Advertisement

ಬಾವರಿಯಾ ಗ್ಯಾಂಗ್‌ನ ಗೂಂಡಾಗೆ ಗುಂಡೇಟು

03:36 PM Apr 12, 2018 | Team Udayavani |

ಬೆಂಗಳೂರು: ಕಪ್ಪು ಬಣ್ಣದ ಪಲ್ಸರ್‌ ಬೈಕ್‌ಗಳಲ್ಲಿ ಬಂದು ಮಹಿಳೆಯರ ಸರ ಕಳವು ಮಾಡಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದ ಕುಖ್ಯಾತ ಬಾವರಿಯಾ ತಂಡದ ಸದಸ್ಯನೊಬ್ಬನನ್ನು ಉತ್ತರ ವಿಭಾಗದ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ತನ್ನನ್ನು ಹಿಡಿಯಲು ಬಂದ ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳಿಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

Advertisement

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ರಾಮ್‌ಸಿಂಗ್‌(35) ಬಂಧಿತ. ಪೊಲೀಸರ ಗುಂಡೇಟಿನಿಂದ ರಾಮ್‌ಸಿಂಗ್‌ನ ಬಲಗಾಲು ಮತ್ತು ಬಲಕೈಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮತ್ತೂಬ್ಬ ಆರೋಪಿ ರಾಜೇಂದರ್‌ ತಲೆಮರೆಸಿಕೊಂಡಿದ್ದು, ಡುಕಾಟ ನಡೆಯುತ್ತಿದೆ. ಆರೋಪಿಯಿಂದ ಚಾಕು ಇರಿತಕ್ಕೊಳಗಾದ ಕಾನ್‌ಸ್ಟೆಬಲ್‌ಗ‌ಳಾದ ಇಮಾಮ್‌ ಸಾಬ್‌ ಕರಿಕಟ್ಟಿ ಹಾಗೂ
ಬೀರಾದಾರ್‌ಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ತಿಳಿಸಿದ್ದಾರೆ.

ನಗರದ ಪಶ್ಚಿಮ, ಈಶಾನ್ಯ, ಉತ್ತರ ವಿಭಾಗದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಹೆಚ್ಚುತ್ತಿದ್ದ ಸರಗಳ್ಳತನ ಪೊಲೀಸರಿಗೆ ತಲೆನೋವು ತಂದಿದ್ದು, ಈ ಹಿನ್ನೆಲೆಯಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುವಂತೆ ಪೊಲೀಸ್‌ ಆಯುಕ್ತ ಟಿ. ಸುನಿಲ್‌ ಕುಮಾರ್‌ ಎಲ್ಲ ಡಿಸಿಪಿಗಳಿಗೆ ಸೂಚಿಸಿದ್ದರು.

ಅದರಂತೆ ಎಲ್ಲೆಡೆ ವಿಶೇಷ ತಂಡಗಳು ಸರಗಳ್ಳರ ಪತ್ತೆಗೆ ಶೋಧ ನಡೆಸುತ್ತಿದೆ. ಜತೆಗೆ ಬಾವರಿಯಾ, ಇರಾನಿ ಹಾಗೂ ಓಜಿಕುಪ್ಪಂ ತಂಡದ ಸದಸ್ಯರ ಬಗ್ಗೆಯೂ ಪೊಲೀಸರು ಗಮನಹರಿಸಿದ್ದರು. ಜೈಲಿನಲ್ಲಿರುವ ಗ್ಯಾಂಗ್‌ ಸದಸ್ಯರನ್ನು ವಿಚಾರಣೆಗೊಳಪಡಿಸಿದ್ದರು. 

ಈ ಮಧ್ಯೆ ಬಾವರಿಯಾ ಗ್ಯಾಂಗ್‌ ನ ನಾಲ್ಕೈದು ಮಂದಿ ಸದಸ್ಯರು ಮಂಗಳವಾರ ಯಲಹಂಕ, ಬಾಗಲೂರು ಮತ್ತು ಚಿಕ್ಕಜಾಲ ಹಾಗೂ ನಗರದ ಮತ್ತೂಂದು ಠಾಣೆ ವ್ಯಾಪ್ತಿಯ ಒಟ್ಟು ನಾಲ್ಕು ಕಡೆಗಳಲ್ಲಿ ಸರಗಳ್ಳನ ಮಾಡಿ ಸೋಲದೇವನಹಳ್ಳಿ ಕಡೆ ಪರಾರಿಯಾಗಿದ್ದರು. ಈ ಮಾಹಿತಿ ಪಡೆದ ಸಹಾಯವಾಣಿ “ನಮ್ಮ-100′ ಸಿಬ್ಬಂದಿ ಪಂಜಾಬ್‌ ನೊಂದಣಿಯ ಪಲ್ಸರ್‌ ಬೈಕ್‌ನಲ್ಲಿ ಸರಗಳ್ಳರು ಪರಾರಿಯಾಗಿದ್ದಾರೆ ಎಂಬ ಮಾಹಿತಿಯನ್ನು ಉತ್ತರ ವಿಭಾಗದ ಪೊಲೀಸರಿಗೆ ನೀಡಿದ್ದರು.

