Advertisement

ಬೇನಾಮಿ ಜಮೀನಿಗಾಗಿ ಗುರೂಜಿ ಹತ್ಯೆ? 840 ಪುಟಗಳ ಜಾರ್ಜ್‌ ಶೀಟ್‌ ಸಲ್ಲಿಕೆ

05:08 PM Oct 08, 2022 | Team Udayavani |

ಹುಬ್ಬಳ್ಳಿ: ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಹತ್ಯೆಗೆ ಬೇನಾಮಿ ಆಸ್ತಿ ಮಾರಾಟ, ಮೈಮನಸ್ಸು, ನಿರ್ಲಕ್ಷé ಧೋರಣೆಯೇ ಪ್ರಮುಖ ಕಾರಣ. ಅದರಲ್ಲೂ ಗುರೂಜಿ ಸಂಸ್ಥೆಯ ಹಳೆಯ ನೌಕರನ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿದ್ದರು ಎಂಬ ಮಹತ್ವದ ಅಂಶಗಳು ಪೊಲೀಸರು ಸಲ್ಲಿಸಿದ ದೋಷಾರೋಪಣ ಪಟ್ಟಿಯ ದಾಖಲೆಗಳಿಂದ ಬೆಳಕಿಗೆ ಬಂದಿವೆ.

Advertisement

ಇಲ್ಲಿನ ಉಣಕಲ್ಲ-ಶ್ರೀನಗರ ಕ್ರಾಸ್‌ ಬಳಿಯ ಹೊಟೇಲ್‌ವೊಂದರ ಸ್ವಾಗತಕಾರರ ಲಾಬಿಯಲ್ಲಿ ಜು. 5ರಂದು ಹಾಡಹಗಲೇ ಚಂದ್ರಶೇಖರ ಗುರೂಜಿ ಭೀಕರ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದ ತನಿಖಾ ತಂಡ ನಗರದ ಜೆಎಂಎಫ್‌ ನ್ಯಾಯಾಲಯಕ್ಕೆ 840 ಪುಟಗಳ ಜಾರ್ಜ್‌ ಶೀಟ್‌ ಸಲ್ಲಿಕೆ ಮಾಡಿದೆ. ಇದರಲ್ಲಿ ಗುರೂಜಿ ಅವರು ಮಹಾಂತೇಶ ಶಿರೂರ ಮತ್ತು ಆತನ ಪತ್ನಿ ಹಾಗೂ ಮಂಜುನಾಥ ಮರೇವಾಡ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿರದೆ ಸಂಸ್ಥೆಯ ಮತ್ತೂಬ್ಬ ಮಾಜಿ ನೌಕರ ಬಸವರೆಡ್ಡಿ ಚೌಡರೆಡ್ಡಿ ಎಂಬುವನ ಹೆಸರಲ್ಲಿ ಮಾಡಿದ್ದರು ಎಂಬುದು ಬಯಲಾಗಿದೆ.

ಸಂಸ್ಥೆಯಿಂದ ತೆಗೆದು ಹಾಕಿದ ಮೇಲೆ ಕಂಪನಿ ಹಾಗೂ ಗುರೂಜಿ ಮೇಲೆ ಬಹಳಷ್ಟು ಕೋಪಗೊಂಡಿದ್ದ ಮಹಾಂತೇಶ ಮತ್ತು ಮಂಜುನಾಥ ತಮಗೆ ಬರಬೇಕಾದ ಬಾಕಿ ಹಣ, ವಿವಿಧ ಸೌಲಭ್ಯಗಳ ಹಣ ಸಕಾಲಕ್ಕೆ ಬರದಿರುವುದರಿಂದ ವಿಚಲಿತರಾಗಿದ್ದರು. ಅಲ್ಲದೆ ಇವರಿಬ್ಬರು ಆರಂಭಿಸಿದ್ದ ಕಿರಾಣಿ ಅಂಗಡಿ, ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲೂ ಕೈ ಸುಟ್ಟುಕೊಂಡಿದ್ದರು. ಜೊತೆಗೆ ಗುರೂಜಿ ಪದೇ ಪದೇ ಹಣಕ್ಕಾಗಿ ನೀಡುತ್ತಿದ್ದ ಕಿರುಕುಳ, ಸಮಸ್ಯೆಯಿಂದ ಕಂಗಾಲಾಗಿದ್ದರು. ಗುರೂಜಿ ನಗರದ ಗೋಕುಲ ರಸ್ತೆಯಲ್ಲಿ ನಿರ್ಮಿಸಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕಿಂಗ್‌ ಇಲ್ಲ, ಸೋಲಾರ್‌ ವ್ಯವಸ್ಥೆ ಸೇರಿದಂತೆ ಇನ್ನಿತರೆ ಮೂಲಸೌಲಭ್ಯಗಳಿಲ್ಲವೆಂದು ಗ್ರಾಹಕರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಈ ಪ್ರಕರಣ ಹಿಂಪಡೆಯುವಂತೆ ಗುರೂಜಿ ಈ ಇಬ್ಬರಿಗೆ ಕೊಡುತ್ತಿದ್ದ ಕಿರಿಕಿರಿಯಿಂದ ಬೇಸತ್ತು ಹೋಗಿದ್ದರು.

