ಧಾರವಾಡ: ಕೆಲಗೇರಿಯ ಶ್ರೀ ಶಿರಡಿ ಸಾಯಿ ಬಾಬಾ ಸಂಸ್ಥೆಯ ವತಿಯಿಂದ ಸಾಯಿಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಜು. 14ರಿಂದ 16ರ ವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಿರಡಿ ಸಾಯಿ ಬಾಬಾ ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿರಡಿ ಸಾಯಿಬಾಬಾ ಮಂದಿರದಂತೆ 33 ಅಡಿ ಎತ್ತರದ ಅನ್ನಬ್ರಹ್ಮ ಮೂರ್ತಿಯನ್ನು ಮಂದಿರದ ಆವರಣದಲ್ಲಿ ನಿರ್ಮಿಸಲಾಗಿದೆ. ಇದು ಭಾರತದ ಅತಿ ಎತ್ತರದ ಮೂರ್ತಿಯಾಗಿದೆ. ಅಹ್ಮದ್‌ನಗರದ ಇಂಜಿನಿಯರ್ ಸಂತೋಷ ಶಂಕರ್ ರೋಹಕಲೆ ತಯಾರಿಸಿದ್ದಾರೆ. ಜು. 14ರಂದು ಬೆಳಗ್ಗೆ 10 ಗಂಟೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಧರ್ಮದರ್ಶಿ ಶ್ರೀ ಭೀಮೇಶ್ಚರಿ ಜೋಶಿ ಸಾನ್ನಿಧ್ಯದಲ್ಲಿ ಅನ್ನಬ್ರಹ್ಮ ಮೂರ್ತಿ ಅನಾವರಣ ಸಮಾರಂಭ ಜರುಗಲಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮೂರ್ತಿ ಅನಾವರಣಗೊಳಿಸುವರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಆಗಮಿಸುವರು. ಮಹಾದಾನಿಗಳನ್ನು ಸನ್ಮಾನಿಸಲಾಗುವುದು. ಅಂದು ಮಧ್ಯಾಹ್ನ 12:30ರಿಂದ ಪ್ರಸಾದ ಸೇವೆ ಜರುಗಲಿದೆ ಎಂದು ತಿಳಿಸಿದರು.
ಜು. 16ರಂದು 6:30 ಗಂಟೆಗೆ ಮಹಾದ್ವಾರದ ಉದ್ಘಾಟನಾ ಸಮಾರಂಭ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಮಾಜಿ ಸಚಿವ ಬಸವರಾಜ ಹೊರಟ್ಟಿ ಮಹಾದ್ವಾರ ಉದ್ಘಾಟಿಸಲಿದ್ದು, ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿದಂತೆ ಗಣ್ಯರು ಆಗಮಿಸುವರು. ಸಂಜೆ 7:30ರಿಂದ ಧಾರವಾಡದ ನಾಟ್ಯ ಸ್ಫೂರ್ತಿ ಕಲ್ಚರಲ್ ಅಕಾಡೆಮಿ ಮತ್ತು ಶಾಂತಲಾ ನೃತ್ಯಾಲಯ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 8:30ರಿಂದ ಪಲ್ಲಕ್ಕಿ ಸೇವೆ, ರಾತ್ರಿ 10 ಗಂಟೆಗೆ ಶೇಜಾರತಿ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಉದಯ ಶೆಟ್ಟಿ, ಕಾರ್ಯದರ್ಶಿ ಗುರುಪಾದಯ್ಯ ಹೊಂಗಲಮಠ, ನಾರಾಯಣ ಕದಂ, ಕಿರಣ ಶಾ, ಸುರೇಶ ಹಂಪಿಹೊಳಿ, ಟಿ.ಟಿ. ಚವ್ಹಾಣ, ಭಾಸ್ಕರ್ ರಾಯ್ಕರ್, ಅಮೃತ ನರೇಂದ್ರ ಇದ್ದರು.