Advertisement

Guru Purnima 2024: ಅಂಧಕಾರ ದೂರಮಾಡಿ ಬಾಳುಬೆಳಗಿಸುವ ಗುರು

04:44 PM Aug 06, 2024 | Team Udayavani |

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವಹಃ

Advertisement

ಗುರು ಸಾಕ್ಷಾತ್‌ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ

ಭಾರತೀಯ ಪರಂಪರೆಯಲ್ಲಿ ಈ ಶ್ಲೋಕವು ಅತ್ಯಂತ ಪವಿತ್ರವಾದ ಸ್ಥಾನವನ್ನು ಹೊಂದಿದೆ. ಒಂದೇ ಸಾಲಿನಲ್ಲಿ ಈ ಶ್ಲೋಕದ ಅರ್ಥ ಹೇಳುವುದಾದರೆ ಗುರು ದೇವರಿಗಿಂತಲೂ ಶ್ರೇಷ್ಠರಾದವರು ಎಂದು. ತಂದೆ, ತಾಯಿಯಂತೆ ನಮ್ಮನ್ನು ಸಲಹುವ ಮತ್ತೂಬ್ಬ ಬಂಧುವೆಂದರೆ ಅದು ಗುರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇವರು ನಮ್ಮ ತಪ್ಪನ್ನು ತಿದ್ದಿ ನಮಗೆ ಬುದ್ದಿ ಹೇಳಿ ಬದುಕಿಗೆ ಪೂರಕವಾದ ಸರಿ ಹಾದಿಯನ್ನು ತೋರಿಸುವವರು. ಅಂಧಕಾರವನ್ನು ದೂರಗೊಳಿಸಿ ತನ್ನ ಶಿಷ್ಯರಿಗೆ ವಿದ್ಯೆ ಎಂಬ ಬೆಳಕು ಚೆಲ್ಲುವ ದಾರಿದೀಪವೇ ಗುರು. ಇಂತಹ ಗುರುವನ್ನು ಸ್ಮರಿಸಿ ಗೌರವಿಸುವ ದಿನವೇ ಗುರು ಪೂರ್ಣಿಮೆ.

ದೇಶದ ವಿವಿಧೆಡೆ ಆಚರಿಸಲಾಗುವ ಗುರು ಪೂರ್ಣಿಮೆಯು ಚಾಂದ್ರಮಾನದ ಆಷಾಢ ಮಾಸದ ಪೌರ್ಣಿಮೆಯ ದಿನದಂದು ಬರುತ್ತದೆ. ಈ ದಿನವು ಬಹಳ ಮಹತ್ವವನ್ನು ಹೊಂದಿದ್ದು, ವೇದ, ಪುರಾಣ, ಧರ್ಮಗ್ರಂಥಗಳಲ್ಲೂ ನಾವು ಗುರು ಪೂರ್ಣಿಮೆ ಕುರಿತ ಉಲ್ಲೇಖಗಳನ್ನು ಕಾಣಬಹುದು. ಈ ದಿನದಂದು ಜನರು ವಿಶೇಷವಾಗಿ ತಮ್ಮ ಗುರುಗಳನ್ನು ಸ್ಮರಿಸಿ ಪ್ರೀತಿಪೂರ್ವಕವಾದ ಕೃತಜ್ಞತೆಯನ್ನು ಸಲ್ಲಿಸಲಾಗುತ್ತದೆ. ನಮ್ಮ ದೇಶದ ಜನರು ಗುರುವನ್ನು ಪೂಜ್ಯನೀಯ ಸ್ಥಾನದಲ್ಲಿರಿಸಿ ಕಾಣುತ್ತಾರೆ ಎಂಬುದಕ್ಕೆ ಇದೊಂದು ಉತ್ತಮ ಉದಾಹಣೆ ಎಂದೇ ಹೇಳಬಹುದು.

