Advertisement
ಶಿಕ್ಷಕಕರ ಸಂಘಗಳಲ್ಲಿನ ಹೊಂದಾಣಿಕೆಯ ಕೊರತೆ, ಅಧಿಕಾರಿ ವರ್ಗದಲ್ಲಿನ ಅಸಡ್ಡೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯ ಫಲವೆನ್ನುವಂತೆ ಶಿಕ್ಷಕರ ಭವನ ಕಾಮಗಾರಿಯು ಮೂರು, ನಾಲ್ಕು ಬಾರಿ ಶಿಲಾನ್ಯಾಸ ನೆರವೇರಿಸಿಕೊಂಡರೂ ಆರಂಭವಾಗದ ಸ್ಥಿತಿಯಲ್ಲಿಯೇ ಇರುವಂತಾಗಿದೆ. ಶಿಕ್ಷಕರ ಭವನಕ್ಕೆ ಗುರುತಿಸಿರುವ ನಿವೇಶನವು ಕಸ ಹಾಕುವ ಜಾಗವಾಗಿ ಪರಿಣಮಿಸಿದೆ.
Related Articles
Advertisement
ದೇಣಿಗೆ ಸಂಗ್ರಹ: ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈ ಸಮಿತಿಯ ಒಂದೇ ಒಂದು ಸಭೆಯನ್ನು ಕರೆದಿಲ್ಲ. 2005 ರಲ್ಲಿ ಶಿಕ್ಷಕರ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ, ಶಿಕ್ಷಕರ ದೇಣಿಗೆಯಾಗಿ ಎಷ್ಟು ಹಣ ಸಂಗ್ರಹವಾಗುತ್ತದೋ ಅದಕ್ಕೆ ಸರಿಸಮನಾದ ಮೊತ್ತವನ್ನು ತಮ್ಮ ಸಂಸದರ ನಿಧಿಯಿಂದ ನೀಡಲಾಗುವುದೆಂದು ಪ್ರಕಟಿಸಿದ್ದರು.
ಇದೇ ಅವಧಿಯಲ್ಲಿ ಸುಮಾರು 1500 ಶಿಕ್ಷಕರಿಂದ ಸುಮಾರು 1.60 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದರು. ಇದೀಗ ಅದರ ಮೊತ್ತವು ಬಡ್ಡಿ ಸೇರಿ ಸುಮಾರು 3 ಲಕ್ಷ ರೂಪಾಯಿಗಳಾಗಿದೆ. ಆದರೆ ಈ ಹಣಕ್ಕೆ ಜವಾಬ್ದಾರರಾರು ಎನ್ನುವುದೇ ತಿಳಿಯುತ್ತಿಲ್ಲ.
ನೆರವು ಸಾಧ್ಯವಾಗಲಿಲ್ಲ: ವಿಧಾನಪರಿಷತ್ ಸದಸ್ಯರು, ಶಾಸಕರು ಶಿಕ್ಷಕರ ಭವನಕ್ಕೆ ತಮ್ಮ ನಿಧಿಯಿಂದ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದರು. ಆಗಿನ ನಗರಸಭೆ ಅಧ್ಯಕ್ಷರಾಗಿದ್ದ ಸಿ.ರಘುರಾಂ ಶಿಕ್ಷಕರ ಭವನಕ್ಕೆ ಗುರುತಿಸಿರುವ ನಿವೇಶನಕ್ಕೆ ಸಂಬಂಧಪಟ್ಟಂತೆ ಇರುವ ಖಾತೆ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದ್ದರು.
ಹಾಲಿ ಶಾಸಕ ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಸಹ ಶಿಕ್ಷಕರ ಭವನಕ್ಕೆ ತಮ್ಮ ನೆರವು ನೀಡುವುದಾಗಿ ಪ್ರಕಟಿಸಿದ್ದರು. ಆದರೆ, ಶಿಕ್ಷಕರ ಭವನ ನಿರ್ಮಾಣ ಕಾರ್ಯ ಆರಂಭವಾಗದ ಕಾರಣದಿಂದ ಈ ಹಣವನ್ನು ಹಾಗೂ ಜನಪ್ರತಿನಿಧಿಗಳ ನೆರವನ್ನು ಪಡೆದುಕೊಳ್ಳಲು ಸಾಧ್ಯವಾಗಲೇ ಇಲ್ಲ.
