ನಟ ಶರಣ್ ಅಭಿನಯದ ಬಹುನಿರೀಕ್ಷಿತ “ಗುರು ಶಿಷ್ಯರು’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಇದೇ ಸೆಪ್ಟೆಂಬರ್ 23 ರಂದು ತೆರೆಗೆ ಬರಲಿದ್ದು, ಚಿತ್ರದ ಟ್ರೇಲರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೆಲರ್ ಹಿಟ್‌ಲಿಸ್ಟ್ ಸೇರಿದ್ದು, ಶರಣ್ ಕೆರಿಯರ್‌ನಲ್ಲಿ ವಿಭಿನ್ನ ಸಿನಿಮಾವಾಗಿ ನಿಲ್ಲುವ ಸೂಚನೆ ನೀಡಿದೆ.
ಚಿತ್ರದಲ್ಲಿ ಶರಣ್ 80ರ ದಶಕದ ಪಿಟಿ ಮಾಸ್ಟರ್ ಪಾತ್ರದಲ್ಲಿ ನಟಿಸಿದ್ದು, ಶರಣ್‌ಗೆ ಶಿಷ್ಯರಾಗಿ 12 ಮಕ್ಕಳು ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಆಟವಾದ ಖೋ ಖೋ ಹಿನ್ನೆಲೆ ಚಿತ್ರದಲ್ಲಿ ಹೈಲೆಟ್ ಆಗಿದ್ದು, ಇಂದಿನ ಪೀಳಿಗೆಗೆ ಖೋ ಖೋ ನೆನಪಿಸುವ ಒಂದು ಪ್ರಯತ್ನ ಎಂದು ಹೇಳಬಹುದು. 80-90ರ ದಶಕದ ಮಕ್ಕಳಿಗೆ ಚಿರಪರಿಚಿತವಾದ ಖೋ ಖೋ, ಇಂದಿನ ಕಾಲದ ಮಕ್ಕಳು ಆ ಆಟದ ಹೆಸರನ್ನು ಕೇಳಿರಲಿಕ್ಕಿಲ್ಲ. ಅಂಥಹ ಅಪ್ಪಟ ಗ್ರಾಮೀಣ ಕ್ರೀಡೆಯನ್ನು “ಗುರು ಶಿಷ್ಯರು’ ಚಿತ್ರದ ಮೂಲಕ ತೆರೆ ಮೇಲೆ ತರಲಾಗುತ್ತಿದೆ.
ಶರಣ್ ಅಂದಮೆಲೆ ಕಾಮಿಡಿಗೆ ಕೊರತೆಯಿಲ್ಲ . ಅಂತೆಯೇ ಟ್ರೇಲರ್‌ನಲ್ಲಿ ಕಾಣುವಂತೆ ಶರಣ್ ಕಾಮಿಡಿ ಪ್ರೇಕ್ಷಕರನ್ನು ರಂಜಿಸಲಿದ್ದು, ಕಾಮಿಡಿ ಜೊತೆ ಜೊತೆಗೆ ಒಂದು ಲವ್ ಟ್ರ್ಯಾಕ್ ಕೂಡ ಚಿತ್ರದಲ್ಲಿದೆ ಎಂಬುದನ್ನು ಟ್ರೇಲರ್‌ನಲ್ಲಿ ಹೇಳಲಾಗಿದೆ. ಕೇವಲ ಪಿಟಿ ಮಾಸ್ಟರ್ ಆಗಿ ಬಂದ ವ್ಯಕ್ತಿ ಹಳ್ಳಿ ಜನರ ಪಾಲಿಗೆ ರಕ್ಷಕನಾಗುತ್ತಾನೋ ಅಥವಾ ಶಿಕ್ಷಕನಾಗುತ್ತಾನೋ ಎನ್ನುವ ಕುತೂಹಲದ ಘಟ್ಟದೊಂದಿಗೆ ಟ್ರೇಲರ್ ಕೊನೆಗೊಳ್ಳುತ್ತದೆ.
ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಹಾಲು ಮಾರುವ ಹುಡುಗಿಯಾಗಿ ಸೂಜಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಒಟ್ಟು 12 ಮಕ್ಕಳು ಕಾಣಿಸಿಕೊಂಡಿದ್ದು, ಇದರಲ್ಲಿ ಆರು ಮಂದಿ ಸೆಲೆಬ್ರೆಟಿಗಳ ಮಕ್ಕಳು ನಟಿಸಿದ್ದಾರೆ.
“ಲಡ್ಡು ಸಿನಿಮಾ ಹೌಸ್’ ಬ್ಯಾನರ್ ಅಡಿಯಲ್ಲಿ ಶರಣ್ ಕೃಷ್ಣಾ ನಿರ್ಮಾಣ, ತರುಣ್ ಸುಧೀರ್ ಸಹ ನಿರ್ಮಾಣವಿರುವ ಚಿತ್ರಕ್ಕೆ ಜಗದೀಶ್ ಕೆ ಹಂಪಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶರಣ್‌ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದು, ದತ್ತಣ, ಸುರೇಶ್ ಹೇಬ್ಳಿಕರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಬೇಡಿಕೆ ಹಾಗೂ ಬಿಝಿ ಸಂಭಾಷಣೆಕಾರ ಮಾಸ್ತಿ ಅವರ ಸಂಭಾಷಣೆ ಚಿತ್ರಕ್ಕಿದ್ದು, ಟ್ರೇಲರ್‌ನಲ್ಲಿರುವ ಸಂಭಾಷಣೆ ಗಮನ ಸೆಳೆಯುತ್ತಿದೆ.
ಬಿ.ಅಜನೀಶ್ ಲೋಕ್‌ನಾಥ್ ಸಂಗೀತ, ಆರೂರು ಸುಧಾಕರ್ ಶೆಟ್ಟಿ ಛಾಯಾಗ್ರಹಣವಿದೆ.
ಅದ್ಧೂರಿ ಟ್ರೇಲರ್ ರಿಲೀಸ್ : ಇತ್ತೀಚೆಗೆ ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆಯಿತು. ಹಿರಿಯ ನಟ ದ್ವಾರಕೀಶ್, ಉಮೇಶ್, ನಟರಾದ “ದುನಿಯಾ’ ವಿಜಯ್, ಪ್ರಜ್ವಲ್ ದೇವರಾಜ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಇದೇ ವೇಳೆ ಚಿತ್ರದಲ್ಲಿ ನಟಿಸಿದ 12 ಮಕ್ಕಳು ಹಾಗೂ ಅವರ ಪಾಲಕರು ಕೂಡಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.