Advertisement

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

11:52 AM Oct 24, 2021 | Team Udayavani |

ಪುಣೆ: ಸಂಘದ ಮೂಲಕ ಪ್ರತೀ ವರ್ಷ ದಸರಾ ನಾಡಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ. ಈ ಸಂಘವನ್ನು ಕಟ್ಟಿ ಬೆಳೆಸಿ 58 ವರ್ಷಗಳ ದೀರ್ಘ‌ಕಾಲ ಸೇವೆ ಸಲ್ಲಿಸಿದ ಗುಂಡೂರಾಜ್‌ ಎಂ. ಶೆಟ್ಟಿಯವರ ನೆನಪಿಗೊಸ್ಕರವಾಗಿ ನಮ್ಮ ಈ ಸುಂದರ ಭವನಕ್ಕೆ ಗುಂಡೂರಾಜ್‌ ಎಂ. ಶೆಟ್ಟಿ ಮೆಮೋರಿಯಲ್‌ ಹಾಲ್‌ ಎಂದು ಹೆಸರನ್ನಿಟ್ಟಿರುವುದು ಬಹಳಷ್ಟು ಸಂತಸ ತಂದಿದೆ. ಗುಂಡೂರಾಜ್‌ ಶೆಟ್ಟಿಯವರು ಕನ್ನಡ ಸಂಘವನ್ನು ಕಟ್ಟಲು ಬಹಳಷ್ಟು ಶ್ರಮಿಸಿದ್ದಾರೆ. ಡಾ| ಶ್ಯಾಮರಾವ್‌ ಕಲ್ಮಾಡಿ ಹಾಗೂ ಗುಂಡೂರಾಜ್‌ ಶೆಟ್ಟಿ ಅವರು ಅಣ್ಣ ತಮ್ಮಂದಿರಂತೆ ಶ್ರಮಿಸಿ ಪುಣೆಯಲ್ಲಿರುವ ಕನ್ನಡಿಗರನ್ನು ಬಡವ ಬಲ್ಲಿದನೆಂಬ ಯಾವುದೇ ಭೇದಭಾವ ಮಾಡದೆ ಒಗ್ಗೊಡಿಸುವ ಉದ್ದೇಶದಿಂದ ಕನ್ನಡ ಸಂಘವನ್ನು ಕಟ್ಟಿದ್ದರು. ಅನಂತರ ಶಿಕ್ಷಣಕ್ಕೆ ಆದ್ಯತೆ ನೀಡಿ ಕನ್ನಡ ಶಾಲೆಯನ್ನು ತೆರೆಯಲಾಯಿತು. ಅಂತಹ ಸಂಸ್ಥೆ ಬೆಳವಣಿಗೆಯನ್ನು ಹೊಂದುತ್ತಾ ಇಂದು ವಿಶಾಲ ವೃಕ್ಷವಾಗಿ ಸಂಘದ ಶೈಕ್ಷಣಿಕ ಸಂಸ್ಥೆಗಳಲ್ಲಿ ಸುಮಾರು 9 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಸುಮಾರು 450 ಶಿಕ್ಷಕರು ಹಾಗೂ ಸಿಬಂದಿ ವರ್ಗವನ್ನು ಹೊಂದಿದೆ ಎನ್ನಲು ಹೆಮ್ಮೆಯಾಗುತ್ತಿದೆ ಎಂದು ಪುಣೆ ಕನ್ನಡ ಸಂಘದ ಅಧ್ಯಕ್ಷ ಕುಶಲ್‌ ಹೆಗ್ಡೆ ಅಭಿಪ್ರಾಯಪಟ್ಟರು.

Advertisement

ಅವರು ಅ. 15ರಂದು ದಸರಾ ನಾಡಹಬ್ಬ ಹಾಗೂ ಕನ್ನಡ ಸಂಘದ ಸಭಾ ಭವನಕ್ಕೆ ಗುಂಡೂರಾಜ್‌ ಶೆಟ್ಟಿ ಮೆಮೋರಿಯಲ್‌ ಹಾಲ್‌ ಹೆಸರನ್ನು ಅನಾವರಣಗೊಳಿಸಿ ಮಾತನಾಡಿ, ಗುಂಡೂರಾಜ್‌ ಶೆಟ್ಟಿ ಅವರು ದೂರದೃಷ್ಟಿಯನ್ನು ಹೊಂದಿದ ನಾಯಕರಾಗಿದ್ದು, ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಸಂಘಕ್ಕೆ ಅವರ ಕೊಡುಗೆ ಅಪಾರವಾಗಿದೆ. ಇದೀಗ ಅವರ ಕುಟುಂಬ ಸದಸ್ಯರೂ ಕನ್ನಡ ಸಂಘದೊಂದಿಗೆ ಇದ್ದು ಅವರ ಸೇವೆಯನ್ನು ಮುಂದುವರಿಸುತ್ತಿದ್ದಾರೆ ಎಂದರು.

ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌ ಮಾತನಾಡಿ, ಕನ್ನಡ ಸಂಘದ ಈ ಸುಂದರ ಭವನದಲ್ಲಿ ಕನ್ನಡಿಗರ ನೂರಾರು ಸಾಂಸ್ಕೃತಿಕ, ಕಲಾ, ಸಾಹಿತ್ಯಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಾ ಬಂದಿದೆ. ಇದೊಂದು ಕನ್ನಡಿಗರ ಕೂಡು ಕುಟುಂಬದ ಚಾವಡಿಯಿದ್ದಂತೆ. ಗುಂಡೂರಾಜ್‌ ಶೆಟ್ಟಿಯವರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಾಮಾಣಿಕವಾಗಿ ದಕ್ಷತೆಯಿಂದ ತೊಡಗಿಸಿಕೊಂಡಿದ್ದರು. ಗುಂಡೂರಾಜ್‌ ಶೆಟ್ಟಿಯವರ ಮನಸ್ಸು ಮಾತ್ರ ನಿರ್ಮಲವಾಗಿತ್ತು. ಸ್ತ್ರೀಯರನ್ನು ಗೌರವಭಾವದಿಂದ ಕಾಣುತ್ತಿದ್ದರು. ಉದ್ಯಮದಲ್ಲಿ ಯಶಸ್ವಿ ಉದ್ಯಮಿಯಾಗಿದ್ದರು. ಮರಾಠಿ ಬಾಂಧವರೊಂದಿಗೂ ಅನ್ಯೋನ್ಯವಾಗಿದ್ದರು. ಅವರನ್ನು ಕನ್ನಡ ಸಂಘ ಸದಾ ಸ್ಮರಿಸುತ್ತಿದೆ. ಅವರ ಹೆಸರನ್ನು ಈ ಭವನಕ್ಕೆ ಈ ಇಟ್ಟಿರುವುದರಿಂದ ರಾಜನ ತಲೆಗೆ ಕಿರೀಟವಿರಿಸಿದಂತಾಗಿದೆ ಎಂದರು.

ಗುಂಡೂರಾಜ್‌ ಶೆಟ್ಟಿಯವರ ಸೊಸೆ ದೇವಿಕಾ ಉದಯ್‌ ಶೆಟ್ಟಿಯವರು ಕನ್ನಡ ಸಂಘಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ ಮಾತನಾಡಿ, ತನ್ನ ಮಾವನವರಾದ ಗುಂಡೂರಾಜ್‌ ಶೆಟ್ಟಿಯವರು ಕುಟುಂಬವನ್ನು ಪ್ರೀತಿಸಿದಂತೆಯೇ ಕನ್ನಡ ಸಂಘವನ್ನು ಇನ್ನೂ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅವರ ಪ್ರೇರಣೆಯಿಂದಾಗಿ ನಾವೂ ಕನ್ನಡ ಸಂಘದೊಂದಿಗೆ ಒಂದು ಪರಿವಾರದಂತೆ ಇರುವುದು ಹೆಮ್ಮೆಯೆನಿಸುತ್ತದೆ ಎಂದರು.

ಪುಣೆ ಕನ್ನಡ ಸಂಘದ ಕಾರ್ಯದರ್ಶಿ ಮಾಲತಿ ಕಲ್ಮಾಡಿಯವರು ಧನ್ಯವಾದಗಳನ್ನು ಸಮರ್ಪಿಸುತ್ತಾ ಇಂದು ಬಹಳ ಸಂತೋಷದ ದಿನವಾಗಿದೆ. ಕನ್ನಡ ಸಂಘಕ್ಕೆ ಸುದೀರ್ಘ‌ ಕಾಲ ಕೊಡುಗೆ ಸಲ್ಲಿಸಿದ ಗುಂಡೂರಾಜ್‌ ಶೆಟ್ಟಿಯವರ ಹೇಸದನ್ನು ನಮ್ಮ ಭವನಕ್ಕೆ ನೀಡಿ ಅವರ ಸೇವೆಯನ್ನು ಸದಾ ಸ್ಮರಣೀಯವಾಗಿಸಿದೆ ಎಂದರು.

