ಕನ್ನಡದಲ್ಲಿ ನೈಜ ಘಟನೆ ಕುರಿತ ಅನೇಕ ಚಿತ್ರಗಳು ಬಂದು ಹೋಗಿವೆ. ಆ ಸಾಲಿಗೆ ಈಗ “ನಾನು ಮತ್ತು ಗುಂಡ’ ಚಿತ್ರವೂ ಸೇರಿದೆ. ಹೌದು, ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಜ.24 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಸಜ್ಜಾಗಿದೆ. “ಕಾಮಿಡಿ ಕಿಲಾಡಿಗಳು’ ಮೂಲಕ ಹಾಸ್ಯ ನಟರಾಗಿ ಗುರುತಿಸಿಕೊಂಡಿರುವ ಶಿವರಾಜ್ ಕೆ.ಆರ್.ಪೇಟೆ ಈ ಚಿತ್ರದಲ್ಲಿ ಲೀಡ್ ಪಾತ್ರ ಮಾಡಿದ್ದಾರೆ.
ಅದೊಂದು ರೀತಿ ಹೀರೋ ಅಂದರೂ ತಪ್ಪಿಲ್ಲ. ಅವರೊಂದಿಗೆ ಒಂದು ನಾಯಿ ಕೂಡ ನಟಿಸಿದೆ. ಅದರ ಹೆಸರೇ ಗುಂಡ. ಅದಕ್ಕೂ ಇಲ್ಲಿ ಪ್ರಾಮುಖ್ಯತೆ ಕೊಡಲಾಗಿದೆ. ನಾಯಕ ಹಾಗು ನಾಯಿ ನಡುವಿನ ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್. ಅಕ್ಕರೆಯಿಂದ ತಾವು ಸಾಕಿದ ನಾಯಿಯನ್ನು ನೋಡಿಕೊಳ್ಳುವ ದಂಪತಿಯಿಂದ ಆ ನಾಯಿ ದೂರವಾದಾಗ, ಏನೆಲ್ಲಾ ಘಟನೆ ನಡೆಯುತ್ತೆ.
ತಮ್ಮ ಬದುಕಿನಲ್ಲಿ ಒಂದು ಭಾಗವಾಗಿದ್ದ ಆ ಶ್ವಾನ ಇಲ್ಲವಾದಾಗ, ಆ ದಂಪತಿ ಎಷ್ಟು ಎಮೋಷನಲ್ ಫೀಲ್ ಆಗುತ್ತಾರೆ ಎಂಬಿತ್ಯಾದಿ ವಿಷಯಗಳು ಚಿತ್ರದ ಹೈಲೈಟ್ ಆಗಿವೆ. ಇಷ್ಟಕ್ಕೂ ಇದು ತಿಪಟೂರಿನಲ್ಲಿ ನಡೆದ ಒಂದು ನೈಜ ಘಟನೆ ಇಟ್ಟುಕೊಂಡು ಮಾಡಿದ ಚಿತ್ರ. ಚಿತ್ರದಲ್ಲಿ ಸಂಯುಕ್ತ ಹೊರನಾಡು ನಾಯಕಿಯಾಗಿದ್ದಾರೆ. ಅವರಿಲ್ಲಿ ಹೆಂಡತಿ ಪಾತ್ರ ಮಾಡುತ್ತಿದ್ದು, ಶ್ವಾನವನ್ನು ಅತಿಯಾಗಿ ಪ್ರೀತಿಸುವ ಪ್ರಾಣಿಪ್ರಿಯೆ ಆಗಿದ್ದಾರೆ.
ನಿಜ ಬದುಕಿನಲ್ಲೂ ಅವರ ಮನೆಯಲ್ಲಿ ಗುಂಡ ಹೆಸರಿನ ಶ್ವಾನ ಇತ್ತಂತೆ. ಅದು ಅಗಲಿದಾಗ, ಅವರು ಅನುಭವಿಸಿದ ನೋವು ಅವರಿಗಷ್ಟೇ ಗೊತ್ತು. ಅಂತಹ ರಿಯಲ್ ಫೀಲ್ ಕೂಡ ರೀಲ್‌ನಲ್ಲಾಗಿದೆಯಂತೆ. ಇನ್ನು, ಚಿತ್ರದ ಸಂಭಾಷಣೆ ಹಾಸನ ಭಾಷೆಯಲ್ಲಿರುವುದು ವಿಶೇಷ. ಸಕಲೇಶಪುರ, ಹಾಸನ, ಅರಸಿಕೆರೆ ಸುತ್ತಮುತ್ತ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರವನ್ನು ಶ್ರೀನಿವಾಸ್ ತಮ್ಮಯ್ಯ ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ಗೋವಿಂದೇಗೌಡ, ಜಿಮ್ ರವಿ, ರಾಕ್‌ಲೈನ್ ಸುಧಾಕರ್ ಸೇರಿದಂತೆ ಹಲವರು ನಟಿಸಿದ್ದಾರೆ. ರೋಹಿತ್ ರಮನ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಕಾರ್ತಿಕ್ ಶರ್ಮ ಸಂಗೀತ ಸಂಯೋಜಿಸಿದ್ದಾರೆ. ವಿವೇಕನಂದಾ ಕಥೆ ಬರೆದರೆ, ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ಚಿದಾನಂದ ಛಾಯಾಗ್ರಹಣ ಮಾಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನವಿದೆ. ಕುಂಗ್‌ಫು ಚಂದ್ರು ಅವರ ಸಾಹಸವಿದೆ. ಚಿತ್ರವನ್ನು ರಘು ಹಾಸನ್ ನಿರ್ಮಾಣ ಮಾಡಿದ್ದಾರೆ.