Advertisement

ಪಾಣೆಮಂಗಳೂರು ನೂತನ ಸೇತುವೆ ಕಾಮಗಾರಿಯಿಂದ ನದಿಗೆ ಮಣ್ಣು

10:47 AM Apr 24, 2018 | Team Udayavani |

ಬಂಟ್ವಾಳ: ರಾಷ್ಟ್ರಿಯ ಹೆದ್ದಾರಿ ಗುಂಡ್ಯ- ಬಿ.ಸಿ. ರೋಡ್‌ ಚತುಷ್ಪಥ ಕಾಮಗಾರಿ ನೂತನ ಸೇತುವೆ ಕಾಮಗಾರಿಗಾಗಿ ಪಾಣೆಮಂಗಳೂರು ಕಾಂಕ್ರೀಟ್‌ ಸೇತುವೆ ತಳದಲ್ಲಿ ನೇತ್ರಾವತಿ ನದಿಗೆ 300ಕ್ಕೂ ಅಧಿಕ ಲೋಡು ಮಣ್ಣು ಸುರಿದು ಕಚ್ಚಾ ರಸ್ತೆ ನಿರ್ಮಾಣ ಆಗುತ್ತಿದೆ.

Advertisement

ಸೇತುವೆಗಾಗಿ ಕಾಂಕ್ರೀಟ್‌ ಪಿಲ್ಲರ್‌ ಗಳನ್ನು ಅಳವಡಿಸುವ ಉದ್ದೇಶಕ್ಕೆ ಡ್ರೆಜ್ಜಿಂಗ್‌ ಯಂತ್ರಗಳನ್ನು ನದಿಯ ನಡುವಿಗೆ ಸಾಗಿಸಲು ಈ ಮಣ್ಣಿನ ರಸ್ತೆ ನಿರ್ಮಾಣ ಆಗುತ್ತಿದೆ. ಈಗಾಗಲೇ ಸುಮಾರು ಮುನ್ನೂರಕ್ಕೂ ಅಧಿಕ ಲೋಡ್‌ ಮಣ್ಣನ್ನು ನದಿಗೆ ಸುರಿಯಲಾಗಿದೆ. ನದಿಯಲ್ಲಿ 200 ಮೀಟರ್‌ ಉದ್ದಕ್ಕೆ, 15 ಅಡಿ ಅಗಲಕ್ಕೆ ಮಣ್ಣು ಸುರಿಯುತ್ತ, ಈಗ ನದಿ ಅರ್ಧಕ್ಕೆ ರಸ್ತೆ ನಿರ್ಮಾಣ ಆಗಿದೆ.

ಪಿಲ್ಲರ್‌ ಎಬ್ಬಿಸುವ ಯೋಜನೆ
ಮಳೆಗಾಲ ಮೊದಲು ಡ್ರೆಜ್ಜಿಂಗ್‌ ಯಂತ್ರದಲ್ಲಿ 25ರಿಂದ 30 ಮೀಟರ್‌ ಆಳಕ್ಕೆ ಕೊರೆದು ಗಟ್ಟಿ ಶಿಲಾ ಪದರ ಸಿಕ್ಕುವಲ್ಲಿಂದ ಪಿಲ್ಲರ್‌ ಎಬ್ಬಿಸುವ ಯೋಜನೆ ರೂಪಿಸಲಾಗಿದೆ. ಮಳೆಗಾಲಕ್ಕೆ ಮೊದಲು ಐದು ಪಿಲ್ಲರ್‌ ನಿರ್ಮಿಸುವ ಯೋಜನೆಯಲ್ಲಿ ಕಾಮಗಾರಿ ತ್ವರಿತ ನಡೆಯುತ್ತಿದೆ. ಸ್ಥಳದಲ್ಲಿಯೇ ಸ್ಟೀಲ್‌ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದು ರಾತ್ರಿ ಹಗಲು ಕಾಮಗಾರಿ ನಿರ್ವಹಣೆ ಮಾಡಲಾಗುತ್ತಿದೆ. ಡ್ರೆಜ್ಜಿಂಗ್‌ ಮುಗಿಯುವ ಮೊದಲೇ ಮಳೆ ಬಂದು ನೀರು ಬರುವುದನ್ನು ಯೋಜಿಸಿ ಕಾಮಗಾರಿ ತ್ವರಿತವಾಗಿ ಮುಗಿಸುವ ಉದ್ದೇಶ ಹೊಂದಿದೆ.

400 ಮೀ. ಉದ್ದ
ನೂತನ ಸೇತುವೆ 400 ಮೀ. ಉದ್ದ, 12.5 ಮೀ. ಅಗಲ ಇರುವುದು. ಪ್ರಸ್ತುತ ಹತ್ತು ಪಿಲ್ಲರ್‌ ಯೋಜನೆ ಇದೆ. ನೀರಿನ ಅಡಿಯಲ್ಲಿ ಸಮರ್ಪಕ ಶಿಲೆ ಸಿಗದಿದ್ದಲ್ಲಿ ಪ್ಲ್ರಾನ್‌ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ನದಿಯಲ್ಲಿ ಪ್ರಸ್ತುತ 6 ಮೀ. ನೀರು ಇದ್ದು ಮಣ್ಣಿನ ರಸ್ತೆಯನ್ನು 7 ಮೀ. ಎತ್ತರಕ್ಕೆ ನಿರ್ಮಿಸಿದೆ. ನೀರಿನ ಮಟ್ಟದಿಂದ ಮೂರು ಅಡಿಗಳಷ್ಟು ಎತ್ತರಕ್ಕೆ ರಸ್ತೆಯ ಮಟ್ಟ ಇರುವುದು

ಹೂಳು ತೆಗೆಯಲು ಸಾಧ್ಯವಿಲ್ಲ
ಆಧುನಿಕ ತಂತ್ರಜ್ಞಾನ ಬಂದಿದ್ದರೂ ಹಳೆಯ ಕ್ರಮದಲ್ಲಿ ನದಿಗೆ ಮಣ್ಣು ತುಂಬಿಸಿ ಪ್ರಕೃತಿಯನ್ನು ನಾಶ ಮಾಡುವ ಕಾಮಗಾರಿಯನ್ನು ಸಂಬಂಧಪಟ್ಟ ಕಂಪೆನಿ ಮತ್ತು ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯ ಪುನರ್‌ ಪರಿಶೀಲಿಸಬೇಕು. ನದಿಗೆ ಒಮ್ಮೆ ಮಣ್ಣು ತುಂಬಿಸಿದರೆ ಅದನ್ನು ಪುನಃ ತೆಗೆಯಲು ಸಾಧ್ಯವಿಲ್ಲ. ಇದರಿಂದ ನದಿಯಲ್ಲಿ ಹೂಳು ತುಂಬಿಕೊಂಡು ಜಲಚರಗಳ ಸಂತಾನ ನಾಶ, ನದಿ ಪಾತಳಿ ಮೇಲ್‌ಸ್ತರಕ್ಕೆ ಬರುವ ಸಾಧ್ಯತೆಗಳು ಇದೆ.
– ಬಿ.ಎಂ. ಪ್ರಭಾಕರ
ಸಾಮಾಜಿಕ ಕಾರ್ಯಕರ್ತರು

Advertisement

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next