ಹ್ಯಾಮಿಲ್ಟನ್: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯಕ್ಕಾಗಿ ನ್ಯೂಜಿಲ್ಯಾಂಡ್ ತಂಡ ಕೆಲವೊಂದು ಬದಲಾವಣೆ ಮಾಡಿಕೊಂಡಿದೆ. ವಿಶ್ವ ದರ್ಜೆಯ ಮಾರ್ಟಿನ್ ಗಪ್ಟಿಲ್ ಅವರು ತಂಡಕ್ಕೆ ಮರಳಿದ್ದಾರೆ. ಟಾಮ್ ಲಾಥಂ ಬದಲಿಗೆ ಲ್ಯೂಕ್ ರಾಂಚಿ ವಿಕೆಟ್ ಕೀಪಿಂಗ್ ನಡೆಸುವ ಸಾಧ್ಯತೆಯಿದೆ. ಸರಣಿಯ ನಾಲ್ಕನೇ ಪಂದ್ಯ ಮಾ. 1ರಂದು ನಡೆಯಲಿದೆ. ಮೂರನೇ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತ್ತು. ಬ್ಯಾಟ್ಸ್‌ಮನ್ ಆಗಿ ಲಾಥಂ ತಂಡದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುವ ಬಗ್ಗೆ ಕೋಚ್ ಮೈಕ್ ಹೆಸ್ಸನ್ ದೃಢಪಡಿಸಿಲ್ಲ. ಆದರೆ ಸತತ ಆರು ಪಂದ್ಯಗಳಲ್ಲಿ ಮೂರು ಬಾರಿ ಶೂನ್ಯ ಸಹಿತ ಆರು ಬಾರಿ ಒಂದಂಕಿ ರನ್ ಗಳಿಸಿದ್ದರಿಂದ ಲಾಥಂ ಆಡುವುದು ಅನುಮಾನವೆಂದು ಹೇಳಬಹುದು. ಗಪ್ಟಿಲ್ ಬದಲಿಗೆ ಆಯ್ಕೆಯಾಗಿದ್ದ ಡೀನ್ ಬ್ರೌನ್ಲಿ ಹ್ಯಾಮಿಲ್ಟನ್ ಪಂದ್ಯಕ್ಕೂ ತಂಡದಲ್ಲಿ ಉಳಿಯಲಿದ್ದಾರೆ.
ಸರಣಿ ಆರಂಭವಾಗುವ ಮೊದಲು ಇಬ್ಬರು ಕೀಪರ್‌ಗಳಿಗೆ ಅವಕಾಶ ನೀಡುವ ಕುರಿತು ಚರ್ಚಿಸಿದ್ದೇವೆ. ಟಾಮ್ ಮೊದಲ ಆಯ್ಕೆಯಾಗಿದ್ದರು. ಹಾಗಾಗಿ ಲ್ಯೂಕ್ ಅವರಿಗೆ ಅವಕಾಶ ಲಭಿಸುವ ಸಾಧ್ಯತೆಯಿದೆ. ಮಾರ್ಟಿನ್ ಮರಳಿರುವುದು ನಮಗೆ ಬಹಳಷ್ಟು ಖುಷಿಯಾಗಿದೆ. ಇದರಿಂದಾಗಿ ನಾವು ಹೋರಾಡಲು ಸುಲಭವಾಗಲಿದೆ ಎಂದು ಹೆಸ್ಸನ್ ತಿಳಿಸಿದರು.
ವೆಲ್ಲಿಂಗ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಕೇವಲ 112 ರನ್ನಿಗೆ ಆಲೌಟಾಗಿತ್ತು. ಸರಣಿಯನ್ನು ಜೀವಂತವಿರಿಸಿಕೊಳ್ಳಬೇಕಾದರೆ ನಾಲ್ಕನೇ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡಿರುವ ಗಪ್ಟಿಲ್ ಸರಿಯಾದ ಸಮಯದಲ್ಲಿ ನ್ಯೂಜಿಲ್ಯಾಂಡ್ ತಂಡಕ್ಕೆ ಮರಳಿದ್ದಾರೆ. 141 ಏಕದಿನ ಪಂದ್ಯವನ್ನಾಡಿರುವ ಗಪ್ಟಿಲ್ 42.52 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅವರ ಉಪಸ್ಥಿತಿಯಿಂದ ನ್ಯೂಜಿಲ್ಯಾಂಡ್ ಸಮರ್ಥ ರೀತಿಯಲ್ಲಿ ಹೋರಾಡುವ ಸಾಧ್ಯತೆಯಿದೆ.
ನಾಲ್ಕನೇ ಏಕದಿನಕ್ಕೆ ನ್ಯೂಜಿಲ್ಯಾಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ನೀಲ್ ಬ್ರೂಮ್, ಡೀನ್ ಬ್ರೌನ್ಲಿ, ಲಾಕೀ ಫೆರ್ಗ್ಯುಸನ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಾರ್ಟಿನ್ ಗಪ್ಟಿಲ್, ಟಾಮ್ ಲಾಥಂ, ಜೇಮ್ಸ್ ಆ್ಯಂಡರ್ಸನ್ , ಜೀತನ್ ಪಟೇಲ್, ಲ್ಯೂಕ್ ರಾಂಚಿ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ.