Advertisement

Gundlupet Bandh: ನಾಳಿನ ಗುಂಡ್ಲುಪೇಟೆ ಬಂದ್‌ಗೆ ಸಹಕರಿಸಿ: ನಿರಂಜನಕುಮಾರ್‌

01:54 PM Sep 28, 2023 | Team Udayavani |

ಗುಂಡ್ಲುಪೇಟೆ: ರಾಜ್ಯ ಕಾಂಗ್ರೆಸ್‌ ಸರ್ಕಾರ ಬರ ಪರಿಸ್ಥಿತಿ ಸಂದರ್ಭದಲ್ಲೂ ತಮಿಳುನಾಡಿಗೆ ಕಾವೇರಿ ಮತ್ತು ಕಬಿನಿ ನದಿಯಿಂದ ನೀರು ಬಿಡುವುದನ್ನು ಖಂಡಿಸಿ ಸೆ.29ರಂದು ಬಿಜೆಪಿ ಸೇರಿ ಜೆಡಿಎಸ್‌, ರೈತ ಸಂಘದ ವಿವಿಧ ಪ್ರಗತಿಪರ ಹಾಗೂ ಕನ್ನಡಪರ ಸಂಘಟನೆಗಳ ವತಿಯಿಂದ ಗುಂಡ್ಲುಪೇಟೆ ಬಂದ್‌ ನಡೆಯಲಿದೆ ಎಂದು ಮಾಜಿ ಶಾಸಕ ಸಿ.ಎಸ್‌ .ನಿರಂಜನಕುಮಾರ್‌ ತಿಳಿಸಿದರು.

Advertisement

ಜನತೆಗೆ ಗೊತ್ತಾಗಿದೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಾವೇರಿ ಕೊಳ್ಳದ ಜನರಿಗೆ ಭವಿಷ್ಯದಲ್ಲಿ ಕುಡಿಯುವ ನೀರಿಗೂ ಬವಣೆ ಉಂಟಾಗುತ್ತದೆ ಎಂಬ ಅರಿವಿಲ್ಲದೇ ಕಾವೇರಿ ಮತ್ತು ಕಬಿನಿ ನದಿಯಿಂದ ತಮಿಳುನಾಡಿಗೆ ರಾಜ್ಯ ಸರ್ಕಾರ ನಿರಂತರವಾಗಿ ನೀರು ಹರಿಸುತ್ತಿದೆ. ಅಧಿಕಾರಕ್ಕೆ ಬರುವ ಮುಂಚೆ ಮೇಕೆದಾಟಿಗಾಗಿ ನಮ್ಮ ನೀರು-ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದರು. ಆ ಮೂಲಕ ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡಿದವರ ಘೋಷ ವಾಕ್ಯ ಮತ್ತು ಬದ್ಧತೆ ಏನೆಂದು ಈಗ ಜನತೆಗೆ ಗೊತ್ತಾಗಿದೆ ಎಂದು ಕಿಡಿಕಾರಿದರು.

ರಾಜ್ಯದ ಪರಿಸ್ಥಿತಿ ಸರ್ವೋಚ್ಚ ನ್ಯಾಯಾಲಯ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ಮುಂದೆ ತರುವ ವಿಚಾರದಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ. ತಮಿಳುನಾಡಿಗೆ ಇದೆ ರೀತಿಯಲ್ಲಿ ನೀರು ಹರಿದರೆ ಬೆಂಗಳೂರು, ಮಂಡ್ಯ ಸೇರಿ ಇಡೀ ದಕ್ಷಿಣ ಭಾಗವೇ ಬರಡಾಗುವ ಎಲ್ಲಾ ಲಕ್ಷಣಗಳಿವೆ. ಆದ್ದರಿಂದ ವರ್ತಕರು, ಕನ್ನಡಪರ ಸಂಘಟನೆಯವರು, ಆಟೋ ಚಾಲಕರು, ಕಟ್ಟಡ ಕಾರ್ಮಿಕರು, ಹೊಟೆಲ್‌ ಉದ್ಯಮ ಇತರೆ ಎಲ್ಲಾ ಕ್ಷೇತ್ರದವರು ಬಂದ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿ, ಸೆ.29 ರಂದು ಬೆಳಗ್ಗೆ ರ್ಯಾಲಿ ನಡೆಸುವ ಮೂಲಕ ಎಚ್ಚರಿಕೆ ಸಂದೇಶ ಕಳುಹಿಸಬೇಕು ಎಂದು ತಿಳಿಸಿದರು.

ಕೈಜೋಡಿಸಿ: ಪುರಸಭಾ ಮಾಜಿ ಅಧ್ಯಕ್ಷರಾದ ಪಿ. ಗಿರೀಶ್‌, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಳೆ ಕೊರತೆಯಿಂದ ಬರ ಆವರಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಜನರ ಕಡೆ ಗಮನಹರಿಸದೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್‌ ಅವಧಿಯಲ್ಲಿ ಜೀವನದಿಗಳಿಗೆ ಕುತ್ತು ಬಂದಿದೆ. ಕಣ್ಣಿದ್ದೂ ಕುರುಡಾಗಿರುವ ರಾಜ್ಯ ಸರ್ಕಾರ ತಮಿಳುನಾಡು ಶ್ರೇಯವನ್ನು ಗಣನೆಗೆ ತೆಗೆದುಕೊಂಡಿದೆ. ಈಗಾಗಲೇ 9 ಸಾವಿರ ಕ್ಯುಸೆಕ್‌ ನೀರು ಹರಿಬಿಡಲಾಗುತ್ತಿದೆ. ಕಾವೇರಿ ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲಾ ಸಂಘ-ಸಂಸ್ಥೆಗಳ ಮೇಲಿದೆ. ಈ ನಿಟ್ಟಿನಲ್ಲಿ ಸೆ.29ರಂದು ನಡೆಯುವ ಗುಂಡ್ಲುಪೇಟೆ ಬಂದ್‌ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಾಪ್‌ ಕಾಮ್ಸ್‌ ಜಿಲ್ಲಾಧ್ಯಕ್ಷ ಲೋಕೇಶ್‌, ಪುರಸಭಾ ಸದಸ್ಯ ಕಿರಣ್‌ ಗೌಡ, ಮಾಜಿ ಅಧ್ಯಕ್ಷ ಎಲ್‌.ಸುರೇಶ್‌, ಅಗತಗೌಡನಹಳ್ಳಿ ಬಸವರಾಜು, ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮೋಹನ್‌, ಕರುನಾಡ ಯುವಶಕ್ತಿ ಸಂಘಟನೆ ತಾಲೂಕು ಅಧ್ಯಕ್ಷ ಮುನೀರ್‌ ಪಾಷಾ, ತಮಿಳು ಸಂಘ ಅಧ್ಯಕ್ಷ ಬಾಲನ್‌, ಎಪಿಎಂಸಿ ನಿರ್ದೇಶಕ ಮಾಡ್ರಹಳ್ಳಿ ಮಹದೇವಪ್ಪ, ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಎಂ.ಪ್ರಣಯ್‌, ಶಿಂಡನಪುರ ಮಂಜುನಾಥ್‌ ಇತರರು ಇದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next