ಹೀಗಾಗಿ ಅವರ ವಿರುದ್ಧ ದ್ವೇಷ ಸಾಧಿಸುತ್ತ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು. ಅಲ್ಲದೇ ತಮ್ಮ ಜೊತೆಗೆ ಸಹೋದ್ಯೋಗಿಯಾಗಿ ಕೆಲಸ ಬಿಟ್ಟಿದ್ದ ಬಸವರೆಡ್ಡಿ ಹೆಸರಿನಲ್ಲಿ ಗೋಕುಲ ರಸ್ತೆಯಲ್ಲಿ 5 ಎಕರೆ 11 ಗುಂಟೆ ಜಮೀನನ್ನು ಗುರೂಜಿ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂಬುದನ್ನು ತಿಳಿದಿದ್ದ ಇವರು, ಬಸವರೆಡ್ಡಿ ಪುಸಲಾಯಿಸಿ ಆತನಿಂದ ತಮ್ಮ ಹೆಸರಿಗೆ ಜಮೀನನ್ನು ವರ್ಗಾಯಿಸಿಕೊಂಡು ಅದನ್ನು ಮಾರಾಟ ಮಾಡಿ, ಬಳಿಕ ಬಂದ ಹಣದಲ್ಲಿ ಮೂವರು ಸಮನಾಗಿ ಹಂಚಿಕೊಳ್ಳಲು ನಿರ್ಧರಿಸಿದ್ದರು. ಇದು ಗುರೂಜಿಗೆ ಗೊತ್ತಾಗಿ ಇದನ್ನು ಪ್ರಶ್ನಿಸಿ ಕಾನೂನು ಸಮರಕ್ಕೆ ಮುಂದಾಗಿದ್ದರು.

ಗುರೂಜಿ ಒಂದಲ್ಲ ಒಂದು ರೀತಿಯಲ್ಲಿ ಮಹಾಂತೇಶ ಮತ್ತು ಮಂಜುನಾಥನಿಗೆ ತೊಂದರೆ ನೀಡುತ್ತಿರುವುದರಿಂದ ಬಹಳಷ್ಟು ನೊಂದಿದ್ದ ಅವರು, ಗುರೂಜಿ ಕೊನೆಗಾಣಿಸಲು ಯೋಚಿಸಿದ್ದರು. ಜು. 1ರಂದು ತಮ್ಮ ಮೊಮ್ಮಗನ ಅಂತ್ಯಸಂಸ್ಕಾರಕ್ಕೆ ಹುಬ್ಬಳ್ಳಿಗೆ ಗುರೂಜಿ ಬಂದಿರುವುದನ್ನು ಅರಿತ ಅವರಿಬ್ಬರು ಭೇಟಿ ಮಾಡಿ ಮಾತನಾಡಿದ್ದಾರೆ. ಆಗ ಗುರೂಜಿ ಇದು ಸೂಕ್ತ ಸಮಯವಲ್ಲವೆಂದು ಹೇಳಿ ಕಳುಹಿಸಿದ್ದಾರೆ.

Advertisement

ಮಹಾಂತೇಶ ಮತ್ತು ಮಂಜುನಾಥನು ಗುರೂಜಿ ಹೇಗಾದರೂ ಮಾಡಿ ಮುಗಿಸಬೇಕೆಂದುಕೊಂಡು ನಗರದ ಹೊಸೂರ ಬಳಿಯ ಹೊಟೇಲ್‌ ನಲ್ಲಿ ಉಳಿದುಕೊಂಡು ಸ್ಕೆಚ್‌ ಹಾಕಿದ್ದರು. ಜು. 4ರಂದು ಗುರೂಜಿ ಉಳಿದುಕೊಂಡಿದ್ದ ಹೊಟೇಲ್‌ಗೆ ಹೋಗಿ ತಮ್ಮ ಕಷ್ಟಗಳನ್ನೆಲ್ಲ ಹೇಳಿಕೊಂಡಿದ್ದಾರೆ. ಅಲ್ಲದೆ ತಮಗೆ ಕಂಪನಿಯಿಂದ ಬರಬೇಕಾದ ಬಾಕಿ ಹಣ ಮತ್ತು ಅಪಾರ್ಟ್‌ಮೆಂಟ್‌ನಲ್ಲಿ ಸೌಲಭ್ಯ ಸರಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು 3-4 ತಾಸು ಚರ್ಚಿಸಿದ್ದಾರೆ. ಆದರೆ ಗುರೂಜಿ ಅವರ ಮಾತಿಗೆ ತಲೆಕೆಡಿಸಿಕೊಂಡಿರಲಿಲ್ಲ.ಇದರಿಂದಾಗಿ ಅವರಿಬ್ಬರು ತೀವ್ರ ನೊಂದಿದ್ದರು.

