Advertisement

ಶಾಸಕರ‌ ಹೆಸರಿನಲ್ಲಿ ಮಗ ಶರಣಗೌಡ ದರ್ಬಾರ್‌: ದೂರು

04:41 PM Jun 10, 2019 | Naveen |

ಗುರುಮಠಕಲ್: ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಹೆಸರಿನಲ್ಲಿ ಮಗ ಶರಣಗೌಡ ಕಂದಕೂರ ಅವರು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಬ್ಲಾಕ್‌ ಅಧ್ಯಕ್ಷ ನರಸಿಂಹಲು ನಿರೇಟಿ ನೇತೖತ್ವದಲ್ಲಿ ಕಾರ್ಯಕರ್ತರು ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ದೂರು ನೀಡಿದರು.

Advertisement

ಬರ ಅಧ್ಯಯನದ ಬಳಿಕ ಗುರುಮಠಕಲ್ ಪಟ್ಟಣಕ್ಕೆ ಆಗಮಿಸಿದ್ದ ಯಡಿಯೂರಪ್ಪ ಅವರನ್ನು ಭೇಟಿಯಾದ ಕಾರ್ಯಕರ್ತರ ನಿಯೋಗ, ಮತಕ್ಷೇತ್ರದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಎಲ್ಲರನ್ನು ಶಾಸಕರ ಪುತ್ರ ನಿಯಂತ್ರಿಸುತ್ತಿದ್ದಾರೆ. ನಮ್ಮ ಕೆಲಸಗಳಾಗುತ್ತಿಲ್ಲ. ಶಾಸಕರ ಮಗ ದಿನ ಬೆಳಗಾದ್ರೆ ಅಧಿಕಾರಿಗಳನ್ನು ಕರೆಸಿಕೊಂಡು ಊರು ಊರು ತಿರುಗುತ್ತಿದ್ದಾರೆ ಎಂದು ಅಳಲುಕೊಂಡರು.

ಬಿಜೆಪಿ ಕಾರ್ಯಕರ್ತರ ಕೆಲಸ ಮಾಡದ್ದಂತೆ ಶರಣಗೌಡ ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರ ಕೆಲಸಗಳನ್ನು ಮಾಡಿಸುತ್ತಿದ್ದಾರೆ ಎಂದು ದೂರಿದರು. ಗ್ರಾಮ ವಾಸ್ತವ್ಯ ಗುರುಮಠಕಲ್ ಮತಕ್ಷೇತ್ರದ ಚಂಡರಕಿಗೆ ಜೂ. 21ರಂದು ಆಗಮಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರ್ಯಕ್ರಮಕ್ಕಾಗಿ ಅಧಿಕಾರಿಗಳನ್ನು ತಾವೆ ಸ್ವತಃ ಕರೆದುಕೊಂಡು ತಿರುಗಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಬಾಬೂರಾವ ಚಿಂಚನಸೂರ ಮಾತನಾಡಿ, ಗುರುಮಠಕಲ್ನಲ್ಲಿ ತಹಶೀಲ್ದಾರ್‌ ಇಲ್ಲ. ಪಿಎಸ್‌ಐ ಇಲ್ಲ. ಯಾರು ಇಲ್ಲದಂತೆ ಮಾಡಿ ಶಾಸಕರ ಮಗ ಶರಣಗೌಡ ಕಂದಕೂರ ಮತಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸುತ್ತಿದ್ದಾರೆ. ಇದನ್ನು ತಡೆಯುವವರು ಯಾರು ಇಲ್ಲವಾಗಿದೆ. ಇಲ್ಲಿ ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ ಎಂದು ದೂರಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಮಾತನಾಡಿ, ಶಾಸಕರು ಕ್ಷೇತ್ರದ ಜನರ ಪಾಲಿಗೆ ಇದ್ದೂ ಇಲ್ಲದ್ದಂತಾಗಿದ್ದಾರೆ. ಮಗನಿಗೆ ಅಧಿಕಾರ ನೀಡಿ ತಾವು ಸುಮ್ಮನೆ ಇದ್ದಾರೆ ಎಂದು ದೂರಿದರು.

Advertisement

ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ ಅವರು ಶಾಸಕರ ಹೆಸರಿನಲ್ಲಿ ಅಧಿಕಾರದ ದರ್ಪ ತೋರುತ್ತಿರುವ ಶರಣಗೌಡ ವಿರುದ್ಧ ಹೋರಾಟ ರೂಪಿಸಬೇಕು. ಗ್ರಾಮ ವಾಸ್ತವ್ಯಕ್ಕೆ ಬರುವ ಮುಖ್ಯಮಂತ್ರಿಗಳಿಗೆ ಘೇರಾವ್‌ ಹಾಕಿ ಶರಣಗೌಡ ಅಟ್ಟಹಾಸಕ್ಕೆ ಬ್ರೇಕ್‌ ಹಾಕಿ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಎಂದು ಜಿಲ್ಲಾಧ್ಯಕ್ಷರಿಗೆ ಸೂಚಿಸಿದರು.

ಸುರಪುರ ಶಾಸಕ ರಾಜುಗೌಡ, ಗುರುಮಠಕಲ್ ಮತಕ್ಷೇತ್ರದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಾಯಿಬಣ್ಣ ಬೋರಬಂಡಾ, ಜಿಲ್ಲಾ ಕಾರ್ಯದರ್ಶಿ ಶರಣಗೌಡ ಬಾಡಿಯಾಲ್, ಗುರುಮಠಕಲ್ ಬಿಜೆಪಿ ನಗರಾಧ್ಯಕ್ಷ ಚಂದುಲಾಲ್ ಚೌದ್ರಿ, ಮಲ್ಲೇಶಪ್ಪ ಬೇಲಿ, ವೆಂಕಟಪ್ಪ ಅವಾಂಗಪುರ, ಕೆ. ದೇವದಾಸ, ರಾಜೇಂದ್ರ ಕಲಾಲ, ಹಣ್ಮಯ್ಯ ಕಲಾಲ, ಭೀಮಶಪ್ಪ ಮಡಿವಾಳ ಚಂಡರಕಿ, ಉದಯಸಿಂಗ್‌ ರಜಪೂತ, ರಮೇಶ ತಾಂಡೂರಕರ್‌, ಸುರೇಶ ಬೂದಿ, ಯಾದಗಿರಿ ಎಪಿಎಂಸಿ ಅಧ್ಯಕ್ಷ ಶರಣಗೌಡ, ನರೇಶ ಗೊಂಗ್ಲೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next