ಕ್ರೈಸ್ಟ್ ಚರ್ಚ್: ಎರಡು ಮಸೀದಿಗಳ ಮೇಲೆ ಶುಕ್ರವಾರದಂದು ಮಧ್ಯಾಹ್ನದ ಪ್ರಾರ್ಥನೆಗೆ ಸೇರಿದ್ದವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ
40 ಜನರು ಸಾವಿಗೀಡಾಗಿದ್ದಾರೆ ಮತ್ತು 20 ಜನ ಗಾಯಗೊಂಡಿದ್ದಾರೆ. ಇದೊಂದು ಯೋಜಿತ ರೀತಿಯ ಉಗ್ರದಾಳಿ ಎಂದು ನ್ಯೂಝಿಲ್ಯಾಂಡ್ ಪ್ರಧಾನಿ ಹೇಳಿದ್ದಾರೆ. ಈ ಘಟನೆಯ ಬಳಿಕ ದ್ವೀಪ ರಾಷ್ಟ್ರದಲ್ಲಿ ಭದ್ರತಾ ಮಟ್ಟವನ್ನು ‘ಉನ್ನತ ಸ್ಥಿತಿ’ಗೇರಿಸಲಾಗಿದೆ.
ಮುಖ್ಯ ದಾಳಿಕೋರನನ್ನು ಬ್ರೆಂಟನ್ ಟಾರಂಟ್ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬ್ರೆಂಟನ್ ಟಾರಂಟ್ ಸಹಿತ ನಾಲ್ಕು ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ಇವರಲ್ಲಿ ಓರ್ವ ಮಹಿಳೆಯೂ ಸೇರಿದ್ದಾಳೆ.
ಉಗ್ರದಾಳಿಗೆ ಸಂಬಂಧಿಸಿದಂತೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರ್ರಿಸನ್ ಅವರು ಈ ಅವಳಿ ಗುಂಡಿನ ದಾಳಿಯನ್ನು ‘ಓರ್ವ ತೀವ್ರಗಾಮಿ, ಬಲಪಂಥೀಯ, ಹಿಂಸಾಪ್ರವೃತ್ತಿಯ ಉಗ್ರಗಾಮಿ’ ನಡೆಸಿದ್ದಾನೆ ಮತ್ತು ಈ ವ್ಯಕ್ತಿ ಆಸ್ಟ್ರೇಲಿಯಾ ಮೂಲದ ಪ್ರಜೆ‘ ಎಂಬುದಾಗಿ ಹೇಳಿದ್ದಾರೆ. ನ್ಯೂಝಿಲ್ಯಾಂಡ್ ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿರುವುದರಿಂದ ದಾಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ನೀಡಲು ಆಸೀಸ್ ಪ್ರಧಾನಿ ನಿರಾಕರಿಸಿದ್ದಾರೆ.
ಕ್ರೈಸ್ಟ್‌ಚರ್ಚ್‌ನಲ್ಲಿರುವ ಆಲ್-ನೂರ್ ಮಸೀದಿಯು ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಗಾಗಿ ತುಂಬಿತ್ತು. ಈ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ.