Advertisement

ವೇದಿಕೆಯಲ್ಲಿ ಕನ್ನಡ ಸಂಘದ ಕೋಶಾಧಿಕಾರಿ ಶ್ರೀನಿವಾಸ ಆಳ್ವ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಿ| ಗುಂಡೂರಾಜ್‌ ಶೆಟ್ಟಿಯವರ ಪತ್ನಿ ಯಶೋದಾ ಜಿ. ಶೆಟ್ಟಿ ಅವರನ್ನು ಶಾಲು ಹೊದೆಸಿ, ಹೂವಿನ ಗಿಡವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭ ಗುಂಡೂ ರಾಜ್‌ ಶೆಟ್ಟಿಯವರ ಪರಿವಾರ ಸದಸ್ಯರೆಲ್ಲರೂ ಉಪಸ್ಥಿತರಿದ್ದರು. ಮೊದಲಿಗೆ ದಸರಾ ನಾಡಹಬ್ಬವನ್ನು ಅಧ್ಯಕ್ಷ ಕುಶಲ್‌ ಹೆಗ್ಡೆ ಹಾಗೂ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಸಭಾ ಭವನದಲ್ಲಿ ಗುಂಡೂರಾಜ್‌ ಶೆಟ್ಟಿ ಮೆಮೋರಿಯಲ್‌ ಹಾಲ್‌ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ನೇತ್ರಾ ಹಾಗೂ ಛಾಯಾ ಪ್ರಾರ್ಥನೆಗೈದರು.

ಕಾರ್ಯಕ್ರಮದಲ್ಲಿ ಕನ್ನಡ ಸಂಘದ ವಿಶ್ವಸ್ಥರಾದ ಡಾ| ಬಾಲಾಜಿತ್‌ ಶೆಟ್ಟಿ, ಡಾ| ಶಶಿಕಲಾ ಗುರುಪುರ, ಜನಸಂಪರ್ಕಾಧಿಕಾರಿ ರಾಮದಾಸ ಆಚಾರ್ಯ, ಕನ್ನಡ ಮಾಧ್ಯಮ ಹೈಸ್ಕೂಲ್‌ನ ಮುಖ್ಯ ಶಿಕ್ಷಕ ಚಂದ್ರಕಾಂತ ಹಾರಕೂಡೆ, ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು, ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸಂಘವನ್ನು ಕಟ್ಟಿ ದೀರ್ಘ‌ಕಾಲ ಸೇವೆ ಸಲ್ಲಿಸಿದ ವ್ಯಕ್ತಿತ್ವವಾದ ಗುಂಡೂರಾಜ್‌ ಶೆಟ್ಟಿಯವರನ್ನು ಒಂದು ಎತ್ತರದ ಸ್ಥಾನದಲ್ಲಿ ನಿಲ್ಲಿಸಿದ ಕೀರ್ತಿ ಕನ್ನಡ ಸಂಘದ್ದಾಗಿದೆ. ಗುಂಡೂರಾಜ್‌ ಶೆಟ್ಟಿಯವರು ಡಾ |ಕಲ್ಮಾಡಿ ಯವರೊಂದಿಗೆ ಸೇರಿ ಆ ಕಾಲದಲ್ಲಿ ಕಷ್ಟಪಟ್ಟು ಸಂಘವನ್ನು ಕಟ್ಟಿ ಕನ್ನಡಿಗರನ್ನು ಒಂದುಗೂಡಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಅಂದು ಯಾವ ಉದ್ದೇಶದಿಂದ ಈ ಸಂಘವನ್ನು ಸ್ಥಾಪಿಸಿದ್ದರೂ ಅದೇ ಉದ್ದೇಶವನ್ನು ಈಡೇರಿಸಿಕೊಂಡು ಸಾರ್ಥಕತೆಯ ಹಾದಿಯಲ್ಲಿ ಮುನ್ನಡೆಯುತ್ತಿರುವುದು ಸಂಘದ ಹೆಗ್ಗಳಿಕೆಯಾಗಿದೆ. ಅವರು ಕೇವಲ ಕನ್ನಡ ಸಂಘ ಮಾತ್ರವಲ್ಲ ಬಂಟರ ಸಂಘದ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದ್ದಾರೆ. ಓರ್ವ ದೂರದೃಷ್ಟಿ ಆಲೋಚನೆಯ, ಶ್ರೇಷ್ಠ ನಾಯಕತ್ವದ ಗುಣಗಳನ್ನು ಹೊಂದಿದ ಸಮಾಜ ಸೇವಕನಾಗಿ ಗುಂಡೂರಾಜ್‌ ಶೆಟ್ಟಿಯವರು ಗುರುತಿಸಿಕೊಂಡಿದ್ದರು. ಅವರ ಕುಟುಂಬವೂ ಕನ್ನಡ ಸಂಘದೊಂದಿಗೆ ಅವರ ಹಾದಿಯಲ್ಲಿ ಮುನ್ನಡೆಯುತ್ತಿರುವುದು ಅಭಿನಂದನೀಯವಾಗಿದೆ.ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟುಅಧ್ಯಕ್ಷ, ಪುಣೆ ಬಂಟರ ಸಂಘ

ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next