Advertisement

ರೈಲು ಬೋಗಿ ಮಾದರಿಯಲ್ಲಿ ಶಾಲೆಗೆ ಬಣ

12:19 PM Jan 24, 2020 | Naveen |

ಗುರುಮಠಕಲ್‌: ನಿಲ್ದಾಣದಲ್ಲಿ ನಿಂತಿರುವ ರೈಲು ಬೋಗಿ ಮಾದರಿಯಂತೆ ಕಟ್ಟಡಕ್ಕೆ ವಿವಿಧ ಬಣ್ಣ ಬಳಿದು ಮಕ್ಕಳನ್ನು ಆಕರ್ಷಿಸಲು ಬೆಟ್ಟದಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ವಿನೂತನ ಪ್ರಯೋಗ ಮಾಡಲಾಗಿದೆ.

Advertisement

ಗುಡ್ಡಗಾಡು ಪ್ರದೇಶ ಹೊಂದಿರುವ ತಾಂಡಾದಲ್ಲಿ ಲಮಾಣಿ, ಕಬ್ಬಲಿಗ ಮತ್ತು ಮುಸ್ಲಿಂ ಜನಾಂಗದವರು ಮಾತ್ರ ಇದ್ದಾರೆ. ಒಟ್ಟು 800 ಜನಸಂಖ್ಯೆ ಇದೆ. ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಒಟ್ಟು 130 ಮಕ್ಕಳು ಓದುತ್ತಿದ್ದಾರೆ. ಖಾಸಗಿ ಶಾಲೆಗಳ ಸ್ಪರ್ಧೆ ಎದುರಿಸುವ ನಿಟ್ಟಿನಲ್ಲಿ ಏನಾದರೂ ಮಾಡಬೇಕು ಎಂದು ಮುಂದಾದ ಮುಖ್ಯ ಶಿಕ್ಷಕ ಬುಗ್ಗಪ್ಪ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದಾಗ ಉತ್ತರ ಭಾರತದ ಶಾಲೆಯೊಂದಕ್ಕೆ ಇಂತಹ ಪ್ರಯೋಗ ಮಾಡಿರುವುದು ಗೊತ್ತಾಯಿತು.

ಅದೇ ಪ್ರಯೋಗವನ್ನು ಇಲ್ಲಿ ಕಾರ್ಯರೂಪಕ್ಕೆ ತಂದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲೆ ಮುಂಭಾಗದ ಗೋಡೆಯನ್ನು ರೈಲು ಬೋಗಿಗಳ ಮಾದರಿಯಲ್ಲಿ ರೂಪಿಸಲಾಗಿದೆ. ಅದೇ ಬಣ್ಣ, ವಿನ್ಯಾಸ ನಿಜಕ್ಕೂ ರೈಲೆ ನಿಂತಿದೆಯೇನೋ ಎಂದು ಭಾಸವಾಗುತ್ತದೆ. ಇದು ವಿದ್ಯಾರ್ಥಿಗಳಿಗೂ ಮುದ ನೀಡುತ್ತಿದೆ.

ರೈಲು ಮಾದರಿಯಾಗಿಸಲು ಸುಮಾರು 25 ಸಾವಿರ ರೂ. ವೆಚ್ಚ ತಗುಲಿದೆ. ಇದನ್ನು
ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾಲ್ಕು ಶಿಕ್ಷಕರು ಭರಿಸಿದ್ದಾರೆ. ಮುಖ್ಯ ಶಿಕ್ಷಕ ಬುಗ್ಗಪ್ಪ, ಶಿಕ್ಷಕರಾದ ಮಂಜುನಾಥ, ಉಮೇಶ ಹಾಗೂ ಕಿಷ್ಟಪ್ಪ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದ ರಾಠೊಡ ಅವರ ಸಹಾಯದಿಂದ ಕೊಠಡಿಗೆ ರೈಲು ಮಾದರಿ ಚಿತ್ರ ಬಿಡಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲೂ ಯಶಸ್ವಿಯಾಗಿದ್ದಾರೆ.

