Advertisement

ಪ್ರಕೃತಿ ರಕ್ಷಣೆಗೆ ಕಾಂಡ್ಲಾ ಕಾಡು  

06:00 AM Sep 22, 2018 | Team Udayavani |

ಕೋಟ: ಕರಾವಳಿಯ ಹಿನ್ನೀರಿನಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾಂಡ್ಲಾವನಗಳು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.  ಆದರೆ ಇದರ ಮಹತ್ವವನ್ನು ಅರಿಯದೆ ನಾಶಪಡಿಸುವುದರಿಂದ ಇದು ನಶಿಸುವ ಹಂತದಲ್ಲಿದೆ. ಹೀಗಾಗಿ  ಇದನ್ನು ರಕ್ಷಿಸಲು ಅರಣ್ಯ ಇಲಾಖೆ ಸ್ಥಳೀಯರ ಮೂಲಕ ಕಾಂಡ್ಲಾ ವನಗಳನ್ನು ಬೆಳೆಸುತ್ತಿದೆ. ಗುಂಡ್ಮಿ, ಪಾರಂಪಳ್ಳಿ ಹೊಳೆ ಹಿನ್ನೀರಿನಲ್ಲಿ ಸುಮಾರು 15 ಹೆಕ್ಟೇರ್‌ ಪ್ರದೇಶದ ಹಿನ್ನೀರಿನಲ್ಲಿ ಕಾಂಡ್ಲಾ ಗಿಡಗಳನ್ನು ನಾಟಿ ಮಾಡಿದ್ದು ಲಕ್ಷಾಂತರ ಗಿಡಗಳು ಬೆಳೆದು ನಿಂತಿವೆ. 

Advertisement

ಕಾಂಡ್ಲಾ ವನ ನಿರ್ಮಾಣ
ಕೋಡಿಕನ್ಯಾಣ ಸೇತುವೆಯಿಂದ ಉತ್ತರಕ್ಕೆ ಗುಂಡ್ಮಿ ಬಡಾಅಲಿತೋಟ ಮೂಲಕ ಪಾರಂಪಳ್ಳಿ ಸೇತುವೆ ತನಕ ಹತ್ತಾರು ಮಂದಿ ಸ್ಥಳೀಯರು 4 ತಿಂಗಳು ಕೆಲಸ ಮಾಡಿ 15 ಎಕ್ರೆ ಪ್ರದೇಶದಲ್ಲಿ ಕಾಂಡ್ಲಾ ಗಿಡಗಳನ್ನು ನಾಟಿ ಮಾಡಿದ್ದಾರೆ. ಇದರಲ್ಲಿ ಸುಮಾರು ಶೇ.75ಕ್ಕಿಂತ ಹೆಚ್ಚು ಗಿಡಗಳು ಬದುಕುಳಿದಿವೆ. ವಿಶೇಷವೆಂದರೆ  ಕಾಂಡ್ಲಾದ ಕಾಯಿ, ಕೋಡುಗಳೇ ಈ ಸಸ್ಯ ಪರಂಪರೆಯ ಕೊಂಡಿ. ಮರದಿಂದ ಬೇರ್ಪಟ್ಟು, ನೀರಿನ ತಳದ ಕೆಸರಿಗೆ ಅಡಿಮುಖವಾಗಿ ಇಳಿಯುವ  ಕೋಡುಗಳು, ಗಿಡಗಳಾಗಿ ರೂಪ ಪಡೆಯುತ್ತವೆ. ಇಂತಹ ಲಕ್ಷಾಂತರ ಕೋಡುಗಳನ್ನು ಸಂಗ್ರಹಿಸಿ ಇಲ್ಲಿ ನಾಟಿ ಮಾಡಲಾಗಿದೆ.

