ಗುಂಡ್ಲುಪೇಟೆ(ಚಾಮರಾಜನಗರ): ಕೊಳೆತ ಸ್ಥಿತಿಯಲ್ಲಿ ಹುಲಿಯೊಂದರ ಮೃತ ದೇಹ ಪತ್ತೆಯಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಹುಲಿಯು 4 ವರ್ಷದ ಪ್ರಾಯದ್ದಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಲಿಂಗ ಗುರುತಿಸಲು ಸಾಧ್ಯವಾಗಿಲ್ಲ. ಅರಣ್ಯ ಸಿಬ್ಬಂದಿಗಳು ಗಸ್ತು ತಿರುಗುವಾಗ ಅರಣ್ಯ ಪ್ರದೇಶದ ಗಿಡಗಂಟಿಗಳ ಪೊದೆಯಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದ್ದು, ಹುಲಿಯು ವನ್ಯಜೀವಿಯ ಜತೆಗಿನ ಕಾದಾಟದಿಂದ ಸುಮಾರು 12ರಿಂದ 15 ದಿನಗಳ ಹಿಂದೆ ಸಾವನ್ನಪ್ಪಿರುವುದಾಗಿ ಅರಣ್ಯ ಇಲಾಖಾ ಪಶು ವೈದ್ಯಾಧಿಕಾರಿ ಡಾ.ವಾಸಿಂ ಮಿರ್ಜಾ ಮಾಹಿತಿ ನೀಡಿದರು.
ಹುಲಿಯ ಸಾವಿನ ಬಗ್ಗೆ ಹೆಚ್ಚಿನ ವಿವರ ಸಂಗ್ರಹಿಸುವ ಸಲುವಾಗಿ ಮೃತ ಹುಲಿಯ ಅಂಗಾಂಗಳನ್ನು ಸಂಗ್ರಹಿಸಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್.ಎಸ್ ತಿಳಿಸಿದರು.
ಸ್ಥಳಕ್ಕೆ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಎನ್.ಬೇಗೂರು ವಲಯ ವಲಯ ಅರಣ್ಯಾಧಿಕಾರಿ ಮಂಜುನಾಥ ಡಿ ಬಾಗೇವಾಡಿ, ಗುಂಡ್ರೆ ವಲಯದ ವಲಯ ಅರಣ್ಯಾಧಿಕಾರಿ ಅಮೃತೇಶ್ ಬಿ.ಬಿ, ಇಲಾಖಾ ಪಶು ವೈಧ್ಯಾಧಿಕಾರಿ ಡಾ.ವಾಸಿಂ ಮಿರ್ಜಾ ಹಾಗೂ ಇಲಾಖಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಾಮನುಸಾರ ಮೃತ ಹುಲಿಯನ್ನು ಕಟ್ಟಿಗೆ ಮೂಲಕ ಸುಡಲಾಯಿತು.
ಈ ವೇಳೆ ಎನ್.ಟಿ.ಸಿ.ಎ ಪ್ರತಿನಿಧಿ ಕೃತಿಕಾ ಅಲನಹಳ್ಳಿ, ಸರ್ಕಾರೇತರ ಸಂಸ್ಥೆ ಸದಸ್ಯರಾದ ರಘುರಾಂ.ಆರ್, ಗ್ರಾಪಂ ಸದಸ್ಯರಾದ ಕುಮಾರ್ ಸೇರಿದಂತೆ ಹೆಡಿಯಾಲ ಉಪ ವಿಭಾಗ ಅರಣ್ಯಾಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಹಾಜರಿದ್ದರು.