ಗುಂಡ್ಲುಪೇಟೆ(ಚಾಮರಾಜನಗರ): ತಲೆಗೆ ಗಾಯವಾಗಿ ಅಸ್ವಸ್ಥಗೊಂಡಿದ್ದ ಮರಿ ಗಂಡಾನೆಯೊಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕರೆ ವಲಯ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಉಪ ವಿಭಾಗದ ಕುಂದುಕರೆ ವಲಯ ವ್ಯಾಪ್ತಿಯ ಹೊನ್ನೆಮರದ ತಿಟ್ಟಿನಿಂದ ಡೊಂಕಿದಾರಿ ಡಿ ಲೈನ್‍ನ ಆಲದಮರದ ತಿರುವಿನಲ್ಲಿ ಆ.24ರಂದು ಸುಮಾರು 3-4 ವರ್ಷದ ಗಂಡಾನೆ ಮರಿಯೊಂದು ಅಸ್ವಸ್ಥಗೊಂಡು ನಿತ್ರಾಣದಿಂದ ಜಾನುವಾರು ತಡೆ ಕಂದಕ ನಿಂತಿತ್ತು. ಇದನ್ನು ಗಸ್ತು ಸಮಯದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಗಮನಿಸಿ ವಲಯ ಅರಣ್ಯಾಧಿಕಾರಿ ದೀಪಾ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಗಮನಕ್ಕೆ ತಂದಿದ್ದಾರೆ.
ತತ್ ಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಅಸ್ವಸ್ಥತೆಯಿಂದ ನಿತ್ರಾಣಗೊಂಡು ಕಂದಕದಲ್ಲಿ ನಿಂತಿದ್ದು ಗಂಡಿ ಮರಿಯಾನೆ ತಲೆಗೆ ಗಾಯವಾಗಿರುವುದನ್ನು ಗಮನಿಸಿ ಇಲಾಖಾ ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಅವರನ್ನು ಬರಮಾಡಿಕೊಂಡು ಚಿಕಿತ್ಸೆ ಕೊಡಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟು, ಆನೆಯ ಚಲನವಲನದ ಮೇಲೆ ನಿಗಾ ವಹಿಸಿ ಗಮನಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿತ್ತು. ನಂತರ ಆ.27ರಂದು ಮತ್ತೆ ಕಂದಕಕ್ಕೆ ಇಳಿದು ನಿತ್ರಾಣಗೊಂಡಿದ್ದ ಮರಿ ಆನೆಗೆ ಇಲಾಖಾ ಪಶು ವೈದ್ಯಾಧಿಕಾರಿ ಚಿಕಿತ್ಸೆ ಕೊಟ್ಟು ಕಬ್ಬು, ಬಾಳೆ, ಜೋಳಗಳನ್ನು ಆಹಾರವಾಗಿ ನೀಡಿದ್ದರು. ಆದರೆ ಆನೆಯು ಆಹಾರ ಸೇವಿಸಲಾಗದೆ ಹಾಗೂ ಚಿಕಿತ್ಸೆಗೆ ಸ್ಪಂದಿಸದೇ ಆ.28ರ ಮಧ್ಯಾಹ್ನ ಮೃತಪಟ್ಟಿದೆ ಎಂದು ಬಂಡೀಪುರ ಅರಣ್ಯಾಧಿಕಾರಿ ಡಾ.ಪಿ.ರಮೇಶಕುಮಾರ್ ಮಾಹಿತಿ ನೀಡಿದ್ದಾರೆ.
ನಂತರ ಬಂಡೀಪುರ ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಕಳೆಬರವನ್ನು ನಿಯಮಾನುಸಾರ ಅರಣ್ಯ ಪ್ರದೇಶದಲ್ಲಿ ವನ್ಯಪ್ರಾಣಿಗಳ ಆಹಾರಕ್ಕಾಗಿ ಬಿಡಲಾಯಿತು.
ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಕುಂದುಕೆರೆ ವಲಯದ ವಲಯ ಅರಣ್ಯಾಧಿಕಾರಿ ಡಿ.ಶ್ರೀನಿವಾಸ, ಇಲಾಖಾ ಪಶು ವೈಧ್ಯಾಧಿಕಾರಿ ಡಾ.ಮಿರ್ಜಾ ವಾಸೀಂ, ಆರ್.ರಘುರಾಂ, ಉಪ ವಲಯ ಅರಣ್ಯಾಧಿಕಾರಿ ಬಿ.ಮನೋಹರ, ಗಸ್ತು ವನಪಾಲಕ ಡಿ.ಮಹೇಶ, ವಿಶ್ವನಾಥ ಹಾಗೂ ಇಲಾಖಾ ಸಿಬ್ಬಂದಿ ವರ್ಗದವರು ಹಾಜರಿದ್ದರು.