ಕಾಂಡ್ಲಾ ವನದ ಉಪಯೋಗ 
ಕಾಂಡ್ಲದ  ಮೂಲ ಹೆಸರು ಮ್ಯಾಂಗ್ರೋವ್‌. ನಮ್ಮ ರಾಜ್ಯದಲ್ಲಿ 25ಕ್ಕೆ ಹೆಚ್ಚಿನ  ಪ್ರಭೇದಗಳಲ್ಲಿ ಇದರು ಕಾಣಸಿಗುತ್ತದೆ. ಇದರ ಬೇರುಗಳು ತೀರಪ್ರದೇಶದ ಮಣ್ಣನ್ನು ಬಿಗಿಯಾಗಿ ಹಿಡಿಯುವುದರಿಂದ ಸಮುದ್ರ ಹಾಗೂ ಭೂ ಕೊರೆತಕ್ಕೆ ತಡೆಯಾಗುತ್ತದೆ. ಮರಗಳು ತಡೆಗೋಡೆಯಂತೆ ಬೆಳೆದು ನಿಲ್ಲುವುದರಿಂದ ಬಿರುಗಾಳಿ, ಚಂಡಮಾರುತ, ಪ್ರವಾಹ, ಕಡಲ್ಕೊರೆತ, ಸುನಾಮಿಯಂಥ  ಪ್ರಕೃತಿ ವಿಕೋಪದ ಜತೆಗೆ ಸಮುದ್ರದ ತೀರದಲ್ಲಿ ಉಂಟಾಗುವ ವಿನಾಶವನ್ನು ತಡೆಯುವ ಅಪಾರ ಶಕ್ತಿ ಇವುಗಳಿಗಿದೆ. ಇದರ ದಪ್ಪ ಹಸಿರು ಎಲೆಗಳು ಅಧಿಕ  ಅಧಿಕ ಪ್ರಮಾಣದಲ್ಲಿ  ಆಮ್ಲಜನಕ ಬಿಡುಗಡೆ ಮಾಡುತ್ತದೆ. ಜತೆಗೆ ಜಲಚರಗಳ ಸಂತಾನಾಭಿವೃದ್ಧಿಗೂ ಪೂರಕವಾಗಿವೆ. ಕಾಂಡ್ಲಾ ವನ ನಾಶಪಡಿಸುವುದು ಕರ್ನಾಟಕ ಅರಣ್ಯ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧವೂ ಆಗಿದೆ.  

ಪರಿಸರ ರಕ್ಷಣೆ 
ನಮ್ಮೂರಿನಲ್ಲಿ ಬೆಳೆಸಲಾದ ಕಾಂಡ್ಲಾಗಳಲ್ಲಿ ಶೇ.75ಕ್ಕಿಂತ ಹೆಚ್ಚು ಗಿಡಗಳು ಬದುಕುಳಿದಿರುವುದು ದಾಖಲೆಯಾಗಿದೆ. ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪ್ಲಿಪರ್ಡ್‌ ಲೋಬೊ, ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಪ್ರಭಾಕರನ್‌ ಮುಂತಾದವರು ಕಾಂಡ್ಲಾವನದ  ಪ್ರಗತಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
– ಸತೀಶ್‌ ತಿಂಗಳಾಯ ಬಡಾಲಿ ತೋಟ, ಸ್ಥಳೀಯ ನಿವಾಸಿ    

ಕಾಂಡ್ಲಾವನ ಯೋಜನೆ
ನಶಿಸುತ್ತಿರುವ ಕಾಂಡ್ಲಾ ಉಳಿಸಿಕೊಳ್ಳಲು ಸರಕಾರ ಕಾಂಡ್ಲಾವನ ಯೋಜನೆಯನ್ನು ಹಾಕಿಕೊಂಡಿದೆ. ಗುಂಡ್ಮಿಯಲ್ಲಿ  ಸ್ಥಳೀಯರ ಮೂಲಕ 15ಹೆಕ್ಟೆರ್‌ ಪ್ರದೇಶದಲ್ಲಿ ಕಾಂಡ್ಲವನ ನಿರ್ಮಿಸಲಾಗಿದೆ. ಕಟಪಾಡಿ ಮಟ್ಟುವಿನ ಪಿನಾಕಿನಿ ಹೊಳೆಯಲ್ಲೂ ಇಲಾಖೆಯಿಂದ ಕಾಂಡ್ಲಾ  ಕಾಡು ಬೆಳೆಸಿದ್ದಾರೆ.
– ಜೀವನ್‌ದಾಸ್‌ ಶೆಟ್ಟಿ, 
ಉಪ ವಲಯ ಅರಣ್ಯಾಧಿಕಾರಿ, ಬ್ರಹ್ಮಾವರ

Advertisement
Advertisement

Udayavani is now on Telegram. Click here to join our channel and stay updated with the latest news.

Next