ಮಠ, ಎದ್ದೇಳು ಮಂಜನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಗುರುಪ್ರಸಾದ್ ಸದ್ಯ ಕೋವಿಡ್ 19 ಲಾಕ್ ಡೌನ್ ಮಧ್ಯೆಯೇ ಕಾಮಿಡಿ ಕಥಾಹಂದರದ ಕಥೆಯೊಂದನ್ನು ತೆರೆಗೆ ತರುವ ಪ್ಲಾನ್ ನಲ್ಲಿದ್ದಾರೆ.
ಹೌದು, ಸದ್ಯ ಹೊರಗಡೆ ಎಲ್ಲೂ ಹೋಗದಂತ ಪರಿಸ್ಥಿತಿ ಇರುವುದರಿಂದ, ಇಂಥ ಸಂದರ್ಭದಲ್ಲಿ ಸಂಪೂರ್ಣ ಇನ್ ಡೋರ್‌ನಲ್ಲಿಯೇ, ಸಾಮಾಜಿಕ ಅಂತರ ಕಾಪಾಡಿಕೊಂಡು ಅತಿ ಕಡಿಮೆ ಕಲಾವಿದರು, ತಂತ್ರಜ್ಞರನ್ನು ಬಳಸಿಕೊಂಡು ಚಿತ್ರೀಕರಣ ಆರಂಭಿಸುವ ಯೋಚನೆಯಲ್ಲಿದ್ದಾರಂತೆ ಗುರುಪ್ರಸಾದ್.
ಈಗಾಗಲೇ ಕಥೆಯೊಂದನ್ನು ಪೂರ್ಣಗೊಳಿಸಿದ್ದು, ಚಿತ್ರದ ಬಗ್ಗೆ ನಿರ್ಮಾಪಕರೊಂದಿಗೆ ಒಪ್ಪಂದ ಬಾಕಿಯಿದೆಯಂತೆ. ಅಂದಹಾಗೆ, ಗುರುಪ್ರಸಾದ್ ಈ ಚಿತ್ರವನ್ನು ತಮ್ಮ ಅಧಿಕೃತ ಆಪ್‌ನಲ್ಲಿ ಬಿಡುಗಡೆ ಮಾಡಲಿದ್ದು, ಈ ಇದರ ವಿನ್ಯಾಸ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ಕೊಡುತ್ತಾರೆ.
ಒಟ್ಟಾರೆ ಲಾಕ್ ಡೌನ್ ಮಧ್ಯೆ ಕಾಮಿಡಿ ಚಿತ್ರವೊಂದರ ತಯಾರಿಕೆಯಲ್ಲಿ ನಿರ್ದೇಶಕ ಗುರುಪ್ರಸಾದ್ ತೊಡಗಿಸಿಕೊಂಡಿರುವುದು ಸಿನಿಪ್ರಿಯರಲ್ಲಿ ಒಂದಷ್ಟು ಕುತೂಹಲ ಮೂಡಿಸಿದ್ದು, ಚಿತ್ರ ಹೇಗಿರಲಿದೆ ಅನ್ನೊ ಕುತೂಹಲಕ್ಕೆ ಚಿತ್ರ ಬಿಡುಗಡೆಯಾದ ಮೇಲಷ್ಟೇ ಉತ್ತರ ಸಿಗಲಿದೆ.
ಈ ಬಗ್ಗೆ ಮಾತನಾಡುವ ಗುರುಪ್ರಸಾದ್, ಒಬ್ಬ ರಂಜಕನಾಗಿ ಯಾವುದೇ ಕಲಾವಿದರ ಅಗತ್ಯವಿಲ್ಲ, ನಾನೇ ಎಲ್ಲರನ್ನು ನಗಿಸುತ್ತೇನೆ. ಪ್ರತಿದಿನ ಫೇಸ್ ಬುಕ್ ಲೈವ್ ಮೂಲಕ ಜನರನ್ನು ತಲುಪುತ್ತಿದ್ದೇನೆ. ಪರಿಸ್ಥಿತಿ ಸುಧಾರಿಸಿದರೆ ನಟ ಜಗ್ಗೇಶ್ ಅವರೊಂದಿಗೆ ರಂಗನಾಯಕ ಚಿತ್ರವನ್ನು ಮುಂದುವರೆಸುತ್ತೇನೆ. ಆದರೆ ಅಲ್ಲಿಯವರೆಗೆ ಲಾಕ್ ಡೌನ್ ಅವಧಿಯಲ್ಲಿ ಒಂದು ಸಿನಿಮಾ ಮಾಡಬಹು ಅನ್ನೊದನ್ನ ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದು ಅಪರೂಪದ ಪ್ರಯೋಗವಾಗಿದೆ ಎಂದು ಹೇಳುತ್ತಾರೆ.
ಚಿತ್ರದ ಕಥೆಯನ್ನು ಬಗ್ಗೆ ಗುಟ್ಟು ಬಿಟ್ಟುಕೊಡಲು ನಿರಾಕರಿಸಿರುವ ಗುರುಪ್ರಸಾದ್, ಇದು ಎರಡೂವರೆ ಗಂಟೆಗಳ ಹಾಸ್ಯದ ರಣದೌತಣ ಉಣಬಡಿಸಲಿದೆ. ಸೀಮಿತ ಬಜೆಟ್ ನಲ್ಲಿ ಚಿತ್ರವನ್ನು ತಯಾರಿಸಲಿದ್ದು, ಬಿಡುಗಡೆಯ ತಂತ್ರಗಳು ಕುತೂಹಲಕವಾಗಿರಲಿವೆ. ವೀಕ್ಷಕರು 100 ರೂ. ಪಾವತಿಸುವ ಮೂಲಕ ಆಪ್ ನಲ್ಲಿ ಸಿನಿಮಾವನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸುತ್ತಾರೆ.