Advertisement

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

02:23 AM May 19, 2024 | Team Udayavani |

ಕೋಟ: ಸಾಸ್ತಾನ ಗುಂಡ್ಮಿಯ ಟೋಲ್‌ ಪ್ಲಾಜಾದಲ್ಲಿ ಸ್ಥಳೀಯರಿಗೆ ನೀಡಲಾಗಿರುವ ಶುಲ್ಕ ವಿನಾಯಿತಿಯನ್ನು ನಿಧಾನವಾಗಿ ಸ್ಥಗಿತಗೊಳಿಸಿ ಶುಲ್ಕ ಹೇರಿಕೆ ಮಾಡುವ ಅನುಮಾನ ವ್ಯಕ್ತವಾಗುತ್ತಿದ್ದು, ಸ್ಥಳೀಯರ ಹಲವು ವಾಹನಗಳಿಂದ ಈಗಾಗಲೇ ಸುಂಕ ವಸೂಲಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಶನಿವಾರ ಟೋಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು ಹಾಗೂ ಸ್ವಲ್ಪ ಸಮಯ ರಸ್ತೆ ತಡೆ ನಡೆಸಲಾಯಿತು.

Advertisement

ಹೋರಾಟದ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು. ಹೆದ್ದಾರಿ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಪ್ರತಾಪ್‌ ಶೆಟ್ಟಿ ಮಾತನಾಡಿ, 2018ರಲ್ಲಿ ಶುಲ್ಕ ವಿನಾಯಿತಿಗಾಗಿ ದೊಡ್ಡ ಮಟ್ಟದ ಹೋರಾಟ ನಡೆದ ಅನಂತರ ಜಿಲ್ಲಾಡಳಿತ, ಜನಪ್ರತಿನಿಧಿಗಳ ಉಪಸ್ಥಿತಿ ಯಲ್ಲಿ ಅಧಿಕೃತವಾಗಿ ಸಭೆ ನಡೆದು ಕೋಟ ಜಿ.ಪಂ. ಕ್ಷೇತ್ರ ಮತ್ತು ಸಾಲಿಗ್ರಾಮ ಪ.ಪಂ.ವ್ಯಾಪ್ತಿಯ ಎಲ್ಲ ವಾಹನಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿತ್ತು. ಅನಂತರ ಹಲವಾರು ಬಾರಿ ಟೋಲ್‌ ಹೇರಿಕೆ ಪ್ರಯತ್ನಗಳು ನಡೆದಾಗಲೂ ಜಿಲ್ಲೆಯಲ್ಲೇ ದೊಡ್ಡ ಮಟ್ಟದ ಹೋರಾಟಕ್ಕೆ ಕೋಟ, ಸಾಸ್ತಾನ ಭಾಗ ಸಾಕ್ಷಿಯಾಗಿತ್ತು. ಇದೀಗ ರಾ.ಹೆ.ಯ ನಿರ್ವಹಣೆ, ಟೋಲ್‌ ಸಂಗ್ರಹದ ಹೊಣೆ ನವಯುಗದಿಂದ ಬೇರೊಂದು ಖಾಸಗಿ ಕಂಪೆನಿ ಪಾಲಾಗಿದೆ. ಹೀಗಾಗಿ ಸ್ಥಳೀಯರಿಗೆ ನೀಡಿರುವ ವಿನಾಯಿತಿ ಕಡಿತಗೊಳಿಸುವ ಪ್ರಯತ್ನಗಳು ಮತ್ತೆ ನಡೆಯುತ್ತಿದೆ. ಈಗ ನಾವು ಮತ್ತೆ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು.

ಪ್ರತಿಭಟನೆ ಅನಿವಾರ್ಯ
ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ ನಾೖರಿ, ಕಾರ್ಯದರ್ಶಿ ಅಲ್ವಿನ್‌ ಅಂದ್ರಾದೆ ಮಾತನಾಡಿ, ಸ್ಥಳೀಯರಿಗೆ ನೀಡಲಾಗಿರುವ ಟೋಲ್‌ ವಿನಾಯಿತಿಯನ್ನು ರದ್ದುಪಡಿಸುವ ಎಲ್ಲ ಸಿದ್ಧತೆ ಮಾಡಲಾಗಿದೆ. ಮುಂದಿನ ತಿಂಗಳಿಂದ ಪ್ರತಿಯೊಬ್ಬರು ಟೋಲ್‌ ಪಾವತಿಸಬೇಕು ಎನ್ನುವ ಮಾತನ್ನು ಟೋಲ್‌ ಅಧಿಕಾರಿಗಳು ಪರೋಕ್ಷವಾಗಿ ಈಗಾಗಲೇ ಘೋಷಿಸಿದ್ದಾರೆ. ಆದ್ದರಿಂದ ನಾವು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರತಿಭಟಿಸಬೇಕು. ವಾಣಿಜ್ಯ ವಾಹನಗಳ ಸಂಘಟನೆಯವರು ಹೆಚ್ಚಿನ ಸಹಕಾರ ನೀಡಬೇಕು ಎಂದರು.

ಮಾಜಿ ಕಾರ್ಯದರ್ಶಿ ಐರೋಡಿ ವಿಟuಲ ಪೂಜಾರಿ ಮಾತನಾಡಿದರು. ಇಬ್ರಾಹಿಂ ಸಾಹೇಬ್‌ ಕೋಟ, ನಾಗರಾಜ್‌ ಗಾಣಿಗ ಸಾಲಿಗ್ರಾಮ, ಚಂದ್ರಮೋಹನ್‌ ಪಾಂಡೇಶ್ವರ, ಸುರೇಶ್‌ ಗಿಳಿಯಾರು ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ನೂರಾರು ಸಂಖ್ಯೆಯಲ್ಲಿ ಹೋರಾಟಗಾರರು ಟೋಲ್‌ಪ್ಲಾಜಾಕ್ಕೆ ಮುತ್ತಿಗೆ ಹಾಕಿದರು.

ಪ್ರತಿಭಟನೆ ಕಾವೇರುತ್ತಿದ್ದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನ ನಿರತರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದರು.

Advertisement

ರಸ್ತೆಗೆ ಇಳಿಯದ
ವಾಹನಕ್ಕೂ ಟೋಲ್‌!
ಟೋಲ್‌ ಪ್ಲಾಜಾದ ಕಡೆ ಸುಳಿಯದೆ ಮನೆಯಲ್ಲಿ ನಿಂತ ವಾಹನಕ್ಕೂ ಶುಲ್ಕ ಕಡಿತವಾಗು ತ್ತಿರುವುದಾಗಿ ಕೆಲವರು ದೂರಿದರು. ಈ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುವ ಬಗ್ಗೆ ತೀರ್ಮಾನಿಸಲಾಯಿತು.

ಪ್ರತ್ಯೇಕ ಪ್ರತಿಭಟನೆ
ಹೋರಾಟಕ್ಕೆ ಕೆಲವೇ ಗಂಟೆಗಳ ಮೊದಲು ಕೋಟ ನಾಗೇಂದ್ರ ಪುತ್ರನ್‌ ಅವರ ಕಾರಿಗೆ ಶುಲ್ಕ ಕಡಿತ ಗೊಳಿಸಲಾಗಿತ್ತು. ಅದನ್ನು ವಿರೋಧಿಸಿ ಅವರು 1 ಗಂಟೆಗೂ ಹೆಚ್ಚು ಕಾಲ ಕಾರನ್ನು ಗೇಟಿಗೆ ಅಡ್ಡ ಇಟ್ಟು ಪ್ರತಿಭಟಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next