Advertisement

ಕಲ್ಲೇಟು ಕೊಟ್ಟ ರೌಡಿಗೆ ಗುಂಡೇಟು

12:32 PM Apr 12, 2019 | pallavi |
ಬೆಂಗಳೂರು: ಬೈಕ್‌ ವಿಚಾರಕ್ಕೆ ನಡು ರಸ್ತೆಯಲ್ಲೇ ಯುವಕನನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ರೌಡಿಶೀಟರ್‌ಗೆ ರಾಜಗೋಪಾಲನಗರ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.
ನಂದಿನಿ ಲೇಔಟ್‌ನ ಚೌಡೇಶ್ವರಿನಗರ ನಿವಾಸಿ ಸಚಿನ್‌ (22) ಗುಂಡೇಟು ತಿಂದ ರೌಡಿಶೀಟರ್‌. ಆರೋಪಿ ಕಲ್ಲುಗಳಿಂದ ಹಲ್ಲೆ ನಡೆಸಿದ್ದರಿಂದ ಕಾನ್‌ಸ್ಟೆಬಲ್‌ಗ‌ಳಾದ ಜಯಶಂಕರ್‌ ಮತ್ತು ಪ್ರಕಾಶ್‌ ನಾಯಕ್‌ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೌಡೇಶ್ವರಿನಗರದಲ್ಲಿ ಮಾಂಸ ಮಾರಾಟ ಮಾಡುವ ಆರೋಪಿ ಸಚಿನ್‌ ವಿರುದ್ಧ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದ್ದು, ಕೊಲೆ ಯತ್ನ, ದರೋಡೆ, ಕನ್ನ, ದರೋಡೆ ಪ್ರಕರಣಗಳು ದಾಖಲಾಗಿವೆ.
ಮನೆಗಳವು, ಡಕಾಯಿತಿ ಹಾಗೂ ಇತರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚೌಕಿ ನರಸಿಂಹ (25) ಎಂಬಾತನ ಜತೆ, ಏ.2ರಂದು ರಾತ್ರಿ 12 ಗಂಟೆ ಸುಮಾರಿಗೆ ಬೈಕ್‌ ವಿಚಾರವಾಗಿ ಜಗಳ ತೆಗೆದ ಆರೋಪಿ ಸಚಿನ್‌ ಹಾಗೂ ಸ್ನೇಹಿತರಾದ ಕಾರ್ತಿಕ್‌, ಹಿತೇಶ್‌, ಅನ್ನಪೂರ್ಣೇ ಶ್ವರಿನಗರದ ಎರಡನೇ ಮುಖ್ಯರಸ್ತೆಯಲ್ಲಿ ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು.
ಆರೋಪಿಗಳ ಪತ್ತೆಗಾಗಿ ಉತ್ತರ ವಿಭಾಗದ ಡಿಸಿಪಿ ಎನ್‌.ಶಶಿಕುಮಾರ್‌ ರಾಜ ಗೋಪಾಲ ನಗರ ಇನ್‌ಸ್ಪೆಕ್ಟರ್‌ ದಿನೇಶ್‌ ಪಾಟೀಲ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ಮಧ್ಯೆ ಪ್ರಕರಣದ ಪ್ರಮುಖ ಆರೋಪಿ ಕಾರ್ತಿಕ್‌, ಏ.8ರಂದು ನೇರವಾಗಿ ನ್ಯಾಯಾಲಯಕ್ಕೆ ಶರಣಾಗಿದ್ದ. ಬಳಿಕ ತಾಂತ್ರಿಕ ತನಿಖೆ ನಡೆಸಿದ ವಿಶೇಷ ತಂಡ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದಲ್ಲಿ ತಲೆಮರೆಸಿ ಕೊಂಡಿದ್ದ ಸಚಿನ್‌ ಮತ್ತು ಹಿತೇಶ್‌ನನ್ನು ಬುಧವಾರ ತಡರಾತ್ರಿ ಬಂಧಿಸಿ ಗುರುವಾರ ನಸುಕಿನಲ್ಲಿ ಬೆಂಗಳೂರಿಗೆ ಕರೆತಂದಿತ್ತು.
