ನವದೆಹಲಿ: ಖ್ಯಾತ ಉರ್ದು ಕವಿ, ಬಾಲಿವುಡ್ ನ ಖ್ಯಾತ ಚಿತ್ರ ಸಾಹಿತಿ ಗುಲ್ಜಾರ್ ಹಾಗೂ ಸಂಸ್ಕೃತ ಪಂಡಿತ, ಜಗದ್ಗುರು ರಾಮಭದ್ರಾಚಾರ್ಯ ಅವರು 58ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಜ್ಞಾನಪೀಠ ಆಯ್ಕೆ ಸಮಿತಿ ಶನಿವಾರ (ಫೆ.17) ಘೋಷಿಸಿದೆ.
ಇದನ್ನೂ ಓದಿ:Court ಮೆಟ್ಟಿಲೇರಿದ ಪ್ರಾಣಿಗಳ ಹೆಸರಿನ ಕಥೆ: ಸಿಂಹಿಣಿ ಸೀತಾಳೊಂದಿಗೆ ಅಕ್ಬರ್ ಬೇಡ!!
ಹಿಂದಿ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ಗುಲ್ಜಾರ್ ಅವರನ್ನು ಈ ಶತಮಾನದ ಪ್ರಸಿದ್ಧ ಉರ್ದು ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಗುಲ್ಜಾರ್ ಅವರು 2002ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2013ರಲ್ಲಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 2004ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
ರಾಮಭದ್ರಾಚಾರ್ಯರು ಮಧ್ಯಪ್ರದೇಶದ ಚಿತ್ರಕೂಟದ ತುಳಸಿಪೀಠದ ಸಂಸ್ಥಾಪಕ, ಪ್ರಸಿದ್ಧ ಹಿಂದೂ ಧಾರ್ಮಿಕ ನಾಯಕ, ಶಿಕ್ಷಣ ತಜ್ಞ ಹಾಗೂ 100 ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ.
ಜ್ಞಾನಪೀಠ ಆಯ್ಕೆ ಸಮಿತಿ ಪ್ರಕಟನೆಯಲ್ಲಿ ತಿಳಿಸಿರುವಂತೆ, 2023ನೇ ಸಾಲಿನಲ್ಲಿ ಎರಡು ಭಾಷೆಯ ಇಬ್ಬರು ಪ್ರಮುಖ ಲೇಖಕರಿಗೆ ಪ್ರಶಸ್ತಿ ನೀಡಲು ಸಮಿತಿ ನಿರ್ಧರಿಸಿದೆ. ಸಂಸ್ಕೃತ ಸಾಹಿತ್ಯದಲ್ಲಿ ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಹಾಗೂ ಉರ್ದು ಸಾಹಿತ್ಯದಲ್ಲಿ ಗುಲ್ಜಾರ್ ಅವರಿಗೆ ಜ್ಞಾನಪೀಠ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದೆ. 2022ರಲ್ಲಿ ಗೋವಾದ ಖ್ಯಾತ ಲೇಖಕ ದಾಮೋದರ್ ಮೌಝೋ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರು.