Advertisement

ಆವರಣ ಗೋಡೆಯಿಲ್ಲದೆ ಗುಮ್ಮೆತ್ತು ಸ.ಕಿ.ಪ್ರಾ. ಶಾಲೆಗೆ ಅಭದ್ರತೆ

08:56 PM Oct 19, 2021 | Team Udayavani |

ಕಾರ್ಕಳ: ಈದು ಗ್ರಾಮದ ಮುಳಿಕಾರು ಗುಮ್ಮೆತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಊರಿನ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದೆ. ಬಡವರ ಮಕ್ಕಳು ವ್ಯಾಸಂಗ ಮಾಡುವ ಸರಕಾರಿ ಶಾಲಾವರಣ ಪುಂಡರ ಹಾವಳಿಯಿಂದ ನಿತ್ಯ ಹದಗೆಡುತ್ತಿದೆ.

Advertisement

34 ವಿದ್ಯಾರ್ಥಿಗಳಿದ್ದಾರೆ…
1959ರಲ್ಲಿ ಶಾಲೆ ಆರಂಭಗೊಂಡ ಶಾಲೆಯಲ್ಲಿ ಒಟ್ಟು 34 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯ ಪರಿಸರವನ್ನು ಅಂದ ಕೆಡಿಸುವ, ಚಟುವಟಿಕೆಗಳು ಕೆಲವು ಸಮಯಗಳಿಂದ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದೇ ಶಿಕ್ಷಕರಿಗೆ, ಎಸ್‌ಡಿಎಂಸಿಯವರಿಗೆ ತಲೆನೋವಾಗಿದೆ.

ಅಕ್ರಮಕ್ಕೆ ಚಟುವಟಿಕೆ ತಾಣ
ಶಾಲಾ ಆವರಣಕ್ಕೆ ಕಾಂಪೌಂಡ್‌ ಇಲ್ಲದೆ ಇರುವುದರಿಂದ ಸಂಜೆ ವೇಳೆ ಕೆಲವು ಪುಂಡರು ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಶಾಲಾ ಆವರಣದಲ್ಲೆ ಮದ್ಯ, ಬೀಡಿ ಸೇದುವುದು, ಇಸ್ಪೀಟ್‌, ಲೂಡಾ ಆಡುವುದು, ತ್ಯಾಜ್ಯ ಬಿಸಾಡುವುದು ಇತ್ಯಾದಿ ಕೃತ್ಯಗಳಲ್ಲಿ ತೊಡಗುತ್ತಿರುತ್ತಾರೆ. ಶಾಲೆಯ ಸೊತ್ತುಗಳಾದ ನೀರಿನ ಟ್ಯಾಪ್‌, ಪೈಪ್‌ ಇತ್ಯಾದಿಗಳನ್ನು ಒಡೆದು ಹಾಕಿ ಹಾನಿ ಮಾಡುತ್ತಿರುತ್ತಾರೆ. ಇದು ಶಾಲೆಯ ವಾತಾವರಣವನ್ನೇ ಹಾಳು ಮಾಡಿದೆ.

ಗ್ರಾಮೀಣ ಈ ಸರಕಾರಿ ಶಾಲೆಗೆ ಬಡವರ ಮಕ್ಕಳೇ ಹೆಚ್ಚಾಗಿ ಬರುತ್ತಾರೆ. 5ನೇ ತರಗತಿ ತನಕ ಕಲಿಕೆಗೆ ಇಲ್ಲಿ ಅವಕಾಶವಿದೆ. ಈ ಭಾಗದಲ್ಲಿ ಗ್ರಾಮೀಣ ಬಸ್‌ ವ್ಯವಸ್ಥೆ ಕೂಡ ಇಲ್ಲ. ಹೆತ್ತವರಿಗೆ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಕಷ್ಟವಾಗುತ್ತದೆ. ಅಲ್ಲದೆ ವರ್ಷದಿಂದ ವರ್ಷಕ್ಕೆ ಗುಮ್ಮೆತ್ತು ಕಿರಿಯ ಪ್ರಾಥಮಿಕ ಸರಕಾರಿ ಶಾಲೆಯ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ.

