ತಿ.ನರಸೀಪುರ: ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಸಮಾಜ ಘಾತುಕ ಕೃತ್ಯಗಳನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕರಿಗೂ ಬಂದೂಕು ತರಬೇತಿ ಅತ್ಯವಶ್ಯಕ ಎಂದು ಮೈಸೂರು ಜಿಲ್ಲಾ ಅಪಾರ ಪೋಲಿಸ್ ಅಧೀಕ್ಷಕಿ ಕಲಾಕೃಷ್ಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯೋದಯ ಕಾಲೇಜಿನಲ್ಲಿ ಪೋಲಿಸ್ ಇಲಾಖೆ ವತಿಯಿಂದ ನಾಗರಿಕರಿಗೆ ಹಮ್ಮಿಕೊಳ್ಳಲಾಗಿರುವ 15 ದಿನಗಳ ಬಂದೂಕು ತರಬೇತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆವ ಮೂಲಕ ಉದ್ಘಾಟಿಸಿ ಮಾತನಾಡಿ, ಬಂದೂಕು ತರಬೇತಿ ಒಂದು ಅತ್ಯದ್ಬುತವಾದಂತಹ ಕೌಶಲ್ಯವಾಗಿದ್ದು, ಬಂದೂಕು ತರಬೇತಿ ಪಡೆದುಕೊಳ್ಳುವ ಮೂಲಕ ನಾಗರಿಕರು ತಮ್ಮ ಆತ್ಮ ರಕ್ಷಣೆಗೆ ಮುಂದಾಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಸಿ.ಎನ್.ದೊಡ್ಡಲಿಂಗೇಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪೊಲೀಸರು ಎಂದರೆ ನಾಗರಿಕರು ಎದುರುವಂತಾಗಿದ್ದು, ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆಯವರು ನಾಗರಿಕರು ಹಾಗೂ ಪೊಲೀಸರ ನಡುವೆ ಬಾಂಧವ್ಯ ವೃದ್ಧಿಸಲು ಇಂತಹ ಕಾರ್ಯಕ್ರಮಗಳನ್ನು ರೂಪಿಸಿರುವುದು ನಿಜಕ್ಕೂ ಶ್ಲಾಘನೀಯ. ಹಾಗಾಗಿ ಇಂದಿನ ಪ್ರಜಾnವಂತ ನಾಗರಿಕರು ಬಂದೂಕು ತರಬೇತಿಯನ್ನು ಪಡೆದು ಪೊಲೀಸರ ಜೊತೆ ಸಹಕರಿಸಬೇಕೆಂದು ಕರೆ ನೀಡಿದರು.
ವೃತ್ತ ನಿರೀಕ್ಷಕ ಮನೋಜ್ ಕುಮಾರ್ ಮಾತನಾಡಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್‌ನವರ್ ಮಾರ್ಗದರ್ಶನಂತೆ ಇಲಾಖೆ ವತಿಯಿಂದ ಪಟ್ಟಣದ ವಿದ್ಯೋದಯ ಕಾಲೇಜು ಮೈದಾನದಲ್ಲಿ ಬೆಳಗ್ಗೆ 6.30 ರಿಂದ 8 ಗಂಟೆಯವರೆಗೆ ಉಚಿತ ಬಂದೂಕು ತರಬೇತಿ ನೀಡಲಾಗುತ್ತಿದ್ದು ಆಸಕ್ತ ನಾಗರಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಜೊತೆಗೆ ಬಂದೂಕು ತರಬೇತಿ ಪಡೆದುಕೊಳ್ಳುವಂತೆ ಕೋರಿದರು.
ವಿದ್ಯೋದಯ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು. ನಂಜನಗೂಡು ಉಪವಿಭಾಗದ ಎಎಸ್‌ಪಿ ಮಹಮ್ಮದ್ ಸುಜೀತ್, ಬಂದೂಕು ತರಬೇತುದಾರ ಶಿವಕುಮಾರ್, ತಿ.ನರಸೀಪುರ ಪೊಲೀಸ್ ಠಾಣೆಯ ಪಿಎಸ್‌ಐ ಎನ್.ಆನಂದ್, ಬನ್ನೂರು ಪಿಎಸ್‌ಐ ಲತೇಶ್‌ಕುಮಾರ್, ತಲಕಾಡು ಪಿಎಸ್‌ಐ ನಂದೀಶ್‌ಕುಮಾರ್, ಉಪನ್ಯಾಸಕ ಕುಮಾರಸ್ವಾಮಿ, ವಕೀಲ ನಾಗೇಂದ್ರ ಇದ್ದರು.