ಗಜೇಂದ್ರಗಡ: ಪಟ್ಟಣದಲ್ಲಿ ವರುಣನ ಕೃಪೆಗಾಗಿ ಗುರುವಾರ ಯುವಕರು ಗುರ್ಜಿ ಪೂಜೆ ನೆರವೇರಿಸಿದರು.
ಪಟ್ಟಣದ 9ನೇ ವಾರ್ಡ್‌ನ ಗೌಳಿಗಲ್ಲಿಯಲ್ಲಿ ರೈತರು ಗುರ್ಜಿ ಗುರ್ಜಿ ಅಲ್ಲಾಡಿ ಬಂದೆ, ಹಳ್ಳಕೊಳ್ಳ ತಿರಿಗ್ಯಾಡಿ ಬಂದೆ, ಕಾರ ಮಳೆಯು ಕಪ್ಪತ ಮಳೆಯು ಸುರಿ ಸುರಿಯೋ ಮಳೆರಾಯ ಎಂದು ಗುರ್ಜಿಯನ್ನು ಹೊತ್ತು ಮಳೆರಾಯನನ್ನು ನೆನೆಯಲಾಯಿತು.
ಈ ಬಾರಿ ಮುಂಗಾರು ಪ್ರವೇಶವಾಗದ ಕಾರಣ ಇನ್ನೂ ಬಿತ್ತನೆ ಆರಂಭವಾಗಿಲ್ಲ. ಅನ್ನದಾತರು ತೀವ್ರ ಸಂಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ. ಕಳೆದ ಎರಡು ವಾರದ ಹಿಂದೆ ಸುರಿದ ಅಲ್ಪ ಮಳೆಗೆ ಕೆಲವೆಡೆ ಬಿತ್ತನೆ ಕೈಗೊಳ್ಳಲಾಗಿದೆ. ಬಿತ್ತನೆಯಾಗಿ ಬೆಳೆಗಳು ಬೆಳೆಯುವ ಹಂತದಲ್ಲಿದ್ದು, ಮಳೆ ಬಾರದೆ ಬೆಳೆಗಳು ಒಣಗುತ್ತಿವೆ. ಮಳೆರಾಯನನ್ನು ವರಿಸಿಕೊಳ್ಳಲು ರೈತರು ಗುರ್ಜಿ ಪೂಜೆಗೆ ಮೊರೆ ಹೋಗಿದ್ದಾರೆ.
ಶತಶತಮಾನದಿಂದಲೂ ಆಚರಣೆಯಲ್ಲಿರುವ ಗುರ್ಜಿ ಪೂಜೆ ಬಹಳಷ್ಟು ವಿಶಿಷ್ಟವಾದ ಸಂಪ್ರದಾಯವಾಗಿದೆ. ಮಕ್ಕಳು, ಯುವಕರು ತಲೆ ಮೇಲೆ ಹಂಚು ಇಟ್ಟು ಅದರ ಮೇಲೆ ಆಕಳ ಸಗಣೆಯಿಂದ ತಯಾರಿಸಿದ ಗುರ್ಜಿ ಹೊರಿಸಲಾಯಿತು. ಗುರ್ಜಿ ಹೊತ್ತವನ ಹಿಂದೆ ರೈತ ಮಹಿಳೆಯರು, ಮಕ್ಕಳು ಹಾಡು ಹೇಳುತ್ತ ಬಡಾವಣೆಯ ಎಲ್ಲ ಕಡೆಗಳಲ್ಲಿ ಸಂಚರಿಸಲಾಯಿತು.
ಗುರ್ಜಿ ಹೊತ್ತ ರೈತ ಫಕೀರಪ್ಪ ವದೆಗೋಳ ತೆಲೆಯ ಮೇಲೆ ನೀರು ಸುರಿದು ಪ್ರತಿಯೊಬ್ಬರು ಗುರ್ಜಿ ಪೂಜೆ ಮಾಡುವುದರೊಂದಿಗೆ ಮನೆಯಿಂದ ಜೋಳ, ರೊಟ್ಟಿ, ದವಸ-ಧಾನ್ಯ ಹಾಗೂ ಹಣವನ್ನು ಸಂಗ್ರಹಿಸುವುದರ ಮೂಲಕ ಮಳೆರಾಯನ ಕೃಪೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಗುಲಾಂ ಹುನಗುಂದ, ಪ್ರಶಾಂತ್ ಘೋರ್ಪಡೆ, ಕೂಡ್ಲೆಪ್ಪ ನೆಲ್ಲೂರ, ವಿರುಪಾಕ್ಷಪ್ಪ ವದೆಗೋಳ, ರಹೀಂಸಾಬ ಹುನಗುಂದ, ಬಾಬು ಆಬಾನವರ, ಬಾಪೂಜಿ ನವಲಡೆ, ಮುರ್ತುಜಾ ಒಂಟಿ, ಕಳಕಪ್ಪ ಸೋಂಪೂರ, ಪರಶುರಾಮ ವದೆಗೋಳ, ಫಜಲ ಹುನಗುಂದ, ವೀರಪ್ಪ ಆಬಾನವರ, ಭೀಮಷಿ ತಳವಾರ, ಇತರರು ಇದ್ದರು.