ಗುರುಮಠಕಲ್: ರಾಜ್ಯ ಸರ್ಕಾರ ರೈತರ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಎಚ್ಚರಿಸಿದರು.
ಗುರುಮಠಕಲ್ ಪಟ್ಟಣದಿಂದ ಚಂಡರಕಿ ಗ್ರಾಮದವರೆಗೆ ಪಾದಯಾತ್ರೆ ನಡೆಸಿದ ಕಾರ್ಯಕರ್ತರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ವೇದಿಕೆ ಪಕ್ಕದ ಆವರಣದಲ್ಲಿ ಧರಣಿ ಕುಳಿತರು.
ರೈತರ ಹೆಸರಿನಲ್ಲಿ ಚುನಾವಣೆ ಎದುರಿಸಿದ ಪಕ್ಷಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವತ್ತ ಚಿಂತಿಸಬೇಕಿದೆ. ಭೂಸ್ವಾಧೀನ ಕಾಯ್ದೆ, ವಿದ್ಯುತ್, ಸಾಲ ಮನ್ನಾ, ನೀರಿನ ಸಮಸ್ಯೆ, ಬರಗಾಲ, ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾಲಮನ್ನಾ ಅಡಿ ರೈತರ ಖಾತೆಗಳಿಗೆ ಬರಬೇಕಿದ್ದ ಮನ್ನಾ ಆಗಿದ್ದ ಹಣವು ಮತ್ತೆ ಸರ್ಕಾರದ ಖಾತೆಗೆ ಹಿಂತಿರುಗಿದೆ. ಇದರಿಂದ ರೈತರು ಸುಸ್ತಿ ಸಾಲಗಾರರಾಗಿದ್ದು, ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಪ್ರಸಕ್ತ ಸಾಲಿನ ಕೃಷಿ ಚಟುವಟಿಕೆಗಳಿಗೆ ರೈತರ ಬಳಿ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಧರಣಿ ನಡೆಸುತ್ತಿದ್ದ ಸಮಯದಲ್ಲಿ ಮಳೆ ಸುರಿದರೂ ಕಾರ್ಯಕರ್ತರು ಧರಣಿ ಸ್ಥಳದಿಂದ ಕದಲಲಿಲ್ಲ. ನಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಕಾರ್ಯದರ್ಶಿ ಶಿವಪ್ಪ ಅಬ್ಬಣಿ, ಜಿಲ್ಲಾಧ್ಯಕ್ಷ ಬಸನಗೌಡ ಚಿಂಚೋಳಿ, ಶರಣಗೌಡ ಬೆಟಗೇರಿ ನಾಯ್ಕಲ್, ಗುರುನಾಥರೆಡ್ಡಿ ರೊಟ್ನಡಗಿ, ಶರಣಗೌಡ ನಾಯ್ಕಲ್, ಬಸ್ಸುಗೌಡ ಬಿರಾದಾರ, ರಾಮಣಗೌಡ ಯಾಳಗಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಸುಭಾಷ್ ಐಕೂರ, ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.