ಆಸಕ್ತಿ ತೋರದ ಶಿಕ್ಷಕರ ಸಂಘ: ಶಿಕ್ಷಕರ ಸಂಘಗಳಲ್ಲಿನ ಗುಂಪುಗಾರಿಕೆ, ಶಿಕ್ಷಕರ ದಿನಾಚರಣೆ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಬಣದ ಹೆಸರು ಇರಬೇಕೆಂಬ ವಿಚಾರಕ್ಕೆ ಶಿಕ್ಷಕ ಪ್ರತಿನಿಧಿಗಳು ನೀಡಿದಷ್ಟು ಗಮನವನ್ನು ಶಿಕ್ಷಕರ ಭವನ ಕಾಮಗಾರಿ ಆರಂಭಿಸಲು ನೀಡಿದ್ದರೆ ಈ ವೇಳೆಗಾಗಲೇ ಶಿಕ್ಷಕರ ಭವನ ಪೂರ್ಣಗೊಳ್ಳುತ್ತಿತ್ತು ಎಂಬ ಭಾವನ ಶಿಕ್ಷಕರ ವಲಯದಲ್ಲಿದೆ.
ಈಗಲೂ ಅಧಿಕಾರಿಗಳು ಮತ್ತು ಶಿಕ್ಷಕರ ಸಂಘಗಳು ಒಗ್ಗೂಡಿ ಶಿಕ್ಷಕರ ಭವನ ಕಾಮಗಾರಿಯನ್ನು ಆರಂಭಿಸಿದರೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಶಿಕ್ಷಕರು ತಮ್ಮ ಒಂದು ದಿನದ ವೇತನವನ್ನು ಅಂದರೆ ಸುಮಾರು 1 ಕೋಟಿ ರೂಗಳಿಗೂ ಅಧಿಕ ಹಣವನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿಕೊಡಲು ಸಿದ್ಧವಿದ್ದಾರೆ. ಆದರೆ, ಶಿಕ್ಷಕರ ಸಂಘದ ಪದಾಧಿಕಾರಿಗಳು ಶಿಕ್ಷಕಕರ ಭವನ ನಿರ್ಮಾಣಕ್ಕೆ ಆದ್ಯತೆ ನೀಡದೆ ಕಾಲಹರಣ ಮಾಡುತ್ತಿರುವುದರಿಂದ ಶಿಕ್ಷಕರ ಭವನಕ್ಕೆ ಗುರುತಿಸಿರುವ ನಿವೇಶನವು ಕಸ ಹಾಕಲು ಬಳಕೆಯಾಗುತ್ತಿದೆ.
ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಶಿಕ್ಷಕರ ಭವನದಲ್ಲಿಯೇ ಶಿಕ್ಷಕರ ದಿನಾಚರಣೆ ನಡೆಯುತ್ತಿದ್ದರೆ, ಕೋಲಾರ ಜಿಲ್ಲೆಯಲ್ಲಿ ಮಾತ್ರ ಬಾಡಿಗೆ ಕಟ್ಟಡದಲ್ಲಿ ಶಿಕ್ಷಕರು ಕುಳಿತುಕೊಳ್ಳಲು ಜಾಗವಿಲ್ಲದ ಪರಿಸ್ಥಿತಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುವದುಸ್ಥಿತಿ ಇದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕ ಸ್ವಾಮಿ ಹಾಗೂ ಶಿಕ್ಷಕರ ಸಂಘದ ಎಲ್ಲಾ ಬಣದ ಮುಖಂಡರು ಸಭೆ ಸೇರಿ ಶಿಕ್ಷಕರ ಭವನ ನಿರ್ಮಾಣ ಕಾರ್ಯದ ಬಗ್ಗೆ ಗಮನ ಹರಿಸಿದ್ದೇ ಆದಲ್ಲಿ ಮುಂದಿನ ವರ್ಷವಾದರೂ ಶಿಕ್ಷಕರ ಭವನದಲ್ಲಿಯೇ ಶಿಕ್ಷಕರ ದಿನಾಚರಣೆ ನಡೆಸಬಹುದಾಗಿದೆ.