ಮರುದಿನ ಬೆಳಗ್ಗೆ ಗುರೂಜಿಗೆ ಕರೆ ಮಾಡಿ ದಾಖಲೆಗಳನ್ನು ತಂದು ಒಪ್ಪಿಸುತ್ತೇವೆ ಎಂದು ಭೇಟಿಗೆ ಅವಕಾಶ ಕೇಳಿದ್ದಾರೆ. ಇದಕ್ಕೆ ಗುರೂಜಿ ಸಹ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಅದರಂತೆ ಜು. 5ರಂದು ಅವರಿಬ್ಬರು ದಾಖಲೆ ಪತ್ರಗಳೊಂದಿಗೆ ಚಾಕು ತೆಗೆದುಕೊಂಡು ಬಂದು ಗುರೂಜಿ ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಹಂತಕರು ಕೊಲೆಗೆ ಬಳಸಿದ್ದ ಚಾಕು, ಹೊಟೇಲ್‌ನಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷಿಗಳು
ಸೇರಿದಂತೆ ಇನ್ನಿತರೆ ಮಹತ್ವದ ದಾಖಲೆಗಳನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ನಮೂದಿಸಲಾಗಿದೆ ಎಂದು ತಿಳಿದುಬಂದಿದೆ.

ಮಹಾಂತೇಶ-ವನಜಾಕ್ಷಿ ಹೆಸರಿನಲ್ಲಿ ಮಾಡಿರಲಿಲ್ಲ ಬೇನಾಮಿ ಆಸ್ತಿ
ಚಂದ್ರಶೇಖರ ಗುರೂಜಿ ಅವರು ತಮ್ಮ ಸಂಸ್ಥೆಯ ಉದ್ಯೋಗಿಗಳಾಗಿದ್ದ ಮಹಾಂತೇಶ ಶಿರೂರ ಹೆಸರಿಗಾಗಲಿ ಇಲ್ಲವೆ ಅವರ ಪತ್ನಿ ವನಜಾಕ್ಷಿ ಹೆಸರಿನಲ್ಲಿ ಯಾವುದೇ ರೀತಿ ಬೇನಾಮಿ ಆಸ್ತಿ ಮಾಡಿರಲಿಲ್ಲ ಎಂಬ ಅಂಶವು ತನಿಖಾಧಿಕಾರಿಗಳ ವಿಚಾರಣೆ ವೇಳೆ ಬಹಿರಂಗಗೊಂಡಿದೆ ಎನ್ನಲಾಗಿದೆ. ಆಸ್ತಿ ವಿಷಯವಾಗಿ ಹಾಗೂ ಜಮೀನಿಗೆ ಸಂಬಂಧಿಸಿ ನಡೆದ ಹಣಕಾಸಿನ ವ್ಯವಹಾರ ಸೇರಿದಂತೆ ಪೆನ್ಶನ್‌ ಕೊಡುವುದು, ಮನೆ ಕಟ್ಟಿಸಿಕೊಡುವುದು, ಫಂಡ್‌ ಕೊಡುವುದು, ಗ್ರಾಹಕರ ವೇದಿಕೆಯಲ್ಲಿನ ಪ್ರಕರಣ ಹಿಂಪಡೆಯುವುದು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಗುರೂಜಿ ಜೊತೆ ಮಹಾಂತೇಶ ಮತ್ತು ಮಂಜುನಾಥ ಚರ್ಚಿಸಿದ್ದರು. ಇದಕ್ಕೆ ಗುರೂಜಿ ಒಪ್ಪಿಕೊಳ್ಳದಿದ್ದಾಗ ಅವರಿಬ್ಬರು ಗುರೂಜಿ ವಿರುದ್ಧ ಸಿಟ್ಟಾಗಿದ್ದರು ಎಂದು ದೋಷಾರೋಪಣ ಪಟ್ಟಿಯಲ್ಲಿ ನಮೂದಿಸಲಾಗಿದೆ.

ಗುರೂಜಿ ಹತ್ಯೆಗೆ ಸಂಬಂಧಿಸಿ ತನಿಖಾಧಿಕಾರಿಗಳು ಒಟ್ಟು 85 ಸಾಕ್ಷಿದಾರರನ್ನು ಪರಿಗಣಿಸಿದ್ದು, ಇವರಲ್ಲಿ ಪ್ರಮುಖವಾಗಿ ಗುರೂಜಿ ಅಣ್ಣನ ಮಗ ಸಂಜಯ ಅಂಗಡಿ, ಕಾಂಗ್ರೆಸ್‌ ಮುಖಂಡ ದೀಪಕ ಚಿಂಚೋರೆ ಸೇರಿದಂತೆ ಮೊದಲಾದವರಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ 712 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ ಎಂದು ಆರೋಪಿಗಳ ಪರ ವಕೀಲ ಶಿವಾನಂದ ವಡ್ಡಟ್ಟಿ “ಉದಯವಾಣಿ’ಗೆ ತಿಳಿಸಿದರು.

*ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next