ಬೆಂಗಳೂರು: ಅಪಹರಣ ಪ್ರಕರಣ ಸಂಬಂಧ ಬಂಧಿಸಲು ಹೋದ ಪೊಲೀಸರ ಮೇಲೇ ಹಲ್ಲೆ ನಡೆಸಿದ ರೌಡಿಶೀಟರ್ ಮೇಲೆ ಸಿಸಿಬಿ ಪೊಲೀಸರು ಬುಧವಾರ ಸಂಜೆ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.
ಚಾಮರಾಜಪೇಟೆಯ ಜಾರ್ಜ್ ಬಂಧನಕ್ಕೊಳಗಾದ ರೌಡಿಶೀಟರ್. ಆರೋಪಿಯ ಬಲಗಾಲಿಗೆ ಗುಂಡೇಟು ಬಿದ್ದಿದ್ದು. ಇದೇ ವೇಳೆ ಆರೋಪಿಯಿಂದ ಹಲ್ಲೆಗೊಳಗಾದ ಸಿಸಿಬಿಯ ಕಾನ್‌ಸ್ಟೆಬಲ್ ಉಮೇಶ್ ಅವರ ಎಡಗೈಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಹರಣ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಜಾರ್ಜ್ ಚಾಮರಾಜಪೇಟೆಯ ಮುಳ್ಳುಕಟ್ಟಮ್ಮ ದೇವಾಲಯದ ಹಿಂಭಾಗದಲ್ಲಿರುವ ಜಿಂಕೆಪಾರ್ಕ್ ಬಳಿ ಓಡಾಡುತ್ತಿದ್ದ. ಈ ಮಾಹಿತಿ ಸಂಗ್ರಹಿಸಿದ ಸಂಘಟಿತ ಅಪರಾಧ ದಳದ ಇನ್ ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಕಾರ್ಯಾಚರಣೆಗಿಳಿದು ಆರೋಪಿಯನ್ನು ಬಂಧಿಸಲು ಮುಂದಾಗಿದೆ. ಈ ವೇಳೆ ಆರೋಪಿ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾನೆ.
ಆಗ ಇನ್ಸ್‌ಸ್ಪೆಕ್ಟರ್ ಪ್ರಕಾಶ್ ಶರಣಾಗುವಂತೆ ಸೂಚಿಸಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಆರೋಪಿ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದು, ಬಂಧಿಸಲು ಹೋದ ಉಮೇಶ್ ಅವರ ಎಡಗೈಗೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪ್ರಕಾಶ್ ಆರೋಪಿ ಕಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ.
ರೌಡಿ ಕೊರಂಗು ತಂಡದಲ್ಲಿದ್ದ ದೂದ್ ರವಿ ಶಿಷ್ಯನಾಗಿರುವ ಜಾರ್ಜ್ ಚಾಮರಾಜಪೇಟೆ ಠಾಣೆಯಲ್ಲಿ ರೌಡಿಪಟ್ಟಿಯಲ್ಲಿದ್ದಾನೆ. 2014ರಲ್ಲಿ ಕೆ.ಆರ್.ಮಾರುಕಟ್ಟೆಯ ಹೂವಿನ ವ್ಯಾಪಾರಿ ರಾಜು ಎಂಬಾತನನ್ನು ಮೈಸೂರು ರಸ್ತೆಯ ಮೇಲು ಸೇತುವೆ ಬಳಿ ಅಪಹರಿಸಿ ಹೊರ ವಲಯಕ್ಕೆ ಕರೆದೊಯ್ದಿದ್ದ ಜಾರ್ಜ್ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮರು ದಿನ ಬೆಳಗ್ಗೆ ಮತ್ತೆ ನಗರಕ್ಕೆ ಕರೆತಂದು ಎಟಿಎಂ ಕೇಂದ್ರವೊಂದರಲ್ಲಿ ಒಂದೂವರೆ ಲಕ್ಷ ರೂ. ಹಣ ಡ್ರಾ ಮಾಡಿಸಿಕೊಂಡಿದ್ದರು. ನಂತರ ಚಾಮರಾಜಪೇಟೆಯಲ್ಲಿರುವ ರಾಜು ಮನೆಗೆ ಹೋಗಿ ಮನೆಯವರನ್ನು ಬೆದರಿಸಿಯೂ ಹಣ ವಸೂಲಿ ಮಾಡಿದ್ದ.
ಈ ಸಂಬಂಧ ಜೈಲು ಸೇರಿದ್ದ ಜಾರ್ಜ್, ಜೈಲಿನಿಂದಲೇ ತನ್ನ ಸಹಚರರ ಮೂಲಕ ರಾಜು ಮತ್ತು ಈತನ ಕುಟುಂಬದವರಿಂದ ಹಣ ವಸೂಲಿ ಮಾಡುತ್ತಿದ್ದ. 2017ರಲ್ಲಿ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು. ಈ ಮಾಹಿತಿ ತಿಳಿದಿದ್ದ ಆರೋಪಿ ಸಾಕ್ಷಿಗಳಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ ಮತ್ತೆ ಸುಲಿಗೆ ಮುಂದುವರಿಸಿದ್ದ.
ಈ ಕುರಿತು ರಾಜು ಕುಟುಂಬ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಆರೋಪಿ ಬುಧವಾರ ಸಂಜೆ ಚಾಮರಾಜಪೇಟೆಯ ಮುಳ್ಳುಕಟ್ಟಮ್ಮ ದೇವಾಲಯದ ಬಳಿ ಅಡಗಿದ್ದ. ಈ ಮಾಹಿತಿ ತಿಳಿದು ದಾಳಿ ನಡೆಸಿದ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ಜಾರ್ಜ್ ವಿರುದ್ಧ 13 ಪ್ರಕರಣಗಳಿದ್ದು, 3 ಕೊಲೆ, 4 ಕೊಲೆ ಯತ್ನ ಪ್ರಕರಣ, 3 ಸಾಕ್ಷಿಗಳಿಗೆ ಪ್ರಾಣ ಬೆದರಿಕೆ ಹಾಕಿದ ಪ್ರಕರಣಗಳು ದಾಖಲಾಗಿವೆ.