Advertisement

ಅತ್ಯಾಚಾರ ಪ್ರಕರಣ: 2037ರ ವರೆಗೂ ರಾಂ ರಹೀಂಗೆ ಜೈಲೇ ಗತಿ

06:05 AM Aug 29, 2017 | |

ಚಂಡೀಗಢ: ಅತ್ಯಾಚಾರ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾಗಿದ್ದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ಸ್ವಘೋಷಿತ ದೇವಮಾನವ ಗುರ್ಮೀತ್‌ ರಾಂ ರಹೀಂ ಸಿಂಗ್‌ಗೆ ರೋಹrಕ್‌ನ ವಿಶೇಷ ಸಿಬಿಐ ಕೋರ್ಟ್‌ ಸೋಮವಾರ ಬರೋಬ್ಬರಿ 20 ವರ್ಷಗಳ ಕಠಿನ ಜೈಲು ಶಿಕ್ಷೆ ನೀಡಿ ತೀರ್ಪಿತ್ತಿದೆ.

Advertisement

2002ರಲ್ಲಿ ಆಶ್ರಮದ ಸಾಧ್ವಿಗಳ ಮೇಲೆ ನಡೆದ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ತಲಾ 10 ವರ್ಷದಂತೆ ಒಟ್ಟು 20 ವರ್ಷ ಜೈಲು ಶಿಕ್ಷೆ ಹಾಗೂ ಎರಡೂ ಕೇಸುಗಳಲ್ಲಿ ತಲಾ 15 ಲಕ್ಷ ರೂ.ಗಳಂತೆ ದಂಡ ವಿಧಿಸಲಾಗಿದೆ. ದಂಡದ ಪೈಕಿ ತಲಾ 14 ಲಕ್ಷ ರೂ.ಗಳು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಯರಿಗೆ ನೀಡಬೇಕು ಎಂದು ನ್ಯಾ| ಜಗದೀಪ್ ಸಿಂಗ್ ಆದೇಶಿಸಿದ್ದಾರೆ. 

ಕಳೆದ ಶುಕ್ರವಾರವೇ ರಾಂ ರಹೀಂ ದೋಷಿ ಎಂದು ಕೋರ್ಟ್‌ ಘೋಷಿಸಿದ್ದ ಹಿನ್ನೆಲೆಯಲ್ಲಿ ಹರಿಯಾಣದಾದ್ಯಂತ ನಡೆದ ಹಿಂಸಾಚಾರದಲ್ಲಿ 32 ಮಂದಿ ಅಸುನೀಗಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ಜಡ್ಜ್ ಜಗದೀಪ್ ಸಿಂಗ್ ಅವರು ಹೆಲಿಕಾಪ್ಟರ್‌ ಮೂಲಕ ರೋಹrಕ್‌ಗೆ ಆಗಮಿಸಿ, ಸುನೈರಾ ಜೈಲಿನಲ್ಲೇ ನಿರ್ಮಿಸಲಾಗಿದ್ದ ತಾತ್ಕಾಲಿಕ ಕೋರ್ಟ್‌ ಕೊಠಡಿಯಲ್ಲಿ ಶಿಕ್ಷೆ ಘೋಷಿಸಿದರು. ಶಿಕ್ಷೆ ಘೋಷಣೆಗೆ ಮುನ್ನ ನಡೆದ ವಿಚಾರಣೆ ವೇಳೆ, ಬಾಬಾ ಪರ ವಕೀಲರು, “ರಾಂ ರಹೀಂ ಹಲವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದು, ಹಲವು ಬೆಂಬಲಿಗರನ್ನೂ ಹೊಂದಿದ್ದಾರೆ. ಅಲ್ಲದೇ, ಅವರ ಆರೋಗ್ಯವೂ ಸರಿಯಿಲ್ಲ. ಹೀಗಾಗಿ, ಶಿಕ್ಷೆಯ ಪ್ರಮಾಣವನ್ನು 7 ವರ್ಷಕ್ಕೆ ಸೀಮಿತಗೊಳಿಸಬೇಕು’ ಎಂದು ಕೋರಿದರು. 

ಆದರೆ, ಇದಕ್ಕೊಪ್ಪದ ನ್ಯಾಯಾಧೀಶರು, “ರಾಂ ರಹೀಂ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹೀಗಾಗಿ, ಆತನಿಗೆ ಎರಡೂ ಪ್ರಕರಣಗಳಲ್ಲಿ ತಲಾ 10 ವರ್ಷ ಜೈಲು ಶಿಕ್ಷೆ ವಿಧಿಸುತ್ತಿದ್ದೇವೆ’ ಎಂದರು. ಜತೆಗೆ, ಬಾಬಾಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತಿರುವ ಸುದ್ದಿ ಕುರಿತೂ ಕಿಡಿಕಾರಿದ ಜಡ್ಜ್, ಯಾವುದೇ ಕಾರಣಕ್ಕೂ ವಿಶೇಷ ಸೌಲಭ್ಯ ಕಲ್ಪಿಸುವಂತಿಲ್ಲ ಎಂದು ಕಟ್ಟಪ್ಪಣೆ ಮಾಡಿದರು.

ಮೇಲ್ಮನವಿಗೆ ನಿರ್ಧಾರ: ಶಿಕ್ಷೆ ಪ್ರಮಾಣವನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಬೇಕೆಂದು ಹೈಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ಬಾಬಾ ಪರ ವಕೀಲರು ಹೇಳಿದ್ದಾರೆ. ಇನ್ನೊಂದೆಡೆ, ಬಾಬಾಗೆ ಜೀವಾವಧಿ ಶಿಕ್ಷೆಗೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ ಸಂತ್ರಸ್ತರು ಹೇಳಿದ್ದಾರೆ.

Advertisement

ಸಿಎಂ ತುರ್ತು ಸಭೆ: ಶಿಕ್ಷೆ ಪ್ರಕಟವಾದ ಕೂಡಲೇ ಹರಿಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಅವರು ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಡಿಜಿಪಿ ಜತೆ ತುರ್ತು ಸಭೆ ನಡೆಸಿ, ಪರಿಸ್ಥಿತಿ ಬಗ್ಗೆ ಚರ್ಚಿಸಿದರು. ಇದೇ ವೇಳೆ, ಸಿರ್ಸಾದಲ್ಲಿ ಎರಡು ವಾಹನಗಳಿಗೆ ರಾಂ ರಹೀಂ ಬೆಂಬಲಿಗರು ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ವರದಿಯನ್ನು ತಳ್ಳಿಹಾಕಿರುವ ಹರಿಯಾಣ ಸರಕಾರ, “ಶಿಕ್ಷೆ ಘೋಷಣೆ ನಂತರ ಯಾವುದೇ ಅಹಿತಕರ ಘಟನೆ ನಡೆದಿಲ್ಲ’ ಎಂದಿದೆ. ಜತೆಗೆ, ಡೇರಾದ ಎಲ್ಲ ಖಾತೆಗಳನ್ನೂ ಮುಟ್ಟುಗೋಲು ಹಾಕಿ, ಹಿಂಸಾಚಾರದಿಂದ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಲಾಗುತ್ತದೆ ಎಂದೂ ಹೇಳಿದೆ.

ಇದೇ ವೇಳೆ, ರಾಂ ರಹೀಂಗೆ ಜೈಲು ಶಿಕ್ಷೆ ಆಗಿರುವುದು ಸ್ವಾಗತಿಸುವ ಅಥವಾ ತಿರಸ್ಕರಿಸುವ ವಿಚಾರವಲ್ಲ ಎಂದು ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಹೇಳಿದ್ದಾರೆ. ಜತೆಗೆ, ಕೋರ್ಟ್‌ ತೀರ್ಪನ್ನು ಒಪ್ಪಿಕೊಳ್ಳುವಂತೆ ಜನರಿಗೆ ಮನವಿ ಮಾಡಿದ್ದಾರೆ.

ಈಗ ಉತ್ತರಾಧಿಕಾರಿ ಕಿತ್ತಾಟ
ರಾಂ ರಹೀಂಗೆ ಜೈಲು ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಇದೀಗ ಡೇರಾ ಸಚ್ಚಾ ಸೌದಾದ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಮೂಡಿದೆ. ಡೇರಾ ಮುಖ್ಯಸ್ಥೆಯಾಗಿರುವ ವಿಪಾಸನಾ ಇನ್ಸಾನ್‌(35) ಮತ್ತು ಬಾಬಾನ ದತ್ತು ಪುತ್ರಿ ಹನಿಪ್ರೀತ್‌ ಇನ್ಸಾನ್‌ ನಡುವೆ ಪಟ್ಟಕ್ಕಾಗಿ ಪೈಪೋಟಿ ಆರಂಭವಾಗಿದೆ. ತೀರ್ಪು ಹೊರಬೀಳುತ್ತಿದ್ದಂತೆ ವಿಪಾಸನಾ, “ಶಾಂತಿಯಿಂದಿರಿ’ ಎಂದು ಬೆಂಬಲಿಗರಿಗೆ ಕರೆ ಕೊಡುವ ಮೂಲಕ ತಾನೇ ಉತ್ತರಾಧಿಕಾರಿ ಎಂಬಂತೆ ವರ್ತಿಸಿದ್ದಾರೆ. ಈಕೆ ಕಾಲೇಜು ಮುಗಿಸಿ ನೇರವಾಗಿ ಡೇರಾಗೆ ಸೇರಿದ್ದು, ಡೇರಾದಲ್ಲಿ ಎರಡನೇ ಪ್ರಮುಖ ಹುದ್ದೆಯನ್ನು ಅಲಂಕರಿಸಿದ್ದಾಳೆ. ಇನ್ನು ಹನಿಪ್ರೀತ್‌ ತನ್ನನ್ನು ತಾನು “ಅಪ್ಪನ ದೇವಕನ್ಯೆ’ ಎಂದು ಹೇಳಿ ಕೊಂಡಿದ್ದು, ಯಾವಾಗಲೂ ರಾಂ ರಹೀಂ ಜತೆಯೇ ಕಾಣಿಸಿಕೊಳ್ಳು ತ್ತಿರುತ್ತಾಳೆ. ದೋಷಿ ಎಂದು ಪ್ರಕಟವಾದ ದಿನವೂ ಜೈಲಿಗೆ ಹೋಗು ವಾಗ ರಾಂ ರಹೀಂಗೆ ಸಾಥ್‌ ನೀಡಿದ್ದು ಈಕೆಯೇ.ವಿಪಾ ಸನಾ ಮತ್ತು ಹನಿಪ್ರೀತ್‌ ಇಬ್ಬರೂ ತಮ್ಮನ್ನು ತಾವು “ಗುರು ಬ್ರಹ್ಮಚಾರಿ’ಗಳೆಂದು ಘೋಷಿಸಿಕೊಂಡಿದ್ದಾರೆ. ಈಗ ಬಾಬಾ ಉತ್ತರಾ ಧಿಕಾರಿ ಪಟ್ಟ ಯಾರಿಗೆ ಸಿಗುತ್ತದೆಂದು ಕಾದು ನೋಡಬೇಕಿದೆ. 

ಆಸಾರಾಂ ವಿರುದ್ಧ ತನಿಖೆ ವಿಳಂಬ: ಸುಪ್ರೀಂ ಗರಂ 
ಇತ್ತ, ಮತ್ತೂಬ್ಬ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ವಿಳಂಬವಾಗುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಅದು ಗುಜರಾತ್‌ ಸರಕಾರ ವನ್ನು ಪ್ರಶ್ನಿಸಿದ್ದು, ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸುವಂತೆ ತಾಕೀತು ಮಾಡಿದೆ. ಆಸಾರಾಂ ಸಲ್ಲಿಸಿದ ಜಾಮೀನು ಅರ್ಜಿಗಳಲ್ಲಿ ಹಲವನ್ನು ಸುಪ್ರೀಂ ತಿರಸ್ಕರಿಸಿದ್ದು, ಇದೀಗ ಹೊಸದಾಗಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ವೇಳೆ ಹೀಗೆ ಹೇಳಿದೆ. ಪ್ರಕರಣ ದಲ್ಲಿ ಸಂತ್ರಸ್ತರನ್ನು ಯಾಕಾಗಿ ಸರಕಾರ ವಿಚಾರಣೆ ನಡೆಸಿಲ್ಲ ಎಂದು ಖಾರವಾಗಿ ಪ್ರಶ್ನಿಸಿದೆ. 

ನೇರ, ನಿಷ್ಠುರ ಜಡ್ಜ್ ಜಗದೀಪ್ ಸಿಂಗ್
ರಾಂ ರಹೀನಂಥ ದೇವಮಾನವನ ಕೇಸು, ಲಕ್ಷಾಂತರ ಬೆಂಬಲಿಗರು, ಹಿಂಸಾಚಾರದ ಆತಂಕ… ಇವೆಲ್ಲದರ ನಡುವೆಯೂ “ಮ್ಯಾನ್‌ ಆಫ್ ದಿ ಮೊಮೆಂಟ್‌’ ಆಗಿ ಹೊರಹೊಮ್ಮಿದ್ದು ವಿಶೇಷ ಸಿಬಿಐ ಕೋರ್ಟ್‌ ಜಡ್ಜ್ ಜಗದೀಪ್ ಸಿಂಗ್‌. ಹೌದು, ನೋಡಲು ಸರಳ, ಮಾತು ಬಹಳ ಕಡಿಮೆಯಾದರೂ ನ್ಯಾ| ಜಗದೀಪ್ ಸಿಂಗ್ರದ್ದು ನೇರ ಹಾಗೂ ನಿಷ್ಠುರ ವ್ಯಕ್ತಿತ್ವ. ಕಳೆದ ಶುಕ್ರವಾರ ರಾಂ ರಹೀಂ ವಿರುದ್ಧ ತೀರ್ಪು ನೀಡಲೆಂದು ಕೋರ್ಟ್‌ ಆವರಣ ಪ್ರವೇಶಿಸುವಾಗ, ಅವರಿಗೆ ಎದುರಾಗಿದ್ದು ಬಾಬಾನ ಲಕ್ಷಾಂತರ ಬೆಂಬಲಿಗರು. ಬಾಬಾನನ್ನು ದೋಷಿ ಎಂದು ಘೋಷಿಸಿದರೆ ಏನಾಗಬಹುದು ಎಂಬುದು ಅವರಿಗೆ ಗೊತ್ತಿತ್ತು. ಆದರೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ನ್ಯಾ| ಜಗದೀಪ್ ಸಿಂಗ್ ಅವರು ಕೋರ್ಟ್‌ ಕೊಠಡಿ ಪ್ರವೇಶಿಸಿದ್ದರು. ಅವರ ಮೊಗದಲ್ಲಿ ಎಂದಿನ ಮಂದಹಾಸ ಹಾಗೂ ಗಾಂಭೀರ್ಯತೆ ಇತ್ತು ಎನ್ನುತ್ತಾರೆ 
ಕೋರ್ಟ್‌ನ ಇತರೆ ನ್ಯಾಯವಾದಿಗಳು.