ಮಸೀದಿ ದಾಳಿಯದ್ದು ಎನ್ನಲಾಗುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ದಾಳಿಯ ಭೀಕರತೆಗೆ ಇದು ಸಾಕ್ಷಿಯಾಗಿದೆ. ಆದರೆ ಈ ವಿಡಿಯೋವನ್ನು ಹಂಚಿಕೊಳ್ಳದಂತೆ ನ್ಯೂಝಿಲ್ಯಾಂಡ್ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಘಟನೆಯ ಪ್ರತ್ಯಕ್ಷದರ್ಶಿ ಪ್ಯಾಲಸ್ತೇನಿಯನ್ ಪ್ರಜೆಯೊಬ್ಬರು ತಾವು ಕಂಡ ಭೀಕರ ದೃಶ್ಯದ ಕುರಿತಾಗಿ ಮಾಹಿತಿ ನೀಡಿದ್ದು,
ದಾಳಿಕೋರ ವ್ಯಕ್ತಿಯೊಬ್ಬರ ತಲೆಗೆ ಗುಂಡು ಹೊಡೆದಿದ್ದನ್ನು ತಾನು ಕಂಡಿರುವುದಾಗಿ ಹೇಳಿಕೊಂಡಿದ್ದಾರೆ. ಮತ್ತು 10 ಸೆಕೆಂಡುಗಳ ಬಳಿಕ ಸರಣಿ ಗುಂಡಿನ ಸದ್ದು ಕೇಳಿಸಿತು, ಮತ್ತು ಇದು ಸ್ವಯಂಚಾಲಿತ ಗನ್ ಮೂಲಕವೇ ಮಾಡಿರಬೇಕು ಎಂದು ಆ ವ್ಯಕ್ತಿ ಅಭಿಪ್ರಾಯಪಟ್ಟಿದ್ದಾರೆ. ಜನರೆಲ್ಲಾ ಭಯದಿಂದ ಸಿಕ್ಕ ಸಿಕ್ಕೆಡೆಗೆ ಓಡತೊಡಗಿದರು ಮತ್ತು ಇನ್ನು ಕೆಲವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಆ ವ್ಯಕ್ತಿ ಘಟನೆಯ ಭೀಕರತೆಯನ್ನು ವಿವರಿಸಿದ್ಧಾರೆ.
ಗುಂಡಿನ ದಾಳಿ ನಡೆದ ಇನ್ನೊಂದು ಮಸೀದಿಯಾಗಿರುವ ಡೀನ್ಸ್ ಆವ್ ಮಸೀದಿಯಲ್ಲಿ
ವ್ಯಕ್ತಿಯೊಬ್ಬರ ಪತ್ನಿಯನ್ನು ದಾಳಿಕೋರ ಮಸೀದಿ ಪಕ್ಕದ ಫುಟ್ ಪಾತ್ ನಲ್ಲೇ ಗುಂಡಿಕ್ಕಿ ಕೊಂದಿದ್ದಾನೆ. ಆ ವ್ಯಕ್ತಿ ಗುಂಡಿನ ಸದ್ದು ಕೇಳಿ ಹೊರಗೋಡಿ ಬಂದ ಸಂದರ್ಭದಲ್ಲಿ ತಮ್ಮ ಪತ್ನಿ ಗುಂಡೇಟು ತಿಂದು ಬಿದ್ದಿರುವುದನ್ನು ಕಂಡು ಆಘಾತಕ್ಕೊಳಗಾದರು. ಇನ್ನೊಬ್ಬ
ಪ್ರತ್ಯಕ್ಷದರ್ಶಿ ಹೇಳುವಂತೆ ದಾಳಿಕೋರ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸುತ್ತಿರುವುದನ್ನು ಆ ವ್ಯಕ್ತಿ ಕಂಡಿದ್ದಾರೆ. ಇನ್ನು ಗುಂಡಿನ ದಾಳಿಯ ಬಳಿಕ ಘಟನಾ ಸ್ಥಳದಲ್ಲಿ ಎಲ್ಲೆಂದರಲ್ಲಿ ರಕ್ತದ ಮಡುವಿನಲ್ಲಿ ಮೃತದೇಹಗಳು ಹರಡಿಕೊಂಡಿದ್ದವು.
ಇನ್ನೊಂದು ಮೂಲಗಳ ಪ್ರಕಾರ ದಾಳಿಕೋರ ಸೇನಾ ಸಮವಸ್ತ್ರದಲ್ಲಿದ್ದನೆಂದು ತಿಳಿದುಬಂದಿದೆ. 1992ರಲ್ಲಿ ಬಂದೂಕು ನಿಯಮಗಳು ಬಿಗಿಗೊಂಡ ಬಳಿಕ ನ್ಯೂಝಿಲ್ಯಾಂಡ್ ನಲ್ಲಿ ಈ ರೀತಿಯ ಗುಂಡಿನ ದಾಳಿ ಪ್ರಕರಣಗಳು ಬಹಳ ವಿರಳವಾಗಿದ್ದವು.