ಗುರು ಪೂರ್ಣಿಮೆಯ ಹಿನ್ನೆಲೆ

Advertisement

ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬವೂ ತನ್ನದೇ ಆದ ಪಾವಿತ್ರ್ಯತೆಯನ್ನು ಹೊಂದಿವೆ. ಈ ಪೈಕಿ ಗುರು ಪೂರ್ಣಿಮೆಯೂ ಒಂದು. ಪುರಾಣಗಳ ಪ್ರಕಾರ ಗುರು ಪೂರ್ಣಿಮೆಯನ್ನು ಗುರು ವೇದವ್ಯಾಸರ ಜನ್ಮದಿನದ ಪ್ರಯುಕ್ತವಾಗಿ ಆಚರಿಸಲಾಗುತ್ತದೆ ಎನ್ನಲಾಗುತ್ತದೆ. ವೇದವ್ಯಾಸರು ಋಷಿವರ್ಯರಲ್ಲಿ ಅತ್ಯುತ್ಕೃಷ್ಟರೆನಿಸಿಕೊಂಡವರು, ಮಹಾಭಾರತವನ್ನು ಬರೆದವರು. ಇವರು ವೇದಗ್ರಂಥಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ ಎಂದು ನಾಲ್ಕು ಭಾಗಗಳಾಗಿ ಪ್ರತ್ಯೇಕಿಸುವುದರ ಮೂಲಕ ವೇದವ್ಯಾಸರೆಂಬ ಹೆಸರಿನಲ್ಲಿ ಪ್ರಸಿದ್ಧರಾದರು.

ಇವರು ಬ್ರಹ್ಮಸೂತ್ರವನ್ನು ಇದೇ ಪೂರ್ಣಿಮೆಯಂದು ಪ್ರಾರಂಭಿಸಿದರು. ಆದ್ದರಿಂದ ಇವರನ್ನು ಜಗತ್ತಿನಲ್ಲಿರುವ ಅತ್ಯುತ್ತಮ ಸ್ಥಾನವಾದ ಗುರುವಿನ ಸ್ಥಾನಕ್ಕೆ ಹೋಲಿಸಲಾಗುತ್ತದೆ . ಗುರು ಪೂರ್ಣಿಮೆಯಂದು ಪೂಜೆ ಮಾಡುವುದರ ಮೂಲಕ ಋಷಿ ವೇದವ್ಯಾಸರನ್ನು ಗೌರವಿಸಲಾಗುತ್ತದೆ. ಗುರು ಪೂರ್ಣಿಮೆಯ ಮತ್ತೂಂದು ಹೆಸರೇ ವ್ಯಾಸ ಪೌರ್ಣಮಿ.

ಮತ್ತೂಂದು ಪುರಾಣದ ಉಲ್ಲೇಖದ ಪ್ರಕಾರ ದೇವಾದಿ ದೇವತೆಗಳ ಮಹಾದೇವನಾದ ಶಿವನು ಸಪ್ತ ಋಷಿಗಳಿಗೆ ಯೋಗಜ್ಞಾನವನ್ನು ಕರುಣಿಸಿ ಗುರುವಿನ ಸ್ಥಾನವನ್ನು ಪಡೆದದ್ದುಇದೇ ದಿನದಂದು ಎಂಬ ನಂಬಿಕೆಯಿದೆ. ಆದ್ದರಿಂದ ಶಿವನನ್ನು ಈ ದಿನದಂದು ಗುರುವಿನ ಸಾಲಿನಲ್ಲಿರಿಸಿ ಭಕ್ತಿಯಿಂದ ಪೂಜಿಸುವುದೂ ಇದೆ.

ಬೌದ್ಧ ಧರ್ಮದವರಿಗೂ ಗುರು ಪೌರ್ಣಿಮೆಯು ಬಹಳ ಮಹತ್ವವಾದುದು. ಗೌತಮ ಬುದ್ಧರು ತಮ್ಮ ಜ್ಞಾನೋದಯದ ಅನಂತರ ತಾವು ಸಾರಾನಾಥದಲ್ಲಿ ಇದೇ ಪೂರ್ಣಿಮೆಯ ದಿನದಂದು ಮೊದಲ ಉಪದೇಶ ನೀಡಿದರು. ಆದ್ದರಿಂದ ಇಂದಿಗೂ ಗುರು ಪೂರ್ಣಿಮೆಯನ್ನು ಬೌದ್ಧ ಧರ್ಮದವರು ಬಹಳ ಭಕ್ತಿಯಿಂದ ಆಚರಿಸುತ್ತಾರೆ.