ಕೋರ್ಟಲ್ಲಿ  ಕುಸಿದು ಬಿದ್ದ, ಮಗುವಿನಂತೆ ಅತ್ತ!
ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆ ಘೋಷಣೆ ಯಾಗು ತ್ತಿದ್ದಂತೆ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ ರಾಂ ರಹೀಂ ಸಿಂಗ್‌ಗೆ ಆಕಾಶವೇ ಕಳಚಿಬಿದ್ದ ಅನುಭವ. ಈವರೆಗೆ ಸ್ವಘೋಷಿತ ದೇವಮಾನ ವನಾಗಿ ತಾನು ಪಡೆದಿದ್ದ ಗೌರವ, ಗಳಿಸಿದ್ದ ಆಸ್ತಿ, ಶೋಕಿ ಜೀವನ ಎಲ್ಲವೂ ಕಣ್ಣೆದುರೇ ನಶಿಸಿಹೋದಂಥ ಭಾವನೆ. ಹೀಗಾಗಿಯೇ ತೀರ್ಪು ಹೊರಬೀಳು ತ್ತಿದ್ದಂತೆ, ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಗುರ್ಮೀತ್‌ ಸಿಂಗ್‌ ಕೋರ್ಟ್‌ ಕೊಠಡಿಯೊಳಗೇ ರಂಪಾಟ ಶುರುವಿಟ್ಟಿದ್ದು ಕಂಡುಬಂತು.

ಎರಡೂ ಕೈಗಳನ್ನು ಮುಗಿದು, ಮಗುವಿನಂತೆ ಅಳಲು ಆರಂಭಿಸಿದ ಬಾಬಾ, “ನನ್ನ ಮೇಲೆ ಸ್ವಲ್ಪವಾದರೂ ಕರುಣೆ ತೋರಿ’ ಎಂದು ಹೇಳುತ್ತಾ ಕುಸಿದುಬಿದ್ದ

ಅಲ್ಲಿಂದ ಜೈಲು ಕೊಠಡಿಗೆ ಹೋಗಲು ನಿರಾಕರಿಸಿದಾಗ, ಭದ್ರತಾ ಸಿಬ್ಬಂದಿ ಎಳೆದುಕೊಂಡೇ ಹೋಗಬೇಕಾಯಿತು. ಆಗ, ಬಾಬಾ “ದಯವಿಟ್ಟು ಯಾರಾದರೂ ನನ್ನನ್ನು ಕಾಪಾಡಿ’ ಎಂದು ಕೂಗತೊಡಗಿದ.

ಜತೆಗೆ, ನನಗೆ ಆಯಾಸವಾಗುತ್ತಿದೆ. ವೈದ್ಯಕೀಯ ನೆರವು ಬೇಕಿದೆ. ನನಗೇನಾದರೂ ಆದರೆ ಅದಕ್ಕೆ ಸರಕಾರವೇ ಹೊಣೆ ಎಂದು ಬೊಬ್ಬಿಡತೊಡಗಿದ.

ಕೂಡಲೇ ವೈದ್ಯರು ಪರೀಕ್ಷಿಸಿ, ಗುರ್ಮೀತ್‌ಗೆ ಏನೂ ಆಗಿಲ್ಲ. ಆರೋಗ್ಯವಾಗಿಯೇ ಇದ್ದಾರೆ ಎಂದು ವರದಿ ನೀಡಿದರು. ನಂತರ, ಆತನನ್ನು ಒತ್ತಾಯ ಪೂರ್ವಕವಾಗಿ ಜೈಲಿನೊಳಗೆ ಕರೆದೊಯ್ಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next