Advertisement

ಕ್ಯಾಂಟರ್‌ ಚಾಲಕನ ಕೊಂದವರಿಗೆ ಗುಂಡೇಟು

12:46 AM Sep 09, 2019 | Team Udayavani |

ಬೆಂಗಳೂರು: ಐದು ವರ್ಷಗಳ ಹಿಂದಿನ ಕೊಲೆಗೆ ಪ್ರತಿಕಾರವಾಗಿ ಎರಡು ದಿನಗಳ ಹಿಂದೆ ಕ್ಯಾಂಟರ್‌ ಚಾಲಕ ಮಹೇಶ್‌ ಕುಮಾರ್‌ನನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಇಬ್ಬರು ರೌಡಿಶೀಟರ್‌ಗಳ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

Advertisement

ಕಾಮಾಕ್ಷಿಪಾಳ್ಯ ನಿವಾಸಿಗಳಾದ ಅಭಿಷೇಕ್‌ ಅಲಿಯಾಸ್‌ ಅಂದ್ರಳ್ಳಿ ಅಭಿ (24), ಪ್ರವೀಣ್‌ ಅಲಿಯಾಸ್‌ ಇಟಾಚಿ (25) ಬಂಧಿತರು. ಅಭಿಷೇಕ್‌ನ ಬಲಗಾಲಿಗೆ ಮತ್ತು ಪ್ರವೀಣ್‌ನ ಎಡಗಾಲಿಕೆ ಗುಂಡೇಟು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಗಳ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಹೆಡ್‌ ಕಾನ್‌ಸ್ಟೆàಬಲ್‌ ವಸಂತ್‌ಕುಮಾರ್‌ ಮತ್ತು ಕಾನ್‌ಸ್ಟೆಬಲ್‌ ಸತೀಶ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು. ಇದೇ ಸಂದರ್ಭದಲ್ಲಿ ಮತ್ತೂಬ್ಬ ಆರೋಪಿ ಸತೀಶ್‌(24) ಎಂಬಾತನನ್ನು ಬಂಧಿಸಲಾಗಿದೆ.

ಅಭಿಷೇಕ್‌, ಪ್ರವೀಣ್‌ ಮತ್ತು ಸತೀಶ್‌ ಕುಖ್ಯಾತ ರೌಡಿಶೀಟರ್‌ ಸ್ಲಂ ಭರತನ ಸಹಚರರಾಗಿದ್ದು, ಮೂವರ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕೊಲೆ, ದರೋಡೆ, ಸುಲಿಗೆ ಹಾಗೂ ಕೊಲೆ ಯತ್ನ ಸೇರಿ 13 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ರಾಜಗೋಪಾಲನಗರ ಪೊಲೀಸ್‌ ಠಾಣೆಯಲ್ಲಿ ರೌಡಿಪಟ್ಟಿ ಕೂಡ ತೆರೆಯಲಾಗಿದೆ.

ಮೂವರು ಆರೋಪಿಗಳು ಸೆ.6ರಂದು ರಾತ್ರಿ 10.30ರ ಸುಮಾರಿಗೆ ಕ್ಯಾಂಟರ್‌ ಚಾಲಕ ಮಹೇಶ್‌ ಕುಮಾರ್‌ನನ್ನು ಕಾಮಾಕ್ಷಿಪಾಳ್ಯದ ಹೆಗ್ಗನಹಳ್ಳಿ ಸಮೀಪದ ಗಜಾನನನಗರದಲ್ಲಿ ಕೊಚ್ಚಿ ಕೊಲೆಗೈದು ಕುಣಿಗಲ್‌, ಮಾಗಡಿ ಕಡೆ ತಲೆಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿಗಳ ಚಲನವಲನಗಳ ಮೇಲೆ ನಿಗಾವಹಿಸಿದ್ದು, ಶನಿವಾರ ರಾತ್ರಿ ಸತೀಶ್‌ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿತ್ತು. ಈ ವೇಳೆ ಅಭಿ ಮತ್ತು ಪ್ರವೀಣ್‌ ಬಗ್ಗೆ ಆತ ಬಾಯಿಬಿಟ್ಟಿದ್ದ.

