ರಾಮದುರ್ಗ: ಗುರು-ಶಿಷ್ಯರದು ಅವಿನಾಭಾವ ಸಂಬಂಧವಾಗಿದೆ ಎಂದು ಬಾಗೋಜಿಕೊಪ್ಪದ ಶ್ರೀ ಘನಲಿಂಗ ಚಕ್ರವರ್ತಿ ಡಾ| ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊರವಲಯದ ವಿಶ್ವೇಶರಯ್ಯ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಸ್ಟೇಟ್ ಸಂ. ಪಪೂ ಕಾಲೇಜು 2000-01 ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಹಾಗೂ ಸುಮಧುರ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನಾಳೆ ಉನ್ನತ ಸ್ಥಾನವನ್ನು ಅಲಂಕರಿಸಿದಾಗಲೂ ಕಲಿಸಿದ ಶಿಕ್ಷರನ್ನು ಮರೆಯುವಂತಾಗಬಾರದು. ಅಂದಾಗ ಮಾತ್ರ ಗುರು-ಶಿಷ್ಯರ ಪ್ರೀತಿ ಕಾಣಲು ಸಾಧ್ಯ. ಎಲ್ಲಿಯೋ ಇರುವಂತಹ ವಿದ್ಯಾರ್ಥಿಗಳು ಇಂದು ಒಟ್ಟಾಗಿ ಕೂಡಿಕೊಂಡು ತಮಗೆ ಅಕ್ಷರ ಜ್ಞಾನ ನೀಡಿದ ಗುರುಗಳನ್ನು ಗೌರವಿಸುತ್ತಿರುವದು ಅತ್ಯಂತ ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಎಸ್.ವೈ. ಲಂಗೋಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಮಯ ಪ್ರಜ್ಞೆಯನ್ನು ಬೆಳೆಸಿಕೊಂಡು ಕಾಯಕದಲ್ಲಿ ಅದನ್ನು ಅಳವಡಿಸಿಕೊಂಡಾಗ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.
ಮುಗಳಿಹಾಳದ ಶಿಕ್ಷಕ ಐ.ಜಿ. ಸುಬ್ಟಾಪೂರಮಠ ಮಾತನಾಡಿ, ಹಿಂದೆ ಇರುವಂತಹ ಗುರು-ಶಿಷ್ಯರ ಸಂಬಂಧ ಇಂದು ಕಾಣುವುದು ಅಪರೂಪವಾಗಿದೆ. ಎಷ್ಟೇ ಎತ್ತರಕ್ಕೆ ಬೆಳೆದರೂ ನಮಗೆ ಜ್ಞಾನ ನೀಡಿದ ಶಿಕ್ಷರನ್ನು ಗೌರವಿಸುವ ಮನೋ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಎಸ್.ಜಿ. ಪುರಾಣಿಕ, ರಾಜೇಶ್ವರಿ ಜಂಗಿನವರ, ಆರ್.ಎಂ. ಪಾಟೀಲ, ವಿ.ಎಸ್. ಅಂಗಡಿ, ಶೀಲಾ ಪಟ್ಟಣಶೆಟ್ಟಿ, ಪಿ.ಟಿ. ನಾರಾಯಣಕರ, ಯು.ಎಚ್. ಮಾಚಕನೂರ, ಇರ್ಪಾನ್ ಟಕ್ಕಳಗಿ, ಎಸ್.ಬಿ. ಹೊರಗಿನವರ, ಎಸ್.ಎ. ಜಕಾತಿ, ಪಿ.ಎ. ಬಾಣದ, ಎಸ್.ಬಿ. ಕಳಸಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.