ಶ್ರೀನಗರ: ಜಮ್ಮು ಕಾಶ್ಮೀರದ ಬುದ್ಗಾಮ್ ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಹತ್ಯೆಯಾದ ಇಬ್ಬರು ಉಗ್ರರು ಲಷ್ಕರ್ ಎ ತೋಯ್ಬಾ ಸಂಘಟನೆಗೆ ಸೇರಿದವರು ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ.
ಬುದ್ಗಾಮ್ ಪ್ರದೇಶದಲ್ಲಿ ಉಗ್ರರ ಚಲನವಲನದ ಬಗ್ಗೆ ಮಾಹಿತಿಯನ್ನಾಧರಿಸಿ ಸೈನಿಕರು ಮೊಬೈಲ್ ಚೆಕ್ ಪಾಯಿಂಟ್ ಮಾಡಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಬಂದ ವಾಹನವನ್ನು ನಿಲ್ಲಿಸುವಂತೆ ತಡೆದಾಡ ಒಳಗಿದ್ದ ಉಗ್ರ ಸೈನಿಕರತ್ತ ಗುಂಡು ಹಾರಿಸಲು ಆರಂಭಿಸಿದ. ಕೂಡಲೇ ಸೇನೆಯು ತಿರುಗೇಟು ನೀಡಿತು ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ನಿರ್ದಿಷ್ಟ ಮಾಹಿತಿಯ ಮೇರೆಗೆ ಸೇನೆ ಮತ್ತು ಪೊಲೀಸರ ಜಂಟಿ ತಂಡವು ಒಂದು ಶಂಕಿತ ವಾಹನವನ್ನು ತಡೆಯಲು ಪ್ರಯತ್ನಿಸಿತು, ಭಯೋತ್ಪಾದಕರು ಗುಂಡು ಹಾರಿಸಿದರು, ಪ್ರತೀಕಾರವಾಗಿ ಇಬ್ಬರು ಭಯೋತ್ಪಾದಕರು ಕೊಲ್ಲಲ್ಪಟ್ಟರು. ಶಸ್ತ್ರಾಸ್ತ್ರಗಳು/ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಕಾರ್ಯಕಾರಣಿ ನಡುವೆ ಬಿಎಸ್ ವೈ ಜೊತೆ ಪ್ರಧಾನಿ ಮೋದಿ ಪ್ರತ್ಯೇಕ ಚರ್ಚೆ
ಎಡಿಜಿಪಿ ಕಾಶ್ಮೀರ ವಿಜಯ್ ಕುಮಾರ್ ಟ್ವೀಟ್ ಮಾಡಿ, “ಇಬ್ಬರೂ ಹತ್ಯೆಗೀಡಾದ ಭಯೋತ್ಪಾದಕರನ್ನು ಪುಲ್ವಾಮಾದ ಅರ್ಬಾಜ್ ಮಿರ್ ಮತ್ತು ಶಾಹಿದ್ ಶೇಖ್ ಎಂದು ಗುರುತಿಸಲಾಗಿದೆ, ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಹಿಂದೆ ಈ ಭಯೋತ್ಪಾದಕರು ಎನ್ ಕೌಂಟರ್ ನಿಂದ ತಪ್ಪಿಸಿಕೊಂಡಿದ್ದರು” ಎಂದು ಹೇಳಿದರು.