Advertisement

ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ಲಕ್ಷ್ಮೀಪುರ ಕ್ರಾಸ್‌ ಬಳಿ ಸೋಲದೇವನಹಳ್ಳಿ ಠಾಣೆ ಕಾನ್‌ಸ್ಟೇಬಲ್‌ಗಳಾದ ಇಮಾಮ್‌ ಕರಿಕಟ್ಟಿ ಮತ್ತು ಬೀರಾದರ್‌ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ ಪಂಜಾಬ್‌ ನೊಂದಣಿಯ ಪಲ್ಸರ್‌ ಬೈಕ್‌ ಕಂಡು ಅನುಮಾನಗೊಂಡ ಕಾನ್‌ಸ್ಟೇಬಲ್‌ಗ‌ಳು ಬೈಕ್‌ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ, ಏಕಾಏಕಿ ಪೊಲೀಸರ ಮೇಲೆ ಬೈಕ್‌ ಹತ್ತಿಸಲು ಪ್ರಯತ್ನಿಸಿದ್ದಲ್ಲದೆ, ಸ್ಥಳದಲ್ಲೇ ಬೈಕ್‌ ಬಿಟ್ಟು ಇಬ್ಬರು ಆರೋಪಿಗಳು ಪ್ರತ್ಯೇಕ ದಿಕ್ಕುಗಳಲ್ಲಿ ಪರಾರಿಯಾದರು. ಈ ವೇಳೆ ಅವರನ್ನು ಹಿಂಬಾಲಿಸಿದ ಕಾನ್‌ಸ್ಟೇಬಲ್‌ಗ‌ಳ ಮೇಲೆ ಆರೋಪಿಗಳು ಚಾಕುವಿನಿಂದ ಕುತ್ತಿಗೆಗೆ ಇರಿಯಲು ಯತ್ನಿಸಿ ನೀಲಗಿರಿ ತೋಪಿನ ಕಡೆಗೆ ಓಡಿಹೋಗಿದ್ದರು.

ಮಾಹಿತಿ ಪಡೆದ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಅವರು ಯಶವಂತಪುರ ಎಸಿಪಿ ರವಿಪ್ರಸಾದ್‌, ಮಹಾಲಕ್ಷ್ಮೀ ಲೇಔಟ್‌ ಪಿಐ ಲೋಹಿತ್‌, ನಂದಿನಿ ಲೇಔಟ್‌ ಪಿಐ ಕಾಂತರಾಜು, ಆರ್‌ಎಂಸಿ ಯಾರ್ಡ್‌ ಪಿಐ ರಾಮಪ್ಪ, ಪಿಎಸ್‌ಐ ಸೋಮಶೇಖರ್‌ ನೇತೃತ್ವದ ಒಟ್ಟು 50-60 ಮಂದಿ ಸಿಬ್ಬಂದಿಯ ತಂಡ ರಚಿಸಿದ್ದರು.

ಕಾಲಿಗೆ ಗುಂಡೇಟು: ವಿಶೇಷ ತಂಡದ ಸಿಬ್ಬಂದಿ ಕಾಡು ಪ್ರದೇಶಗಳಲ್ಲಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತು. ತಡರಾತ್ರಿ 11.30ರ ಸುಮಾರಿಗೆ ಆರೋಪಿಗಳು ಸೋಮಶೆಟ್ಟಿಹಳ್ಳಿ ಹತ್ತಿರದ ಕೆರೆಗುಡ್ಡದಹಳ್ಳಿಯ ಕಾಡು ಪ್ರದೇಶಗಳಲ್ಲಿ ಅನುಮಾನಸ್ಪದವಾಗಿ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಇಡೀ ತಂಡ ಕಾಡು ಪ್ರದೇಶವನ್ನು ಸುತ್ತುವರಿದು ಆರೋಪಿಗಳ ಬೆನ್ನು ಬಿದ್ದಿದೆ. ಈ ವೇಳೆ ರಾಮ್‌ಸಿಂಗ್‌ನನ್ನು ಗುರುತಿಸಿದ ಪೇದೆ ಇಮಾಮ್‌ ಸಾಬ್‌ ಕರಿಕಟ್ಟಿ ಆರೋಪಿಯನ್ನು ಬಂಧಿಸಲು ಹೋದಾಗ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಕೂಡಲೇ ಪಿಎಸ್‌ಐ ಸೋಮಶೇಖರ್‌ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಮತ್ತೆ ಹಲ್ಲೆಗೆ ಮುಂದಾದಾಗ ರಾಮ್‌ಸಿಂಗ್‌ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಆತನ ಬಲಗಾಲು ಮತ್ತು ಬಲಕೈಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಕಾನ್‌ಸ್ಟೇಬಲ್‌ಗ‌ಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next