ಕನ್ನಡ ಚಿತ್ರರಂಗದಲ್ಲಿ ಪ್ರತಿ ಹಬ್ಬಕ್ಕೂ ಪ್ರಮುಖ ಆದ್ಯತೆ ಇದ್ದೇ ಇರುತ್ತೆ. ಅದು ಗಣೇಶ ಹಬ್ಬವಿರಲಿ, ದೀಪಾವಳಿ ಇರಲಿ, ದಸರಾ ಹಬ್ಬವಿರಲಿ ಹಾಗೆಯೇ ಯುಗಾದಿ ಹಬ್ಬವೇ ಇರಲಿ. ಚಿತ್ರಗಳಲ್ಲಿ ಹಬ್ಬದ ಸಂಕೇತ ಎಂಬಂತೆ ಹಾಡುಗಳನ್ನು ಕಟ್ಟಿಕೊಡುವ ಪ್ರಯತ್ನ ಮೊದಲಿನಿಂದಲೂ ನಡೆದಿದೆ. ಈಗಲೂ ನಡೆಯುತ್ತಲೇ ಇದೆ.
1963 ರಲ್ಲಿ ಬಿಡುಗಡೆಯಾದ “ಕುಲವಧು’ ಚಿತ್ರದಲ್ಲಿ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರು ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ..’ ಎಂಬ ಹಾಡನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದರು. ಈ ಹಾಡು ಇಂದಿಗೂ ಜನಪ್ರಿಯ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಈಗ ಇದೇ ಹಾಡನ್ನು ಹೊಸ ಸಂಗೀತ ಸ್ಪರ್ಶದೊಂದಿಗೆ ಅದರಲ್ಲೂ ಯುರೋಪಿಯನ್ ಕೋರಸ್‌ನೊಂದಿಗೆ ವಿನೂತನ ರಾಗ ಬಳಸಿ ಪುನಃ ಕೇಳುವಂತೆ ಮಾಡಲಾಗಿದೆ. ಅಂದಹಾಗೆ, ಇಂಥದ್ದೊಂದು ಪ್ರಯತ್ನ ಮಾಡಿರೋದು ಸಂಗೀತ ನಿರ್ದೇಶಕ ಸಾಗರ್ ಗುರುರಾಜ್.
ಈ “ಯುಗಾದಿ’ ಹಾಡಿಗೆ ವಿನೂತನ ರಾಗ ಸಂಯೋಜಿಸಿ ತನ್ನ ತಂದೆ ಸೌಂಡ್ ಆಫ್ ಮ್ಯೂಸಿಕ್‌ನ ಗುರುರಾಜ್ ಅವರಿಗೆ ಕೊಡುಗೆ ನೀಡಿದ್ದಾರೆ. “ಕುಲವಧು’ ಚಿತ್ರದಲ್ಲಿರುವ ಹಾಡಿನ ಸಾಹಿತ್ಯಕ್ಕೆ ಈಗಿನ ಪೀಳಿಗೆ ಕೂಡ ಇಷ್ಟಪಡುವಂತೆ ರಾಕ್ ಸ್ಪರ್ಶದೊಂದಿಗೆ ತಬಲ ಮತ್ತು ಯುರೋಪಿಯನ್ ಕೋರಸ್ ಜೊತೆ ಹೊಸ ರಾಗದಲ್ಲಿ ಹಾಡನ್ನು ಸಿದ್ಧಪಡಿಸಲಾಗಿದೆ.
ಇನ್ನೊಂದು ಹೊಸ ಸುದ್ದಿಯೆಂದರೆ, ಈ ಹಾಡಿಗೆ ಚಿತ್ರೀಕರಣವನ್ನೂ ನಡೆಸಲಾಗಿದೆ. ಸೌಂಡ್ ಆಫ್ ಮ್ಯೂಸಿಕ್‌ನ ಗುರುರಾಜ್ ಮತ್ತು ಜ್ಯೋತಿ ರವಿಪ್ರಕಾಶ್ ಅವರು ಹಾಡುವುದರ ಜೊತೆಗೆ ಅಭಿನಯವನ್ನೂ ಮಾಡಿದ್ದಾರೆ. ರಾಜ್ಯದಲ್ಲಿರುವ ಸುಂದರ ಪ್ರಮುಖ ತಾಣಗಳನ್ನು ಆಯ್ಕೆ ಮಾಡಿಕೊಂಡು, ಗ್ರೀನ್‌ಮ್ಯಾಟ್‌ನಲ್ಲಿ ಚಿತ್ರೀಕರಿಸಿ, ಗ್ರಾಫಿಕ್ಸ್‌ನೊಂದಿಗೆ ಹಾಡು ಚಂದಗೊಳಿಸಲಾಗಿದೆ.
ಈ ಹಾಡಿಗೆ ಸುಮಾರು 1.50 ಲಕ್ಷ ರು.ವೆಚ್ಚ ತಗುಲಿದ್ದು, ಮುಂದಿನ ದಿನಗಳಲ್ಲಿ ಯುಗಾದಿ ಹಬ್ಬಕ್ಕೆ ಸಂಬಂಧಿಸಿದಂತೆ ವಿ.ವಿ.ಗೋಪಾಲ್, ಹಲ್ಲಗೆರೆ ಶಂಕರ್ ಮತ್ತು ಸುಮನ್‌ದೇಸಾಯಿ ಅವರು ಬರೆದಿರುವ ಮೂರು ಗೀತೆಗಳಿಗೆ ನರಸಿಂಹನಾಯಕ್ ಸಂಗೀತ ಸಂಯೋಜಿಸಿದ್ದು, ಆ ಹಾಡು ಕೂಡ ಹೊರ ಬರಲಿದೆ ಎಂಬುದು ಗುರುರಾಜ್ ಮಾತು. ಈ ಹಾಡನ್ನು ಈಗ ಯುಟ್ಯೂಬ್‌ನಲ್ಲಿ ವೀಕ್ಷಿಸಬಹುದಾಗಿದೆ.