ಗುಂಡ್ಲುಪೇಟೆ(ಚಾಮರಾಜನಗರ): ಕೇರಳ ಮೂಲದ ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿದ ಗುಂಪೊಂದು 44 ಲಕ್ಷ ರೂ. ದರೋಡೆ ಮಾಡಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಅಗತಗೌಡನಹಳ್ಳಿ ಸಮೀಪದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಕೇರಳ ಮೂಲದ ಚಿನ್ನದ ವ್ಯಾಪಾರಿ ರಹೀಂ ಮತ್ತು ಆತನ ಸ್ನೇಹಿತ ನೌಫಾಜ್ ಇಬ್ಬರು ಮೈಸೂರಿನಲ್ಲಿ ಚಿನ್ನ ಮಾರಾಟ ಮಾಡಿ ಹಣ ತೆಗೆದುಕೊಂಡು ಕೇರಳಕ್ಕೆ ತೆರಳುತ್ತಿದ್ದ ವೇಳೆ ಕೇರಳ ಮೂಲದ ದರೋಡೆಕೋರರ ಸುಮಾರು 10 ಮಂದಿಯ ಗುಂಪೊಂದು ಎರಡು ಕಾರು ಹಾಗು ಒಂದು ಲಾರಿಯಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿ ಅಗತಗೌಡನಹಳ್ಳಿ ಸಮೀಪ ಚಿನ್ನದ ವ್ಯಾಪಾರಿ ಕಾರು ಅಡ್ಡಗಟ್ಟಿ ವ್ಯಾಪಾರಿಗೆ ಥಳಿಸಿ ಆತನ ಬಳಿಯಿದ್ದ ಹಣವನ್ನು ದೋಚಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ನೌಫಾಜ್ ಇಳಿದು ಓಡಿ ಹೋಗಿದ್ದಾರೆ. ನಂತರ ಚಿನ್ನದ ವ್ಯಾಪಾರಿ ಬೇಗೂರು ಪೊಲೀಸ್ ಠಾಣೆಗೆ ಆಗಮಿಸಿ, ದರೋಡೆ ಸಂಬಂಧ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೇಗೂರು ಠಾಣೆ ಪೊಲೀಸ್ ತನಿಖೆ ಆರಂಭಿಸಿ, ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಭೇಟಿ: ದರೋಡೆ ನಡೆದ ಮಾಹಿತಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ, ಎಎಸ್ಪಿ ಉದೇಶ್, ಡಿವೈಎಸ್ಪಿ ಲಕ್ಷ್ಮಯ್ಯ, ಸರ್ಕಲ್ ಇನ್ಸ್ ಪೆಕ್ಟರ್ ವನರಾಜು, ಸಬ್ ಇನ್ಸ್ ಪೆಕ್ಟರ್ ಚರಣ್ ಗೌಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಸಿಸಿ ಕ್ಯಾಮಾರಾ ಪರಿಶೀಲನೆ: ದರೋಡೆ ಘಟನೆ ಸಂಬಂಧ ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸ್ ರಾಷ್ಟ್ರೀಯ ಹೆದ್ದಾರಿಯಲ್ಲಿನ ಹಲವು ಸಿಸಿ ಕ್ಯಾಮಾರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ದರೋಡೆಕೋರರ ಕುರಿತು ಯಾವುದೇ ಮಾಹಿತಿ ತಿಳಿದು ಬಂದಿಲ್ಲ.