ಗುಂಡ್ಲುಪೇಟೆ (ಚಾಮರಾಜನಗರ): ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಲಕ್ಕಿಪುರ ಗ್ರಾಮಕ್ಕೆ ಹೊಂದಿಕೊಂಡ ಜಮೀನೊಂದರಲ್ಲಿ ಇಬ್ಬರು ರೈತರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಸುಮಾರು 10 ವರ್ಷದ ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಜಿಟಿಜಿಟಿ ಮಳೆ ನಡುವೆಯೂ ಆನೆಗಳ ಸಹಾಯದಿಂದ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಭಾನುವಾರ ಬೆಳಗ್ಗೆ ಸೆರೆ ಹಿಡಿದಿದ್ದಾರೆ.
ಹುಲಿಯು ಶನಿವಾರ ಗೋಪಾಲಪುರ ಗ್ರಾಮದ ಗವಿಯಪ್ಪ ಮತ್ತು ರಾಜಶೇಖರ್ ಹಾಗು ಒಂದು ಹಸುವಿನ ಮೇಲೆ ದಾಳಿ ನಡೆಸಿ ಶಿವಬಸಪ್ಪ ಎಂಬ ರೈತ ಬಾಳೆ ಜಮೀನಿನಲ್ಲಿ ಅಡಗಿ ಕುಳಿತಿತ್ತು. ನಂತರ ಭಾನುವಾರ ಬೆಳಗ್ಗೆ 6 ಗಂಟೆಗೆ ಅರಣ್ಯ ಇಲಾಖೆ ಸಿಬ್ಬಂದಿ ಅಭಿಮನ್ಯು ಮತ್ತು ಶ್ರೀಕಂಠ ಎಂಬ ಎರಡು ಆನೆಗಳ ಮೂಲಕ ಕೂಬಿಂಗ್ ಆರಂಭಿಸಿ, ಸತತ ಮೂರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಹುಲಿಗೆ ಅರವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಸೆರೆ ಹಿಡಿದಿದ್ದಾರೆ.
ಹುಲಿಯ ಎಡಕಾಲಿಗೆ ಗಾಯವಾಗಿರುವ ಕಾರಣ ಬೇರೆ ಕಡೆ ತೆರಳಲಾಗದೆ ಬಾಳೆ ತೋಟದಲ್ಲೆ ಅಡಗಿತ್ತು ಎಂಬ ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡಿದ್ದು, ಬೆಳಿಗ್ಗೆ 6ರಿಂದ 9 ಗಂಟೆಗಳ ವರೆಗೆ ಕೂಂಬಿಂಗ್ ನಡೆಸಿ ಬಳಿಕ ಹುಲಿ ಕಂಡಾಗ ಅರಿವಳಿಕೆ ನೀಡಿಲಾಯಿತು. ಕೆಲ ನಿಮಿಷಗಳಲ್ಲಿ ಹುಲಿ ನಿತ್ರಾಣಗೊಂಡ ನಂತರ ಬಲೆಯ ಮೂಲಕ ಸೆರೆ ಹಿಡಿದು ಬೋನಿಗೆ ಹಾಕಲಾಯಿತು.
ಸೆರೆಯಾದ ಹುಲಿಯನ್ನು ಹೆಣ್ಣು ಹುಲಿಯಾಗಿದ್ದು, ಮೈಸೂರಿನ ಕೂರ್ಗಳ್ಳಿಯಲ್ಲಿ ಇರುವ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.
ಈ ಸಂದರ್ಭದಲ್ಲಿ ಹುಲಿ ಯೋಜನೆ ನಿರ್ದೇಶಕ ಡಾ. ರಮೇಶ್ ಕುಮಾರ್, ಎಸಿಎಫ್ ನವೀನ್, ಆರ್ ಎಫ್ ಓ ನವೀನ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
ನಿಟ್ಟುಸಿರು ಬಿಟ್ಟ ಜನತೆ: ಹುಲಿ ದಾಳಿಯಿಂದ ಬೆಚ್ಚಿಬಿದ್ದಿದ್ದ ಗೋಪಾಲಪುರ, ಬೇರಂಬಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ರೈತರು ಜಮೀನುಗಳಿಗೆ ತೆರಳಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಹುಲಿ ಸೆರೆಯಾಗಿರುವ ಹಿನ್ನೆಲೆ ಜನರು ನಿಟ್ಟುಸಿರು ಬಿಡುವಂತಾಗಿದೆ.