ಗುರುಮಠಕಲ್: ಗರ್ಭಿಣಿಯರು, ಬಾಣಂತಿಯರು ಪ್ರತಿದಿನ ಊಟದಲ್ಲಿ ಕಬ್ಬಿಣಾಂಶ ಹೆಚ್ಚಿರುವ ಆಹಾರ ಪದಾರ್ಥ ಸೇವಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಜಾಕ್ಷಿ ಬೆಂಡಿಗೇರಿ ಹೇಳಿದರು.
ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಯೋಜನೆಯಡಿ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಶಿಬಿರ ಹಾಗೂ ಮಕ್ಕಳ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗರ್ಭಿಣಿಯರು ನಿತ್ಯ ಸೇವಿಸುವ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ಸಾಮಾನ್ಯ ಮಹಿಳೆಗಿಂತ ಗರ್ಭಿಣಿಯರು ಮೂರು ಪಟ್ಟು ಹೆಚ್ಚು ಕ್ಯಾಲೋರಿಯುಕ್ತ ಆಹಾರ ಸೇವಿಸಬೇಕು. ಶಕ್ತಿ ನೀಡುವ, ಪೋಷಕಾಂಶಗಳಿರುವ, ಕ್ಯಾಲ್ಷಿಯಂ ಮತ್ತು ಕಬ್ಬಿಣಾಂಶ ಇರುವ, ಧಾನ್ಯಗಳು, ಸಿರಿಧಾನ್ಯಗಳು, ಸೊಪ್ಪು-ತರಕಾರಿ, ಹಣ್ಣು, ಹಾಲು, ಮೊಸರು, ಮಜ್ಜಿಗೆ, ನುಗ್ಗೆಕಾಯಿ, ಬಟಾಣಿ ಸೇವಿಸುವುದರಿಂದ ಎಲ್ಲ ಪೋಷಕಾಂಶಗಳು ಲಭಿಸುತ್ತವೆ. ವಿಶೇಷವಾಗಿ ಗರ್ಭಿಣಿಯರಿಗೆ ಕ್ಯಾಲ್ಷಿಯಂ ಅಧಿಕ ಪ್ರಮಾಣದಲ್ಲಿ ಅಗತ್ಯವಿರುತ್ತದೆ. ಗರ್ಭದಲ್ಲಿರುವ ಭ್ರೂಣಕ್ಕೆ ಚೆನ್ನಾಗಿ ಕ್ಯಾಲ್ಷಿಯಂ ಪೂರೈಕೆಯಾದಾಗ ಶಿಶುವಿನ ಮೂಳೆಗಳು ಶಕ್ತಿಯುತವಾಗುತ್ತವೆ. ಹಲ್ಲುಗಳು ಬೆಳೆಯಲು ಸಹಕಾರಿ. ಕಡಿಮೆ ಕ್ಯಾಲೋರಿಗಳಿರುವ ಆಹಾರ ಸೇವಿಸುವುದರಿಂದ ತಾಯಿ ದೇಹದಲ್ಲಿ ಜಿಡ್ಡಿನಾಂಶ ಅಧಿಕವಾಗಿ ಕೆರೋಟಿನ್ಸ್ ಉತ್ಪತ್ತಿಯಾಗುತ್ತದೆ. ಇದರಿಂದ ಬುದ್ಧಿಮಾಂಧ್ಯ ಮಕ್ಕಳು ಜನಿಸುವ ಸಾಧ್ಯತೆಯಿರುತ್ತದೆ ಎಂದು ಹೇಳಿದರು.
ಗರ್ಭಿಣಿಯರು, ಬಾಣಂತಿಯರು ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಮಾತೃ ಪೂರ್ಣ ಯೋಜನೆಯಡಿ ನೀಡುತ್ತಿರುವ ಅನ್ನ, ತರಕಾರಿಯುಕ್ತ ಸಾಂಬಾರ, ಹಾಲು, ಮೊಟ್ಟೆ, ಶೇಂಗಾ ಚಿಕ್ಕಿ ಸೇವಿಸಬೇಕು ಎಂದು ಹೇಳಿದರು.
ಮಹಿಳಾ ಮೇಲ್ವಿಚಾರಕಿ ರೇಣುಕಾ ಯಲಗೋಡ ಮಾತನಾಡಿ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲನೇ ಹೆರಿಗೆಗೆ 3 ಕಂತುಗಳಲ್ಲಿ ಸರ್ಕಾರದಿಂದ 5 ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಹೇಳಿದರು.
ವಾರ್ಡ್ ಸದಸ್ಯ ನರಸಪ್ಪ ಗಡ್ಡಲ್, ಜೆಡಿಎಸ್ ಮುಖಂಡ ರವಿಂದ್ರರೆಡ್ಡಿ ಗವಿನೋಳ, ರೇಣುಕಾ ಪಡಿಗೆ, ಅಂಗನವಾಡಿ ಕಾರ್ಯಕರ್ತೆಯರಾದ ಸಾವಿತ್ರಿ, ವೆಂಕಟಮ್ಮ, ಭಾಗ್ಯಶ್ರೀ, ಮಮತಾ, ರಾಧಾ, ಅಂಗನವಾಡಿ ಸಹಾಯಕಿಯರಾದ ದೇವಕಿ, ಪದ್ಮಮ್ಮ, ಬಾಲಮ್ಮ ಇದ್ದರು.