದ ಗಣವೇಷ ಧಾರಿಗಳ ಶಿಸ್ತಿನ ಪಥ ಸಂಚಲನದಲ್ಲಿ ಸಾವಿರಾರು ಸ್ವಯಂ ಸೇವಕರು ಭಾಗಿಯಾಗಿದ್ದರು. ಪಥ ಸಂಚಲನ ಪಟ್ಟಣದ ನಗರೇಶ್ವರ ಮಂದಿರ ರಸ್ತೆಯಿಂದ ಮಿಠ್ಟಿ ಬಾವಿ ಮೂಲಕ ಅಂಬಿಗರ ಚೌಡಯ್ಯ ವೃತ್ತ ಮಾರ್ಗ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಪಟ್ಟಣದಲ್ಲಿ ಸ್ವಯಂ ಸೇವಕರನ್ನು ಸಾರ್ವಜನಿಕರು ಸ್ವಾಗತಿಸಿದರು.
ಮೂರ್ತಿ, ಬುಗ್ಗಣ್ಣ ದ್ಯಾವರ, ಸೋಮಯ್ಯ ಸಾತನೂರ, ಪ್ರಭು ಮುತ್ತಗಿ, ಬಸಪ್ಪ ಸಂಜನೂಳ, ಶ್ರೀನಿವಾಸ ಯಾದವ, ಸಾಯಿರೆಡ್ಡಿ, ವಿಶಾಲ ಮುತ್ತಗಿ, ಲಕ್ಷ್ಮಣ ಕುಂಬಾರ, ಚಂದ್ರಕಾಂತ ಸುಬ್ಬಿ, ಮಹೇಶ, ಮಂಜಪ್ಪ, ಸುನೀಲ, ಚಿರಂತನ, ಶಂಕರ, ಹರ್ಷಿತ, ಭೀಮಾಶಂಕರ ಮುತ್ತಗಿ, ಅಶೋಕ ಮುತ್ತಗಿ ಇದ್ದರು.