Advertisement

ಆರೋಪಿಗಳ ಕಾಲಿಗೆ ಗುಂಡೇಟು: ಸತೀಶ್‌ ಹೇಳಿಕೆಯನ್ನಾಧರಿಸಿ ಕಾರ್ಯಾಚರಣೆ ನಡೆಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಭಾನುವಾರ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಕಾವೇರಿಪುರದ ಪೇಟೆ ಚಿನ್ನಪ್ಪ ಕೈಗಾರಿಕಾ ಪ್ರದೇಶದ ಬಳಿ ಅಭಿ ಮತ್ತು ಪ್ರವೀಣ್‌ನನ್ನು ಪತ್ತೆ ಹಚ್ಚಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಇನ್‌ಸ್ಪೆಕ್ಟರ್‌ ಜೆ.ಗೌತಮ್‌ ಮತ್ತು ಸಬ್‌ಇನ್‌ಸ್ಪೆಕ್ಟರ್‌ ಅಂದಾನಿಗೌಡ ತಮ್ಮ ತಂಡದೊಂದಿಗೆ ಆರೋಪಿಗಳ ಬಂಧನಕ್ಕೆ ತೆರಳಿದ್ದರು.

ಈ ವೇಳೆ ಪೊಲೀಸರನ್ನು ಕಂಡು ಓಡಲು ಆರಂಭಿಸಿದ ಅಭಿ ಮತ್ತು ಪ್ರವೀಣ್‌ನನ್ನು ಹಿಡಿಯಲು ಮುಂದಾದ ಹೆಡ್‌ಕಾನ್‌ಸ್ಟೆಬಲ್‌ ವಸಂತ್‌ಕುಮಾರ್‌ ಮತ್ತು ಕಾನ್‌ಸ್ಟೆಬಲ್‌ ಸತೀಶ್‌ ಮೇಲೆ ಆರೋಪಿಗಳು, ಡ್ಯಾಗರ್‌ನಿಂದ ಹಲ್ಲೆ ನಡೆಸಿದ್ದು, ಇನ್‌ಸ್ಪೆಕ್ಟರ್‌ ಗೌತಮ್‌ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರು.

ಆದರೂ ಆರೋಪಿಗಳು ಮತ್ತೂಮ್ಮೆ ಹಲ್ಲೆಗೆ ಮುಂದಾಗಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಪಿಐ ಗೌತಮ್‌ ಪ್ರವೀಣ್‌ ಎಡಗಾಲಿಗೆ, ಸಬ್‌ಇನ್‌ಸ್ಪೆಕ್ಟರ್‌ ಅಂದಾನಿಗೌಡ ಅಭಿ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದ ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸೂರಿ-ಬಾಬುನನ್ನು ಕೊಂದು ಜೈಲು ಸೇರಿದ್ದ ಮಹೇಶ: ಕೊಲೆಯಾದ ಕ್ಯಾಂಟರ್‌ ಚಾಲಕ ಮಹೇಶ್‌ ಕುಮಾರ್‌ 2014ರಲ್ಲಿ ತಾವರೆಕೆರೆ ಠಾಣೆ ವ್ಯಾಪ್ತಿಯಲ್ಲಿ ಮದುವೆಯೊಂದರಲ್ಲಿ ರಾಜಗೋಪಾಲನಗರದ ಸೂರಿ ಮತ್ತು ಬಾಬು ಎಂಬವರ ಜತೆ ಗಲಾಟೆ ಮಾಡಿಕೊಂಡಿದ್ದ. ಅದೇ ವಿಚಾರಕ್ಕೆ ಕೆಲ ದಿನಗಳ ಬಳಿಕ ಸೂರಿ ಮತ್ತು ಬಾಬುನನ್ನು ತನ್ನ ಸಹೋದರ ಹಾಗೂ ಇತರೆ ಸಹಚರರ ಜತೆ ಸೇರಿ ಕೊಲೆಗೈದು, ಜೈಲು ಸೇರಿದ್ದ.

ಅದರಿಂದ ಆಕ್ರೋಶಗೊಂಡಿದ್ದ ಸೂರಿ ಸಹಚರರಾದ ಸ್ಲಂ ಭರತ, ಅಭಿ, ಪ್ರವೀಣ್‌ ಮತ್ತು ಸತೀಶ್‌ ನಾಲ್ಕೈದು ಬಾರಿ ಮಹೇಶ್‌ನ ಕೊಲೆಗೆ ವಿಫ‌ಲ ಯತ್ನ ನಡೆಸಿದ್ದರು. ಕಳೆದ ವರ್ಷ ಜೈಲಿನಿಂದ ಬಿಡುಗಡೆಯಾಗಿದ್ದ ಮಹೇಶ್‌, ರಾಜಗೋಪಾಲ ನಗರದಲ್ಲಿ ಕ್ಯಾಂಟರ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳಿಂದ ಮಹೇಶ್‌ನ ಚಲನವಲನಗಳ ಮೇಲೆ ನಿಗಾವಹಿಸಿದ್ದ ಆರೋಪಿಗಳು ಶುಕ್ರವಾರ ರಾತ್ರಿ ಮಹೇಶ್‌ನನ್ನು ಕೊಚ್ಚಿ ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next