ಪೊಲೀಸರ ಮೇಲೆ ಹಲ್ಲೆ, ಗುಂಡೇಟು: ವಿಚಾರಣೆ ಸಂದರ್ಭದಲ್ಲಿ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಪೀಣ್ಯ ಸಮೀಪದ ಶಿವಪುರ ಕೆರೆ ಬಳಿ ಇಟ್ಟಿರುವುದಾಗಿ ಸಚಿನ್‌ ಹೇಳಿಕೆ ನೀಡಿದ್ದ. ಈ ಹಿನ್ನೆಲೆಯಲ್ಲಿ ಬೆಳಗ್ಗೆ ಆರು ಗಂಟೆ ಸುಮಾರಿಗೆ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದಾಗ ಏಕಾಏಕಿ ಕಾನ್‌ಸ್ಟೆಬಲ್‌ಗ‌ಳಾದ ಜಯಶಂಕರ್‌ ಮತ್ತು ಪ್ರಕಾಶ್‌ ನಾಯಕ್‌ರನ್ನು ತಳ್ಳಿ ಕಲ್ಲುಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್‌ ಇನ್‌ಸ್ಪೆಕ್ಟರ್‌ ದಿನೇಶ್‌ ಪಾಟೀಲ್‌ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದಾರೆ. ಆದರೂ ಮತ್ತೂಮ್ಮೆ ಕಲ್ಲುಗಳಿಂದ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಸಚಿನ್‌ನ ಬಲಗಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕಂಠಪೂರ್ತಿ ಕುಡಿಸಿ ಕೊಲೆ: ಪ್ರಕರಣದ ಪ್ರಮುಖ ಆರೋಪಿ ಕಾರ್ತಿಕ್‌, ಎರಡು ವರ್ಷಗಳ ಹಿಂದೆ ಸ್ನೇಹಿತ ನಂಜೇಶ್‌
ಎಂಬಾತನಿಗೆ ತನ್ನ ಬೈಕ್‌ ಕೊಟ್ಟಿದ್ದ. ಆದರೆ, ಅನಾರೋಗ್ಯಕ್ಕೆ ತುತ್ತಾಗಿದ್ದ ನಂಜೇಶ್‌ ಆ ಬೈಕ್‌ ಅನ್ನು ಚೌಕಿ ನರಸಿಂಹನಿಗೆ ಕೊಟ್ಟು, ಪ್ರತಿ ನಿತ್ಯ ತನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದ. ಹೀಗಾಗಿ ನರಸಿಂಹನೇ ಆ ಬೈಕ್‌ ಉಪಯೋಗಿ
ಸುತ್ತಿದ್ದ. ಅಲ್ಲದೆ, ಅದೇ ಬೈಕ್‌ನಲ್ಲಿ ಸುತ್ತಾಡಿ ಮನೆಗಳ್ಳತನ, ಡಕಾಯಿತಿ ಕೂಡ ಮಾಡಿದ್ದ.
ಈ ನಡುವೆ ಏ.2ರಂದು ಕೊಲೆಯಾದ ಚೌಕಿ ನರಸಿಂಹ ಹಾಗೂ ಸ್ನೇಹಿತರು ನಂದಿನಿ ಲೇಔಟ್‌ ನ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದರು. ಅದೇ ಬಾರ್‌ಗೆ ಆರೋಪಿಗಳು ಬಂದಿದ್ದರು. ಆಗ ತನ್ನ ಬೈಕ್‌ ಕಂಡ ಕಾರ್ತಿಕ್‌, ಬೈಕ್‌ ವಾಪಸ್‌ ಕೊಡುವಂತೆ ನರಸಿಂಹನಿಗೆ ಹೇಳಿದ್ದಾನೆ. ಆದರೆ, ನರಸಿಂಹ ನಿರಾಕರಿಸಿದ್ದು, ಅದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ತಕ್ಷಣ ಸಮಾಧಾನಗೊಂಡ ಕಾರ್ತಿಕ್‌, ಜಗಳ ಮಾಡುವುದು ಬೇಡ, ಇಂದಿನಿಂದ ನಾವಿಬ್ಬರೂ ಸ್ನೇಹಿತರು ಎಂದು ಹೇಳಿ, ಮತ್ತೂಮ್ಮೆ ಬಾರ್‌ಗೆ ಹೋಗಿ, ನರಸಿಂಹನಿಗೆ ಹೆಚ್ಚು ಕುಡಿಸಿದ್ದಾರೆ.
ತಡರಾತ್ರಿ 12 ಗಂಟೆ ಸುಮಾರಿಗೆ ಆರೋಪಿ ಕಾರ್ತಿಕ್‌ ಹಾಗೂ ನರಸಿಂಹ ಒಂದೇ ಬೈಕ್‌ನಲ್ಲಿ ಅನ್ನಪೂರ್ಣೇಶ್ವರಿ ನಗರದ ಎರಡನೇ ಮುಖ್ಯರಸ್ತೆಗೆ ಹೋಗಿದ್ದಾರೆ. ಅಷ್ಟರಲ್ಲಿ ಮತ್ತೂಂದು ಬೈಕ್‌ನಲ್ಲಿ ಸಚಿನ್‌ ಮತ್ತು ಹಿತೇಶ್‌ ಬಂದಿದ್ದಾರೆ. ಈ ವೇಳೆ ಏಕಾಏಕಿ ಸಚಿನ್‌ ಹಾಗೂ ಕಾರ್ತಿಕ್‌ ತಮ್ಮ ಬಳಿಯಿದ್ದ ಚಾಕುವಿನಿಂದ ಚೌಕಿ ನರಸಿಂಹನ ಕುತ್ತಿಗೆಗೆ ಇರಿದು ಕೊಂದಿದ್ದಾರೆ. ನಂತರ ನರಸಿಂಹನ ಜೇಬಿನಲ್ಲಿದ್ದ ಬೈಕ್‌ನ ಕೀ ತೆಗೆದುಕೊಂಡು ಬೈಕ್‌ ಸಮೇತ ಮೂವರೂ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next