ಬಾಲ್ಯದ ಬಡತನದ ಬದುಕು, ಶ್ರಮ ಪೂರ್ಣ ಜೀವನ, ಯೌವನದಲ್ಲಿ ತಂದೆಯ ಜೊತೆ ಸೇರಿ ಯಕ್ಷಗಾನ ಅಧ್ಯಯನ-ಅಭ್ಯಾಸ-ಸಂಘಟನೆ, ಆಯುರ್ವೇದ ಔಷಧ ತಯಾರಿಕೆ ಹಾಗೂ ವೈದ್ಯವೃತ್ತಿ ಹೀಗೆ ವಿವಿಧ ರಂಗಗಳಲ್ಲಿ ಜೀವನ ವೃತ್ತಿಯ ಶೋಧನೆ- ಸಾಧನೆ ಮಾಡಿ ಕೊನೆಗೆ ಯಕ್ಷಗಾನ ಮದ್ದಳೆವಾದಕರಾಗಿ ಸಿದ್ಧಿಯ ಔನ್ನತ್ಯ ಹೊಂದಿದುದು ಗೋಪಾಲರಾಯರ ಜೀವನ ಗಾಥೆಯ ಅತೀ ಸಂಕ್ಷಿಪ್ತ ಹಂತಗಳು. ಯಕ್ಷಗಾನ ಪ್ರವೇಶ ಮಾಡಿದಾಗ ವೇಷಧಾರಿಯಾಗಿ ಮತ್ತು ಸಂಘಟಕರಾಗಿ ಸೋತರೂ, ಬಳಿಕ ಮದ್ದಳೆಗಾರರಾಗಿ ಜಯದ ವಿಜೃಂಭಣೆ ರಸಿಕರಿಗೆ ಕಾಣಿಸಿದವರು. ಆ ಕಾಲದಲ್ಲಿ ಕೆಲವರಲ್ಲಿ ಮಾತ್ರವಿದ್ದ ಮದ್ದಳೆ ವಾದನದ ವಿಶಿಷ್ಟಕ್ರಮ-ಗಂಟುರುಳಿಕೆ-ಗೋಪಾಲರಾಯರ ವಾದನ ಶೈಲಿಯ ಪರಿಣತ ವೈಶಿಷ್ಟವೆನಿಸಿತು. ಕುಂಜಾಲು ಶೇಷಗಿರಿ ಭಾಗವತ, ಜಾನುವಾರುಕಟ್ಟೆ ಕಾಮತ್, ಗುಂಡ್ಮಿ ನಾವಡ ಮೊದಲಾದ ಭಾಗವತರಿಗೆ ಮದ್ದಳೆಗಾರರಾಗಿ, ಗಣಪತಿ ಪ್ರಭು, ರಾಮಪ್ಪ ಅಡಿಗ, ಹಾರಾಡಿ ರಾಮ, ವೀರಭದ್ರನಾಯಕ್, ಸಾಮಗ ಸಹೋದರರು ಮೊದಲಾದವರನ್ನು ರಂಗದಲ್ಲಿ ಕುಣಿಸಿದವರು.ಪರಂಪರೆಯ ಪ್ರಸಿದ್ಧ ಕಲಾವಿದರ ಒಡನಾಟದಿಂದ ಯಕ್ಷಗಾನದ ಸಾಂಪ್ರದಾಯಕತೆಯ ಪ್ರಭುತ್ವ ಮತ್ತು ಶಿವರಾಮ ಕಾರಂತ, ಕೆ.ಕೆ ಹೆಬ್ಟಾರ್, ಮುಂತಾದವರ ಜೊತೆಗೆ ಕಂಡುಕೊಂಡ ಪ್ರಯೋಗಾತ್ಮಕ ಚಿಂತನಶೀಲತೆ ಇವರೆಡರ ಸಮ್ಮಿಲನ ಗೋಪಾಲರಾಯರ ಕಲಾ ಸಂಪನ್ಮೂಲತೆಗೆ ಶೈಕ್ಷಣಿಕ ಮಹತ್ವ ನೀಡಿದೆ. ಸುಮಾರು ಮೂವತ್ತು ವರ್ಷಗಳಲ್ಲಿ ಪೆರ್ಡೂರು, ಅಮೃತೇಶ್ವರಿ, ಮಂದಾರ್ತಿ, ಹಿರಿಯಡ್ಕ ಮೊದಲಾದ ಮೇಳಗಳಲ್ಲಿ ದುಡಿದ ಬಳಿಕ ವೃತ್ತಿ ಮೇಳಕ್ಕೆ ವಿದಾಯ ಹೇಳಿ ಮದ್ದಳೆ ವಾದನ ವೃತ್ತಿಗೆ, ತನ್ನ ಕಲಾಭಿವ್ಯಕ್ತಿಗೆ ಅನ್ಯಮಾರ್ಗವನ್ನು ಕಂಡು ಹಿಡಿದರು. ವಿಚಾರ ಸಂಕಿರಣ, ಕಾರ್ಯಾಗಾರ, ಯಕ್ಷಗಾನ ಸಮ್ಮೇಳನ ಇತ್ಯಾದಿಗಳಲ್ಲಿ ಭಾಗವಹಿಸುತ್ತ ಕಲಾಚಿಂತಕರ ಗಮನ ಸೆಳೆದರು. ಅಮೆರಿಕಾದ ಮಾರ್ತಾ ಆಶrನ್, ಪೀಟರ್. ಜೆ. ಕ್ಲಾಸ್ ಮೊದಲಾದವರನ್ನು ಯಕ್ಷಗಾನ ಕಲಾವಿದರನ್ನಾಗಿ ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಶಿಷ್ಯೆ ಮಾರ್ತಾರಿಂದಾಗಿ ಅಮೇರಿಕಾ, ಜರ್ಮನಿ ಮೊದಲಾದ ದೇಶಗಳ ಯುನಿರ್ವಸಿಟಿಗಳಲ್ಲಿ ಪ್ರದರ್ಶನ- ಪ್ರಾತ್ಯಕ್ಷಿಕೆ ಕೊಟ್ಟುದು ಇವರ ಸಾಧನಾ ಪಥದ ಒಂದು ಮುಖ್ಯ ಮೈಲಿಗಲ್ಲು.
ಯಕ್ಷಗಾನಕ್ಕೆ ಸಲ್ಲಿಸಿದ ಇವರ ಹಲವು ಕೊಡುಗೆಗಳಲ್ಲಿ ಏರುಮದ್ದಳೆ ಎನ್ನುವುದು ಪ್ರಮುಖವಾದುದು. ಈ ಚಿಕ್ಕ ಮದ್ದಳೆಯನ್ನು ತಯಾರಿಸಿ, ಇಂದು ಅರ್ಧರಾತ್ರಿಯ ಬಳಿಕ ಆಟದಲ್ಲಿ ಏರುಮದ್ದಳೆಯ ಬಳಕೆಗೆ ಇವರೇ ಮೊದಲಿಗರು. ಹವ್ಯಾಸಿ ತಂಡವಾಗಿರುವ ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿಯ ಆರಂಭದಲ್ಲಿ ಕಲಾವಿದರ ಹೆಜ್ಜೆಗಾರಿಕೆ ಹಾಗೂ ಅರ್ಥಗಾರಿಕೆಗೆ ಇವರೇ ಗುರುಗಳು. ಹಿರಿಯಡ್ಕದ ಕಾಜಾರಗುತ್ತು ದಶಾವತಾರ ಮಂಡಳಿ ಸ್ಥಾಪಿಸಿ ಯಕ್ಷಗಾನದ ಪಾರಂಪರಿಕ ಶೈಲಿಯನ್ನು ಅಲ್ಲಿಯ ಹವ್ಯಾಸಿಗಳಿಗೆ ಧಾರೆ ಎರೆದಿದ್ದಾರೆ. ಕರ್ನಾಟಕ ಸರಕಾರದ ಜಾನಪದ ಶ್ರೀ ಪ್ರಶಸ್ತಿ ಮಾತ್ರವಲ್ಲದೆ ಹಲವಾರು ಪ್ರಶಸ್ತಿಗಳು ತಾವಾಗಿಯೇ ಅರಸಿಕೊಂಡು ಬಂದಿವೆ. ಎ.14ರಂದು ಅಂಬಲಪಾಡಿಯಲ್ಲಿ ಗುರು ಹಿರಿಯಡ್ಕ ಗೋಪಾಲರಾಯರಿಗೆ ಅರ್ವತ್ತರ ಸಮ್ಮಾನವಿದೆ.
ಪ್ರೊ|ಎಂ.ಎಲ್.ಸಾಮಗ