Advertisement

ಬೇಸಿಗೆ ಬೇಗೆ ಬೆನ್ನಲ್ಲೇ ಜಲದಾಹ

10:57 AM Apr 26, 2019 | Naveen |

ಗುರುಮಠಕಲ್: ರಾಜ್ಯದ ಕೊನೆ ಗ್ರಾಮವಾದ ಪುಟಪಾಕನಲ್ಲಿ ನೀರಿಗಾಗಿ ನಿತ್ಯವೂ ಪರದಾಡುವ ಪರಿಸ್ಥಿತಿ ಎದುರಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ತೆಲಂಗಾಣ ರಾಜ್ಯದ ವಾಣಿಜ್ಯ ಪಟ್ಟಣ ನಾರಾಯಪೇಟ್‌ಗೆ ಹೋಗುವ ಹೆದ್ದಾರಿಯಲ್ಲಿರುವ ಪುಟಪಾಕ್‌ ಗ್ರಾಮದಲ್ಲಿ ಸುಮಾರು 8200 ಜನಸಂಖ್ಯೆ ಇದೆ. ಗ್ರಾಪಂ ಕೇಂದ್ರ ಸ್ಥಾನ ಹೊಂದಿದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೇ ಹೊರತು ಪರಿಹಾರವಾಗುತ್ತಿಲ್ಲ.

ಸುಮಾರು 5 ಕೊಳವೆಬಾವಿಗಳಿಂದ ಗ್ರಾಮದ ನೀರಿನ ಟ್ಯಾಂಕ್‌ಗೆ ಸಂಪರ್ಕವಿದೆಯಾದರೂ ಜನರಿಗೆ ಮಾತ್ರ ನೀರು ಸಾಲುತ್ತಿಲ್ಲ. ಒಂದೆಡೆ ವಿದ್ಯುತ್‌ ಕಡಿತದ ಸಮಸ್ಯೆಯಾದರೆ, ಇನ್ನೊಂದೆಡೆ ಕೊಳವೆಬಾವಿಗಳು ಕೈಕೊಡುವುದು ಅಥವಾ ನೀರು ಬತ್ತುವುದು ಹೀಗೆ ಸಮಸ್ಯೆ ಮಾತ್ರ ನಿರಂತರವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದಲ್ಲಿನ ಎಲ್ಲ ಕೈಪಂಪ್‌ಗ್ಳಿಗೆ ಸಿಂಗಲ್ ಫೇಸ್‌ ಮೋಟಾರ್‌ ಅಳವಡಿಸಿದ್ದೇವೆ. ವಿದ್ಯುತ್‌ ಸರಬಾರಾಜು ಇದ್ದಾಗ ಅಲ್ಲಿಯೇ ನೀರು ಪಡೆಯಬಹುದು. ಇನ್ನು ಮುಂಗಾರು ಮಳೆ ಕಡಿಮೆಯಾಗಿದ್ದರಿಂದ ಅಂತರ್ಜಲ ಮಟ್ಟವೂ ಕುಸಿದಿದೆ. ಇದರಿಂದ ಕೊಳವೆಬಾವಿಯಿಂದ ನೀರು ಬರುತ್ತಿಲ್ಲ. ಸಮಸ್ಯೆ ಪರಿಹರಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷೆ ಸಂಗೀತಾ.

ಒಟ್ಟಾರೆಯಾಗಿ ಮಳೆಗಾಲವೋ, ಚಳಿಗಾಲವೋ ಎನ್ನುವ ಬೇಧವಿಲ್ಲದೆ ಗ್ರಾಮಸ್ಥರಿಗೆ ನೀರಿನ ಚಿಂತೆಯಂತೂ ಸದಾ ಕಾಡುತ್ತದೆ. ಇನ್ನೂ ಬೇಸಿಗೆ ಸಮಯ ಎಂದರೆ ಗ್ರಾಮಸ್ಥರ ಗೋಳು ದೇವರೇ ಬಲ್ಲ ಎನ್ನುವುದು ಪುಟಪಾಕ ಗ್ರಾಮಸ್ಥರ ಅಳಲು.

