ಆನೇಕಲ್: ಇತ್ತೀಚಿಗೆ ರೌಡಿ ಶೀಟರ್ ಮನೋಜ್ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಕಾಲಿಗೆ ಗುಂಡು ಹೊಡೆದು ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಬೆಸ್ತಮಾನ ಹಳ್ಳಿಯ ಲೋಕೇಶ್ ಅಲಿ ಯಾಸ್ ಲೋಕಿ ಬಂಧಿತ ಆರೋಪಿ. ಸೋಮವಾರ ಬೆಳಗ್ಗೆ 6.30ರಲ್ಲಿ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಯಸಂದ್ರದ ಬಳಿ ಲೋಕೇಶ್ ಊರಿಗೆ ಬರುತ್ತಿರುವ ಮಾಹಿತಿ ಮೇಲೆ ಬಂಧನಕ್ಕೆ ಜಿಗಣಿ ಸಿಪಿಐ ಮಂಜುನಾಥ್, ಬನ್ನೇರುಘಟ್ಟ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ಬಲೆ ಬೀಸಿತ್ತು. ಪೊಲೀಸರನ್ನು ಕಂಡ ಕೂಡಲೇ ಏಕಾಏಕಿ ಲೋಕೇಶ್ ಹಲ್ಲೆಗೆ ಮುಂದಾಗಿದ್ದಾನೆ. ಬಂಧನಕ್ಕೆ ಮುಂದಾದ ಪೇದೆ ಚನ್ನಬಸವ ಕೈಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆತ್ಮರಕ್ಷಣೆಗಾಗಿ ಜಿಗಣಿ ಠಾಣೆಯ ಇನ್ಸ್ ಪೆಕ್ಟರ್ ಮಂಜುನಾಥ್ ಲೋಕೇಶ್ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.
ರೌಡಿ ಶೀಟರ್ ಮನೋಜ್, ಬೆಸ್ತಮಾನಹಳ್ಳಿ ಸುನಿಲ್ ಎಂಬಾತನನ್ನು ಕೊಲೆ ಮಾಡಿದ್ದ. ಹೀಗಾಗಿ ಮನೋಜ್ ಮೇಲೆ ಸೇಡು ತೀರಿಸಿಕೊಳ್ಳಲು ಸುನೀಲ್ ಆಪ್ತನಾಗಿದ್ದ ಲೋಕಿ ಸಂಚು ರೂಪಿಸಿದ್ದ. ನ.18ರಂದು ಜಿಗಣಿ ಪೊಲೀಸ್ ಠಾಣೆ ಸಮೀಪದ ಮಾದಪಟ್ಟಣ ಬಳಿ ರೌಡಿ ಶೀಟರ್ ಮನೋಜ್ ಅಲಿಯಾಸ್ ಮನು ಹಾಗೂ ಆತನ ಗ್ಯಾಂಗ್ ಇನೋವಾ ಕಾರಿನಲ್ಲಿ ಬೆಂಗಳೂರಿನಿಂದ ವಾಪಸ್ ಆಗುತ್ತಿತ್ತು. ವೇಳೆ ಹಿಂಬದಿಯಿಂದ ಸ್ಕಾರ್ಪಿ ಯೋ ಕಾರಿನಲ್ಲಿ ಬಂದ ಲೋಕಿ ಇನೋವಾ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಹಲ್ಲೆ ನಡೆಸಿ ದ್ದಾನೆ. ರೌಡಿಶೀಟರ್ ಮನೋಜ್ ತಾನು ಇದ್ದ ಇನೋವಾ ಕಾರನ್ನು ವೇಗವಾಗಿ ಹಿಮ್ಮುಖವಾಗಿ ಚಲಾಯಿಸಿ ಪರಾರಿ ಆಗಿದ್ದನು. ಇತ್ತ ಸ್ಕಾರ್ಪಿಯೋ ಕಾರಿನಲ್ಲಿ ಇದ್ದವರು ಸಹ ಆತಂಕದಲ್ಲಿ ಮಾರಕಾಸ್ತ್ರ, ಕಾರನ್ನು ಬಿಟ್ಟು ಪರಾರಿ ಆಗಿದ್ದರು.ಈ ಘಟನೆ ಆನೇಕಲ್ ತಾಲೂಕಿನಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಕೊಲೆಗೆ ಯತ್ನ ನಡೆದಿದ್ದರೂ ರೌಡಿ ಶೀಟರ್ ಮನೋಜ್ ಪೊಲೀಸರಿಗೆ ದೂರು ನೀಡಿರಲಿಲ್ಲ, ಹಲವು ಪ್ರಕರಣಗಳಲ್ಲಿ ಜೈಲು ಸೇರಿ ಹೊರ ಬಂದಿದ್ದ ಮನೋಜ್ ಇತ್ತೀಚೆಗೆ ತಂಗಿ ಮದುವೆ ಹಿನ್ನೆಲೆಯಲ್ಲಿ ತನ್ನ ಸಹಚರರ ಜೊತೆ ಓಡಾಡುತ್ತಿದ್ದ. ಈ ಬಗ್ಗೆ ವಿರೋಧಿ ತಂಡ ಮಾಹಿತಿ ಕಲೆ ಹಾಕಿ, ಆತನ ಕೊಲೆ ಮಾಡಲು ಸಂಚು ರೂಪಿಸಿತ್ತು. ಆದರೆ, ಮನೋಜ್ ತಪ್ಪಿಸಿಕೊಂಡು ಹೋಗಿದ್ದನು.
ಹಲವು ಅಪರಾಧ ಕೇಸ್‌ಗಳಲ್ಲಿ ಆರೋಪಿ ಭಾಗಿ: ಎಎಸ್ಪಿ :
ರೌಡಿಶೀಟರ್ ಮನೋಜ್ ಕೊಲೆ ಯತ್ನ ಆರೋಪಿ ಕಾಲಿಗೆ ಗುಂಡು ಹೊಡೆದ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್‌ಪಿ ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಹಿಂದೆಯೂ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದು, ಮನೋಜ್ ಮೇಲೆ ಡಿ.18ರಂದು ದಾಳಿ ಮಾಡಲು ಮುಂದಾಗಿದ್ದ. ಈ ಪ್ರಕರಣ ಸಂಬಂಧಪಟ್ಟಂತೆ ಪೊಲೀಸ್ ತಂಡ ರಚನೆ ಮಾಡಿ ಆರೋಪಿಯನ್ನು ಬಂಧನಕ್ಕೆ ಬಲೆ ಬೀಸಲಾಗಿತ್ತು. ಆರೋಪಿ ಸೆರೆಗೆ ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆಗ ಜಿಗಣಿ ಸಿಪಿಐ ಈತನ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ ಎಂದು ನಾಗೇಶ್ ತಿಳಿಸಿದರು.