Advertisement

Kerala Rains: ಗುಂಡ್ಲುಪೇಟೆ-ಕೇರಳ ಸಂಪರ್ಕ ಕಡಿತ; ಬದಲಿ ಮಾರ್ಗ ಇಲ್ಲಿದೆ

10:04 PM Jul 30, 2024 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಕೇರಳದಲ್ಲಿ ಅಧಿಕ ಮಳೆಯಾಗುತ್ತಿರುವ ಕಾರಣ ಮುತ್ತಂಗ ಚೆಕ್ ಪೋಸ್ಟ್ ಸಮೀಪದ ಹೆದ್ದಾರಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಇದರ ಪರಿಣಾಮ ಕರ್ನಾಟಕದ ಮೂಲೆಹೊಳೆ ಚೆಕ್ ಪೋಸ್ಟ್ ಬಂದ್ ಮಾಡಿ, ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇದರಿಂದ ಗುಂಡ್ಲುಪೇಟೆ ಕೇರಳ ಸಂಪರ್ಕ ಕಡಿತವಾಗಿದೆ.

Advertisement

ಗುಂಡ್ಲುಪೇಟೆ-ಕೇರಳ ರಾಷ್ಟ್ರೀಯ ಹೆದ್ದಾರಿ-766 ಮಾರ್ಗವಾಗಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದ್ದವು. ಆದರೆ ವಯನಾಡಿನಲ್ಲಿ ಗುಡ್ಡ ಕುಸಿತ ಹಾಗೂ ಮಳೆ ಹೆಚ್ಚಳವಾದ ಪರಿಣಾಮ ಮೂಲೆಹೊಳೆ ಮೂಲಕ ಅಧಿಕ ನೀರು ಹರಿದು ಬರುತ್ತಿದೆ.

ಇದರಿಂದ ಕೇರಳದ ಮುತ್ತಂಗ ಬಳಿಯ ಹೆದ್ದಾರಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಚಾಮರಾಜನಗರ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮಂಗಳವಾರ ಸಂಜೆಯಿಂದ ಬಂಡೀಪುರ ವ್ಯಾಪ್ತಿಯ ಮೂಲೆಹೊಳೆ ಚೆಕ್ ಪೋಸ್ಟ್ ಬಂದ್ ಮಾಡಲಾಗಿದ್ದು, ಪೊಲೀಸರು ಹಾಗು ಅರಣ್ಯಾಧಿಕಾರಿಗಳ ನೇತೃತ್ವದ ತಂಡ ಮದ್ದೂರು ಗೇಟ್ ನಿಂದಲೇ ವಾಹನಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ.

ಮಾರ್ಗ ಬದಲಾವಣೆ: ಜಿಲ್ಲಾಧಿಕಾರಿ ಆದೇಶದ ಮೇರೆಗೆ ಗುಂಡ್ಲುಪೇಟೆ ಕೇರಳ ರಾಷ್ಟ್ರೀಯ ಹೆದ್ದಾರಿ 766ರ ಮೂಲೆಹೊಳೆ ಚೆಕ್ ಪೋಸ್ಟ್ ಅನ್ನು ತಾಲೂಕು ಆಡಳಿತದ ವತಿಯಿಂದ ಬಂದ್ ಮಾಡಲಾಗಿದೆ. ಕೇರಳದ ಕಡೆಗೆ ಹೋಗುವ ವಾಹನಗಳನ್ನು ಪಟ್ಟಣದ ಊಟಿ ಸರ್ಕಲ್ ಬಳಿ ಪೊಲೀಸರು ತಡೆದು ತಮಿಳುನಾಡಿನ ಗೂಡಲೂರು ಮೂಲಕ ಬದಲಿ ಮಾರ್ಗವಾಗಿ ತೆರಳು ಸೂಚನೆ ನೀಡುತ್ತಿದ್ದಾರೆ. ಇದರಿಂದ ವಾಹನ ಸವಾರರಿಗೆ 70 ಕಿ.ಮೀ ಹೆಚ್ಚುವರಿಯಾಗಲಿದೆ.

Advertisement

ಕೂಲಿ ಕಾರ್ಮಿಕರಿಗೆ ತೊಂದರೆ: ತಾಲೂಕಿನಿಂದ ಕೇರಳದ ಸುಲ್ತಾನ್ ಬತ್ತೇರಿಗೆ ಪ್ರತಿನಿತ್ಯ 200ಕ್ಕೂ ಅಧಿಕ ಮಂದಿ ಕೂಲಿ ಕೆಲಸಕ್ಕೆ ತೆರಳುತ್ತಾರೆ. ಇದೀಗ ಗುಂಡ್ಲುಪೇಟೆ ಕೇರಳ ರಾಷ್ಟ್ರೀಯ ಹೆದ್ದಾರಿ 766 ಬಂದ್ ಮಾಡಿರುವುದರಿಂದ ಕಾರ್ಮಿಕರಿಗೆ ಆತಂಕ ಎದುರಾಗಿದ್ದು, ವಿಧಿಯಿಲ್ಲದೆ ಬದಲಿ ಮಾರ್ಗ ತಮಿಳುನಾಡಿನ ಮೂಲಕ ಗುಂಡ್ಲುಪೇಟೆಗೆ ಬರಬೇಕಾಗಿದೆ.

ವಯನಾಡಿಗೆ ತೆರಳಿದ ಗುಂಡ್ಲುಪೇಟೆ ತಹಸೀಲ್ದಾರ್ ನೇತೃತ್ವದ ತಂಡ:
ಗುಂಡ್ಲುಪೇಟೆಯು ಕೇರಳ ರಾಜ್ಯದ ಗಡಿ ಹಂಚಿಕೊಂಡಿರುವ ಹಿನ್ನಲೆ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ಪ್ರಕರಣದಲ್ಲಿ ತಾಲೂಕು ಅಥವಾ ಜಿಲ್ಲೆಯ ಜನರು ಸಿಲುಕಿರಬಹುದು ಎಂಬ ಶಂಕೆಯಿಂದ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಗುಂಡ್ಲುಪೇಟೆ ತಹಸೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದಲ್ಲಿ ಓರ್ವ ಸಬ್ ಇನ್ಸ್ ಪೆಕ್ಟರ್, ಇಬ್ಬರು ಪೊಲೀಸರ ತಂಡ ವೈನಾಡಿನ ಮುಂಡಕ್ಕೈ ಪ್ರದೇಶಕ್ಕೆ ತೆರಳಿದ್ದು, ಅಧಿಕೃತ ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next