ಇದನ್ನೂ ಓದಿ:ಕಾಲ್ನಡಿಗೆಯಲ್ಲಿ ಪ್ರಪಂಚ ಸುತ್ತಲು ಹೊರಟ ರೋಹನ್ ಅಗರ್‍ವಾಲ್

Advertisement

ಇಬ್ಬರು ಶಿಕ್ಷಕರ ಆವಶ್ಯಕತೆ
ಈಗ ಈ ಶಾಲೆ ಯಲ್ಲಿ ಮುಖ್ಯಶಿಕ್ಷಕರು ಮಾತ್ರ ಇದ್ದು, ಅವರು ಇನ್ನಾದಿಂದ 56 ಕಿ.ಮೀ. ಕ್ರಮಿಸಿ ಶಾಲೆಗೆ ಬರಬೇಕಿದೆ. ಶಾಲೆವರೆ ಗೂ ಬಸ್‌ ಇಲ್ಲದ ಕಾರಣ ಅರ್ಧ ದಾರಿ ತನಕ ಬಸ್‌ನಲ್ಲಿ ಬಂದು ಅಲ್ಲಿಂದ ಬಾಡಿಗೆ ವಾಹನ ಅಥವಾ ಕಾಲ್ನಡಿಗೆಯಲ್ಲಿ ತಲುಪಬೇಕಿದೆ. ಸ್ಥಳೀಯವಾಗಿ ಉಳಿದು ಕೊಳ್ಳಲು ವ್ಯವಸ್ಥೆಗಳಿಲ್ಲ. ಎಲ್ಲ ಕೆಲಸಗಳನ್ನು ಒಬ್ಬರೇ ಮಾಡಬೇಕಿದೆ. ಹಾಗಾಗಿ ಇನ್ನು ಇಬ್ಬರು ಶಿಕ್ಷಕರ ಆವಶ್ಯಕತೆಯಿದೆ.

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗದ್ದರಿಂದ ಕೊಠಡಿ ಸಮಸ್ಯೆಗಳು ಇಲ್ಲ. ಇರುವ ವ್ಯವಸ್ಥೆಗಳನ್ನು ಉಳಿಸಿಕೊಂಡು ಮಕ್ಕಳ ಪ್ರಮಾಣವನ್ನು ಹೆಚ್ಚಿಸುವುದು ಸವಾಲಾಗಿದೆ. ಶಾಲೆಗೆ ಮಕ್ಕಳನ್ನು ಆಕರ್ಷಿಸುವ ದೃಷ್ಟಿಯಿಂದ ರೈಲು ಬೋಗಿ ಮಾದರಿಯಲ್ಲಿ ದಾನಿಗಳ ನೆರವಿನಿಂದ ಶಾಲೆಯನ್ನು ಅಂದಗೊಳಿಸಲಾಗಿದೆ. ಆದರೆ ಪೋಷಕರು, ಶಿಕ್ಷಣ ಪ್ರೇಮಿಗಳು ಊರಿನ ಶಾಲೆಯ ಕಡೆಗೆ ಹೆಚ್ಚು ಗಮನ ಹರಿಸಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಯೋಜನೆಗಳನ್ನು ರೂಪಿಸಬೇಕಿದೆ.

ರಸ್ತೆ ದುರವಸ್ಥೆ
ಇನ್ನು ಕೆಲವು ದಿನಗಳಲ್ಲಿ ಶಾಲೆಗಳು ಕಾರ್ಯಾರಂಭವಾಗುವ ನಿರೀಕ್ಷೆಯಿದೆ. ಆದರೆ ಈ ಶಾಲೆಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮುಖ್ಯ ರಸ್ತೆಯಿಂದ ಶಾಲಾ ಆವರಣದ ತನಕದ ಅತ್ಯಲ್ಪ ದೂರವನ್ನು ಹತ್ತಿ ಇಳಿದು, ಹೊಂಡಗುಂಡಿ ದಾಟಿ ತೆರಳಬೇಕಿದೆ.

ನೆಟ್‌ವರ್ಕ್‌ಗಾಗಿ ಗುಡ್ಡವೇರಬೇಕು!
ಶಾಲೆಯ ಮಾಹಿತಿಗಳು, ಸಂದೇಶಗಳನ್ನು ರವಾನಿಸುವುದು, ಪಡೆಯು ವುದು ಎಲ್ಲ ಈಗ ಮೊಬೈಲ್‌ ಮೂಲಕವೇ ನಡೆಯುತ್ತಿರುತ್ತದೆ. ಆದರೇ ಶಾಲೆಯಿರುವ ಸ್ಥಳದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇಲ್ಲದೆ ಇರು ವುದರಿಂದ ಮುಖ್ಯ ಶಿಕ್ಷಕರು ಸಿಗ್ನಲ್‌ ಅರಸಿಕೊಂಡು ಗುಡ್ಡವೇರ ಬೇಕಿದೆ.

ಸೊತ್ತುಗಳಿಗೆ ಹಾನಿ
ಶಾಲಾ ಆವರಣ ಪ್ರವೇಶಿಸಿ, ಕೆಲವರು ಸೊತ್ತುಗಳಿಗೆ ಹಾನಿ ಮಾಡುತ್ತಾರೆ. ಇದು ದೊಡ್ಡ ಸಮಸ್ಯೆಯಾಗಿದೆ. ಆವರಣ ಗೋಡೆ ನಿರ್ಮಿಸಿದಲ್ಲಿ ಗೇಟಿಗೆ ಬೀಗ ಹಾಕಿ ರಕ್ಷಣೆ ಪಡೆಯಬಹುದು.
ಆಲ್ವಿನ್‌, ಮುಖ್ಯ ಶಿಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next