ಹುಬ್ಬಳ್ಳಿ: ಕೇವಲ 300 ಕುಟುಂಬಗಳಿರುವ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮ ಸುಮಾರು 250ಕ್ಕೂ ಹೆಚ್ಚು ಶಿಕ್ಷಕರನ್ನು ಹೊಂದುವ ಮೂಲಕ ಗಮನ ಸೆಳೆದಿದೆ.
ಶಿಕ್ಷಕರ ಗ್ರಾಮ, ಗುರುಗ್ರಾಮ ಎಂದೇ ಕರೆಯಿಸಿಕೊಳ್ಳುವ ಈ ಗ್ರಾಮದ ಶಿಕ್ಷಕರು ಯಾದಗಿರಿ,ರಾಯಚೂರ, ಕೊಪ್ಪಳ, ಕಲಬುರಗಿ , ದಾವಣಗೆರೆ, ಬೆಂಗಳೂರು, ಹಾವೇರಿ, ಧಾರವಾಡ, ವಿಜಯಪುರ,ಚಿಕ್ಕೋಡಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ .ರೊಟ್ಟಿಗವಾಡದ ಕೆಲ ಮನೆಗಳಲ್ಲಿ ಕನಿಷ್ಟ ಪಕ್ಷ ಇಬ್ಬರು, ಮೂವರು ಶಿಕ್ಷಕರಿದ್ದು, ಗ್ರಾಮದ ಸುತ್ತಮುತ್ತಲಿನ 10 ಕಿಮೀ ವ್ಯಾಪ್ತಿಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.
ರೊಟ್ಟಿಗವಾಡದಲ್ಲೂ ಇದೇ ಗ್ರಾಮದ ಶಿಕ್ಷಕರೇ ಸೇವೆಸಲ್ಲಿಸುತ್ತಿದ್ದಾರೆ. ಗ್ರಾಮದ ಮುಲ್ಲಾರವರ ಕುಟುಂಬದಲ್ಲಿ 8ಜನ ಶಿಕ್ಷಕರು, ಈರಗಾರ ಕುಟುಂಬದಲ್ಲಿ 7 ಜನ ಶಿಕ್ಷಕರು,ಕಲಬಾರ ಕುಟುಂಬದಲ್ಲಿ 5 ಜನ ಶಿಕ್ಷಕರು, ಮುಳಗುಂದ ಕುಟುಂಬದಲ್ಲಿ 4 ಜನ ಶಿಕ್ಷಕರು, ಹನುಮಣ್ಣವರ ಕುಟುಂಬದಲ್ಲಿ 7 ಜನ ಶಿಕ್ಷಕರಿದ್ದಾರೆ.
ಶಿಕ್ಷಕರ ಮಕ್ಕಳು ಶಿಕ್ಷಕ ವೃತ್ತಿಯ ಜತೆಗೆ ಅನ್ಯ ಉದ್ಯೋಗದತ್ತ ವಾಲಿದ್ದಾರೆ.ಪೊಲೀಸರು, ಚಾಲಕರು, ನಿರ್ವಾಹಕರು, ಗ್ರಾಮಲೆಕ್ಕಾಧಿಕಾರಿಗಳು ಸೇರಿದಂತೆ ವಿವಿಧ ಹುದ್ದೆಗಳಲ್ಲಿದ್ದಾರೆ.ಇನ್ನು ಕೆಲ ಕುಟುಂಬಗಳಲ್ಲಿ ಶಿಕ್ಷಕ ವೃತ್ತಿಯನ್ನೇ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಮಕ್ಕಳು ಡಿಎಡ್, ಬಿಎಡ್, ಎಂಎ ಬಿಎಡ್ ಶಿಕ್ಷಣ ಮುಂದುವರಿಸಿದ್ದಾರೆ. ಧಾರವಾಡ ಸಾಹಿತಿಗಳ ತವರೂರು ಎಂದು ಕರೆಸಿಕೊಂಡರೆ, ಜಿಲ್ಲೆಯ ರೊಟ್ಟಿಗವಾಡ ಗ್ರಾಮ ಗುರುಗ್ರಾಮವೆಂಬ ಖ್ಯಾತಿ ಪಡೆದಿದೆ.
ಬಸವರಾಜ ಹೂಗಾರ