ಸುಂದರ ಪರಿಸರ, ರೈಲು ಮಾದರಿಯಂತೆ ಕಾಣುವ ಸುಸಜ್ಜಿತ ಶಾಲಾ ಕಟ್ಟಡ, ಉತ್ತಮ
ಕಲಿಕಾ ವಾತವರಣ, ಪ್ರತಿಯೊಂದು ತರಗತಿಗೂ ಉತ್ತಮವಾದ ವಿದ್ಯುತ್‌ ಸಂಪರ್ಕ, ಬೆಳಕಿನ ವ್ಯವಸ್ಥೆ, ಪ್ರತಿ ತರಗತಿಗೆ ಎರಡು ಫ್ಯಾನ್‌ಗಳು, ಶಾಲೆ ಅವರಣದ ಕೈತೋಟದ ಪ್ರತಿ ದಿಕ್ಕಿನಲ್ಲಿ ವ್ಯವಸ್ಥೆ, ಉತ್ತಮ ಶೌಚಾಲಯ, ಕೈತೊಳೆಯುವ ತೊಟ್ಟಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ
ವಿಶೇಷವಾಗಿ ಕಲಿಕಾ ಚೇತನ ಕಾರ್ಯಕ್ರಮ ರಾಷ್ಟ್ರೀಯ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಉತ್ತಮ ವೇದಿಕೆ, ಕಾರ್ಯಕ್ರಮ ಹಮ್ಮಿಕೊಳ್ಳಲು ಧ್ವನಿವರ್ಧಕ, ನೂರಾರು ಪುಸ್ತಕಗಳಿದಿಂದ ಉತ್ತಮ ಗ್ರಂಥಾಲಯ ವ್ಯವಸ್ಥೆಯನ್ನು ಶಿಕ್ಷಕರು ಮಾಡಿದ್ದಾರೆ.

Advertisement

ನಲಿಕಲಿ ಯೋಜನೆಯಡಿ ಸುಂದರವಾಗಿ ಕಾಣುವ ಚಿತ್ರಪಟ ರಚಿಸಿದ್ದಾರೆ.
ಪ್ರತಿನಿತ್ಯ ಶೇ. 95ರಷ್ಟು ಹಾಜರಾತಿಯನ್ನು ಹೊಂದಿ ಮಾದರಿ ಶಾಲೆಯಾಗಿ ಬೆಟ್ಟದ ತಾಂಡಾ ಇತರ ಶಾಲೆಗೆ ಮಾದರಿಯಾಗಿದೆ. ಇಂತಹ ಉತ್ತಮವಾದ ಶಾಲೆಗೆ ವಿಜ್ಞಾನ ಮತ್ತು ಆಂಗ್ಲ ಶಿಕ್ಷಕರನ್ನು ನಿಯೋಜಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮೀಣ ಭಾಗದ ಶಾಲೆಗಳು ಮುಚ್ಚುವ ಹಂತ ತಲುಪುತ್ತಿರುವ ಈ ದಿನಗಳಲ್ಲಿ ಇಂತಹ ಪ್ರಯೋಗ ಮಕ್ಕಳಲ್ಲಿ ಉತ್ಸಾಹ ತುಂಬಿ ಕಲಿಕೆಯಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುತ್ತಿದೆ. ಅಲ್ಲದೇ, ಬೆಟ್ಟದ ಹಳ್ಳಿ ಶಾಲೆ ಆಕರ್ಷಣೆಗೊಳಗಾಗಿ ನನ್ನ ಕ್ಲಸ್ಟರ್‌ ವ್ಯಾಪ್ತಿಯಲ್ಲಿರುವ 13
ಶಾಲೆಗಳಲ್ಲಿಯೂ ಇಂತಹ ಮಾದರಿ ಶಾಲೆಯಾಗಿ ರೂಪಿಸಲು ನನಗೆ ಪ್ರೇರಣೆಯಾಗಿದೆ.
.ಸಿದ್ದಲಿಂಗ,ಕೊಂಕಲ್‌ ಸಿಆರ್‌ಪಿ

ಚೆನ್ನಕೇಶವುಲು ಗೌಡ

Advertisement

Udayavani is now on Telegram. Click here to join our channel and stay updated with the latest news.

Next