ಗುರು ಪೂರ್ಣಿಮೆಯನ್ನು ಹಿಂದೂ ಧರ್ಮದವರು ಮಾತ್ರವಲ್ಲದೆ ಬೌದ್ಧ, ಜೈನ ಧರ್ಮದವರೂ ಆಚರಿಸುತ್ತಾರೆ. ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರರು ಕೈವಲ್ಯ ಪಡೆದ ಅನಂತರ ಇಂದ್ರಭೂತಿ ಗೌತಮ ಎಂಬ ಗಣಧರರನ್ನು ಶಿಷ್ಯರನ್ನಾಗಿ ಸ್ವೀಕರಿಸಿದ್ದು ಇದೇ ಪೂರ್ಣಿಮೆಯ ದಿನದಂದು. ಆದ್ದರಿಂದ ಜೈನ ಧರ್ಮದವರು ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ.

ಗುರು ಎಂದರೆ ಕತ್ತಲು ಅಥವಾ ಅಜ್ಞಾನವನ್ನು ದೂರಮಾಡುವವರು. ನಮ್ಮ ಜೀವನದಲ್ಲಿ ತಂದೆ, ತಾಯಿ ಮತ್ತು ಗುರು ನಮ್ಮ ಬದುಕನ್ನು ರಚಿಸುವವರು. ಈ ಮೂವರು ನಮ್ಮ ಜೀವನದಲ್ಲಿನ ಪ್ರತೀ ಸೋಲು- ಗೆಲುವಿನಲ್ಲೂ ಜತೆಯಾಗಿ ನಿಂತು ಭರವಸೆಯನ್ನು ತುಂಬುತ್ತಾ ಹರಸುತ್ತಾರೆ. ತಂದೆ ತಾಯಿ ನಮ್ಮ ಅಗತ್ಯತೆಗಳನ್ನು ಪೂರೈಸುವುದರ ಜತೆಗೆ ನಮ್ಮ ಜೀವನಕ್ಕೆ ಬೇಕಾದಂತಹ ಮೌಲ್ಯ, ಸಂಸ್ಕಾರವನ್ನು ನಮ್ಮಲ್ಲಿ ಬೆಳೆಸುತ್ತಾರೆ. ಅದೇ ರೀತಿ ಗುರು ನಮಗೆ ಶಿಕ್ಷಣದ ಪಾಠವನ್ನು ಬೋಧಿಸುವುದರ ಜತೆಗೆ ಜೀವನಕ್ಕೆ ಆವಶ್ಯಕವಾದ ನೀತಿ ಪಾಠವನ್ನು ಬೋಧಿಸುತ್ತಾರೆ.

ಜೀವನದಲ್ಲಿ ನಾವು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಅದರಲ್ಲಿ ಗುರುಗಳ ಪಾತ್ರ ಇದ್ದೇ ಇರುತ್ತದೆ. ನಾವು ಎಂದಿಗೂ ಗುರುಗಳನ್ನು ಮರೆಯಬಾರದು. ಅವರನ್ನು ಮೊದಲು ಗೌರವಿಸಿ, ಅವರಿಗೆ ಮೊದಲ ಆದ್ಯತೆಯನ್ನು ನೀಡಬೇಕಾದುದು ನಮ್ಮ ಕರ್ತವ್ಯ.

ಹಿಂದೆ ಗುರು ಮುಂದೆ ಗುರಿ ಎಂಬ ಮಾತಿಗೆ ಬದ್ಧರಾಗಿ ಇಂದಿಗೂ ನನ್ನ ಜೀವನದಲ್ಲಿ ನನ್ನ ಗುರಿಯನ್ನು ತಲುಪಲು ಸಹಕರಿಸುತ್ತಿರುವಂತಹ ಪ್ರತಿಯೊಬ್ಬ ಗುರುವಿಗೂ ಗುರು ಪೂರ್ಣಿಮೆಯ ಶುಭಾಶಯಗಳು.

ವಿದ್ಯಾ

ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next