ಚಿತ್ರರಂಗಕ್ಕೆ ಬರುವ ಬಹುತೇಕ ನವ ನಟರಿಗೆ ತಾವು ಆ್ಯಕ್ಷನ್ ಹೀರೋ ಆಗಿ ಮಿಂಚಬೇಕು ಎಂಬ ಕನಸು. ಅದೇ ಕಾರಣದಿಂದ ಅಂತಹ ಕಥೆಗಳ ಮೂಲಕ ಲಾಂಚ್ ಆಗಲು ಬಯಸುತ್ತಾರೆ. ಈ ವಾರ ತೆರೆಕಂಡಿರುವ “ಗನ್ಸ್ ಆ್ಯಂಡ್ ರೋಸಸ್’ ಸಿನಿಮಾ ಕೂಡಾ ಆ್ಯಕ್ಷನ್ ಹಿನ್ನೆಲೆಯ ಕಥೆ ಹೊಂದಿದೆ. ಈ ಸಿನಿಮಾ ಮೂಲಕ ನವನಟ ಅರ್ಜುನ್ ಲಾಂಚ್ ಆಗಿದ್ದಾರೆ.
ಸಿನಿಮಾದ ಟೈಟಲ್ ಕೇಳಿದ ಕೂಡಲೇ ಇದೊಂದು ಲವ್ ಕಂ ಆ್ಯಕ್ಷನ್ ಸಬ್ಜೆಕ್ಟ್ ಸಿನಿಮಾ ಎಂದು ಗೊತ್ತಾಗುತ್ತದೆ. ಅದರಂತೆ ಕಥೆ ಸಾಗುತ್ತದೆ. ಒಬ್ಬ ಹೊಸ ಹೀರೋನನ್ನು ಕಮರ್ಷಿಯಲ್ ಆಗಿ ಲಾಂಚ್ ಮಾಡಲು ಏನೇನು ಅಂಶಗಳು ಇರಬೇಕೋ, ಆ ಎಲ್ಲಾ ಅಂಶಗಳ ಸುತ್ತ ನಿರ್ದೇಶಕರು ಗಮನಹರಿಸಿದ್ದಾರೆ. ಅದು ಹಾಡು, ಫೈಟ್, ಡ್ಯಾನ್ಸ್, ಲುಕ್, ಮ್ಯಾನರಿಸಂ… ಹೀಗೆ ಪ್ರತಿ ಅಂಶದಲ್ಲೂ ನಾಯಕನನ್ನು ಮೆರೆಸಿದ್ದಾರೆ.
ಕಥೆ ಬಗ್ಗೆ ಹೇಳುವುದಾದರೆ ಮಾತು ಕಮ್ಮಿ ಕೆಲಸ ಜಾಸ್ತಿ ಎಂಬಂತಿರುವ ಹೀರೋ. ಬೇಕೋ ಬೇಡವೋ ಅಂಡರ್ ವರ್ಲ್ಡ್ಗೆ ಎಂಟ್ರಿ. ಸರಾಗವಾಗಿ ನಡೆಯುತ್ತಿರುವ ದಂಧೆ ಒಂದು ಕಡೆಯಾದರೆ, ಈ ಖಡಕ್ ಹುಡುಗನ ಹಿಂದೆ ಬೀಳುವ ಹುಡುಗಿ ಮತ್ತೂಂದೆಡೆ.. ಈ ನಡುವೆಯೇ ಭಯಂಕರವಾದ ಒಂದು ಟ್ವಿಸ್ಟ್. ಅಲ್ಲಿಂದ ಮಗ್ಗಲು ಬದಲಿಸುವ ಕಥೆ ಹೊಸ ಹಾದಿ ಹಿಡಿಯುತ್ತದೆ. ಇಲ್ಲಿ ಹಾಡು, ಫೈಟ್ ಎಲ್ಲವೂ ಬಂದು ಹೋಗುತ್ತದೆ.
ಮೊದಲೇ ಹೇಳಿದಂತೆ ಕಮರ್ಷಿಯಲ್ ಸಿನಿಮಾದಲ್ಲಿ ಏನಿರಬೇಕೋ ಆ ಎಲ್ಲಾ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಮಾಸ್ ಪ್ರಿಯರ ಮನ ತಣಿಸುವ ಅಂಶಗಳು ಕೊಂಚ ಹೆಚ್ಚೇ ಇವೆ. ನಾಯಕ ಅರ್ಜುನ್ ಆ್ಯಕ್ಷನ್ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಯಶ್ವಿಕಾ ನಿಷ್ಕಲಾ, ಕಿಶೋರ್, ಅವಿನಾಶ್, ಶೋಭರಾಜ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಅರುಣಾ ಬಾಲರಾಜ್ ನಟಿಸಿದ್ದಾರೆ.
ರವಿ ರೈ