Advertisement

ಸಾಬ್ರೆ ಕರೆಂಟ್ ಇದ್ರೆ ಬೋರ್‌ದಾಗ ನೀರು ಬರ್ತವ. ಕೈನಿಂದ ಎಷ್ಟು ಒಡುದ್ರೂ ನೀರು ಬರವಲ್ತು. ನಮ್‌ ಕಷ್ಟ ಯಾರೂ ತೀರ್ಸವಲ್ರು. ಬೇಸಿಗಿ ಬರೋದ್ರೊಳಗ ಯಾದಗಿರಿ ಭೀಮಾ ನೀರು ಬರ್ತವ ಅಂತ ಹೇಳ್ತಿದ್ರು. ಅದೂ ಬರಂಗ ಕಾಣವಲ್ತು. ಈ ಬೇಸಿಗಿದಾಗ ನೀರಿಗಾಗಿನೇ ನಮ್‌ ಹೆಣ ಬೀಳ್ತದ. ಸುಮನ್ನೆ ಕುಂತರೆ ನೀರೆ ಸಿಗಲ್ಲ. ನಮ್ದಂತು ಬಿಡ್ರಿ ದನಗಳಿಗಿ ಕುಡಿಲಕ್ಕೆ ಕಾಡಲ್ಲಿ ನೀರೆ ಸಿಗವಲ್ದು. ಅವುಕ್ಕೆ ಏನ್ಮಾಡ್ಬೇಕೋ ಗೊತ್ತಾಗುತ್ತ ಇಲ್ಲ.
•ಹಣ್ಮಮ್ಮ, ಗ್ರಾಮಸ್ಥರು.

ಖಾಸಗಿ ಬೋರ್‌ಗಳನ್ನಾದರೂ ಬಾಡಿಗೆಗೆ ಪಡೆಯೋಣ ಎಂದರೆ ಅಲ್ಲಿಯೂ ನೀರಿನ ಮಟ್ಟ ಕುಸಿದಿದೆ. ಇನ್ನು ಖಾಸಗಿ ಬೋರುಗಳಿಂದ ಗ್ರಾಮಕ್ಕೆ ಸರಬರಾಜು ಮಾಡಲು ಪೈಪ್‌ ಲೈನ್‌ ಮಾಡಿದ ನಂತರ ನೀರು ಎರಡೆ ದಿನಕ್ಕೆ ಖಾಲಿಯಾಗುವ ಸಂಭವವೇ ಹೆಚ್ಚಿಗಿದೆ.
•ವೆಂಕಟ್ರಾಮುಲು ಕಲಾಲ,
ಎಪಿಎಂಸಿ ಉಪಾಧ್ಯಕ್ಷ ಪುಟಪಾಕ

ಏ ಏನ್ಮಾಡ್ಬೇಕು, ಬಿಸಿಲಾದ ಅಂತ ಬಿಟ್ರೆ ಕುಡ್ಯಾಕ್‌ ನೀರು ಸಿಗವಲ್ದು. ನಮ್‌ ಹಣೇಬರ ನೀರು ಯಾವಾಗ್‌ ಸಿಗ್ತದೋ ಅಂತ ಕಾಯ್ತಾ ಕೂಡ್ಬೇಕು. ಇಲ್ಲಂದ್ರೆ ಕುಡ್ಯಾಕೂ ಇಲ್ಲ. ತೊಳ್ಯಾಕೂ ಇಲ್ಲ ಅಂದಂಗಾದ ನಮ್‌ ಪರಿಸ್ಥಿತಿ.
• ಬಾಲಮ್ಮ, ಗ್ರಾಮಸ್ಥೆ

ಚನ್ನಕೇಶವುಲು ಗೌಡ

Advertisement

Udayavani is now on Telegram. Click here to join our channel and stay updated with the latest news.

Next