Advertisement

Forest encroachment: ಅರಣ್ಯ ಒತ್ತುವರಿ ತಡೆಗೆ ಉಪಗ್ರಹ ಆಧಾರಿತ ಎಚ್ಚರಿಕೆ ವ್ಯವಸ್ಥೆ

09:23 PM Jun 27, 2024 | Team Udayavani |

ಬೆಂಗಳೂರು: ಅರಣ್ಯ ಒತ್ತುವರಿ ತಡೆ ಮತ್ತು ಸಂಪತ್ತಿನ ಸಂರಕ್ಷಣೆಯನ್ನು ಪರಿಣಾಮಕಾರಿಯಾಗಿ ತಡೆಯಲು ಉಪಗ್ರಹ ಆಧಾರಿತ ಎಚ್ಚರಿಕೆ ರವಾನೆ ವ್ಯವಸ್ಥೆ ರೂಪಿಸುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.

Advertisement

ಅರಣ್ಯ ಭೂಮಿ ಒತ್ತುವರಿ ತಡೆ ಮತ್ತು ವೃಕ್ಷ ಸಂರಕ್ಷಣೆ ಕುರಿತು ಬೆಂಗಳೂರಿನ ಅರಣ್ಯ ಭವನದಲ್ಲಿ ಗುರುವಾರ ಉನ್ನತಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೆ ಇಸ್ರೋದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (ಎನ್‌ಆರ್‌ಎಸ್‌ಸಿ)ಗೆ ಮಾಹಿತಿ ಬರುತ್ತದೆ, ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆ (ಎನ್‌ಆರ್‌ಎಸ್‌ಸಿ)ಗೆ ಮಾಹಿತಿ ರವಾನೆ ಆಗಿ ತದನಂತರ ಸಂಬಂಧಿತ ಅರಣ್ಯ ವಲಯದ ಸಿಬ್ಬಂದಿಗೆ ಎಚ್ಚರಿಕೆ ಹೋಗುವ ವ್ಯವಸ್ಥೆ ಇದೆ ಎಂದರು.

ಅದೇ ಮಾದರಿಯಲ್ಲಿ ಈಗಾಗಲೇ ಅಕ್ಷಾಂಶ ಮತ್ತು ರೇಖಾಂಶದ ಆಧಾರದ ಮೇಲೆ ಜಿಯೋ ರೆಫರೆನ್ಸ್ ಮೂಲಕ ರಾಜ್ಯದ ಅರಣ್ಯ ಪ್ರದೇಶದ ಗಡಿಗಳನ್ನು ಗುರುತಿಸಲಾಗಿದ್ದು, ಈ ದತ್ತಾಂಶವನ್ನು ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರಕ್ಕೆ (ಕೆಎಸ್‌ಆರ್‌ಸ್ಯಾಕ್‌) ನೀಡಿ, ಮರಗಳ ಕಡಿತ ಮತ್ತು ಭೂ ಒತ್ತುವರಿಯ ಕುರಿತಂತೆ ಸಕಾಲಿಕ ಎಚ್ಚರಿಕೆ ನೀಡುವ ವ್ಯವಸ್ಥೆಯೊಂದನ್ನು ಆದಷ್ಟು ಶೀಘ್ರ ರೂಪಿಸಲು ಪ್ರಸ್ತಾವನೆ ಸಲ್ಲಿಸಲು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಅವರಿಗೆ ಸೂಚನೆ ನೀಡಿದರು.

ಕಾಲಮಿತಿಯಲ್ಲಿ ಅರ್ಜಿ ಇತ್ಯರ್ಥಕ್ಕೆ ಸೂಚನೆ:

ವಲಯ ಅರಣ್ಯಾಧಿಕಾರಿಗಳ ಮಟ್ಟದಲ್ಲಿ ಅರಣ್ಯ ಒತ್ತುವರಿಯ ಮತ್ತು ಅರಣ್ಯ ಹಕ್ಕು ಕಾಯಿದೆಯ ಅರ್ಜಿಗಳ ಕುರಿತಂತೆ ಸಂಪೂರ್ಣ ಮಾಹಿತಿಯ ದತ್ತಾಂಶವನ್ನು ಸಿದ್ಧಪಡಿಸಿ, ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಸಕಾಲದಲ್ಲಿ ಆಕ್ಷೇಪಣೆ ಸಲ್ಲಿಸಿ ಇವುಗಳ ಇತ್ಯರ್ಥಕ್ಕೆ ಕ್ರಮವಹಿಸಬೇಕು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಟ್ಟದಲ್ಲಿ ಬಾಕಿ ಇರುವ ಎಲ್ಲ 64ಎ ಪ್ರಕರಣಗಳನ್ನು ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಮುಂದಿರುವ ಮೇಲ್ಮನವಿಗಳನ್ನು ಕಾಲಮಿತಿಯಲ್ಲಿ ಅಂದರೆ ಒಂದು ವರ್ಷದೊಳಗೆ ಇತ್ಯರ್ಥಪಡಿಸುವಂತೆ ಸಚಿವರು ಕಟ್ಟಪ್ಪಣೆ ಮಾಡಿದರು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next