ಗುರುಮಠಕಲ್: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೂನ್ 21ರಂದು ಚಂಡರಕಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದು, ಅವರಿಗೆ ದೊಡ್ಡ-ದೊಡ್ಡ ಸಮಸ್ಯೆ ಮತ್ತು ಬೇಡಿಕೆಗಳನ್ನು ಸಲ್ಲಿಸೋಣ ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು.
ಚಂಡರಕಿ ಗ್ರಾಮದಲ್ಲಿ ಸಿಎಂ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚಿಕ್ಕ ಪುಟ್ಟ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಿಕೊಳ್ಳಬಹುದು. ಅಂತಹ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ಬೇಡಿಕೆಯಾಗಿ ಸಲ್ಲಿಸುವುದು ಬೇಡ. ಗ್ರಾಮದಲ್ಲಿ ವ್ಯವಸ್ಥಿತ ಆಸ್ಪತ್ರೆ ನಿರ್ಮಾಣ, ಬಸ್ ನಿಲ್ದಾಣ ನಿರ್ಮಾಣ, ಕೆರೆ ಅಭಿವೃದ್ಧಿ, ಕೋಟೆಯನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸುವುದು ಸೇರಿದಂತೆ ಬೃಹತ್ ಮಟ್ಟದ ಬೇಡಿಕೆಗಳನ್ನು ಸಲ್ಲಿಸೋಣ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದಿಂದ ಚಂಡರಕಿಯಲ್ಲಿ ಅಭಿವೃದ್ಧಿಯ ವೇಗ ಹೆಚ್ಚುವಂತಾಗಬೇಕು. ಗ್ರಾಮದಲ್ಲಿ ಪಿಯು ಕಾಲೇಜು ಹಾಗೂ ಡಿಪ್ಲೊಮಾ ಕಾಲೇಜುಗಳ ಸ್ಥಾಪನೆ, ಸುಮಾರು 150 ಎಕರೆ ನೀರಾವರಿಗೆ ಅನುಕೂಲವಾಗುವ ಗ್ರಾಮದ ಕೆರೆಯ ಸಂಪೂರ್ಣ ಹೂಳೆತ್ತುವುದು, ರೈತರಿಗೆ ನಿರಂತರ 3 ಫೇಸ್ ವಿದ್ಯುತ್ ಸರಬರಾಜು, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಗುರುಮಠಕಲ್ ಪಟ್ಟಣದಿಂದ ಚಂಡರಕಿ-ಯಾನಗುಂದಿ ಮಾರ್ಗವಾಗಿ ತೆಲಂಗಾಣದ ಕೋಡಂಗಲ್ ನಗರಕ್ಕೆ ಬಸ್ ಸಂಪರ್ಕ ಕಲ್ಪಿಸುವುದು, ಚಂಡರಕಿಯ ಪುರಾತನ ದೇವಾಲಯಗಳ ಜೀರ್ಣೋದ್ಧಾರ, ಕೃಷಿ ಸಾಲ ಸಂಪೂರ್ಣ ಮನ್ನಾ, ಉಪ ರೈತ ಸಂಪರ್ಕ ಕೇಂದ್ರದ ಸ್ಥಾಪನೆ, ಗ್ರಾಮದಲ್ಲಿ ವಾಣಿಜ್ಯ ಬ್ಯಾಂಕ್ ಸ್ಥಾಪನೆ, ರಾಸುಗಳ ಚಿಕಿತ್ಸಾ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ವೈದ್ಯರ ನೇಮಕ ಮಾಡುವುದು, ನೇಕಾರರ ಸಮಸ್ಯೆಗಳಿಗೆ ಪರಿಹಾರ, ಚಂಡರಕಿ ಗ್ರಾಮದಲ್ಲಿ 2 ಎಕರೆ ಪ್ರದೇಶದಲ್ಲಿ ಸ್ಮಶಾನ ಮಂಜೂರು, ನಂಜುಡಪ್ಪ ವರದಿಯಂತೆ ಸೇಡಂ ತಾಲೂಕಿನ 30 ಹಳ್ಳಿಗಳನ್ನು ಗುರುಮಠಕಲ್ ತಾಲೂಕು ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪಟ್ಟಿ ಮಾಡುವಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್, ಜಿಪಂ ಸಿಇಒ ಕವಿತಾ ಎಸ್. ಮನ್ನಿಕೇರಿ, ಸಹಾಯಕ ಆಯುಕ್ತ ಶಂಕರಗೌಡ, ಎಸ್ಪಿ ಋಷಿಕೇಶ ಭಗವಾನ ಸೋನವಣೆ, ಗುರುಮಠಕಲ್ ತಹಶೀಲ್ದಾರ್ ಶ್ರೀಧರಾಚಾರ್ಯ, ಲಕ್ಷ್ಮಾರೆಡ್ಡಿ ಅನಪುರ, ಜಿಪಂ ಮಾಜಿ ಸದಸ್ಯ ರಘುನಾಥರೆಡ್ಡಿ, ಜಗದೀಶ ಕಲಾಲ್ ಸಭೆಯಲ್ಲಿದ್ದರು.