ಕಳೆದ ವರ್ಷ ತೆರೆಗೆ ಬಂದಿದ್ದ “ಗುಳ್ಟು’ ಚಿತ್ರ ನಿಮಗೆ ನೆನಪಿರಬಹುದು. ಬಹುತೇಕ ಹೊಸ ಪ್ರತಿಭೆಗಳೆ ಸೇರಿ ಮಾಡಿದ್ದ ಈ ಚಿತ್ರ ಸೂಪರ್ ಹಿಟ್ ಕೂಡ ಆಗಿತ್ತು. ಆದರೆ ಆ ಚಿತ್ರದ ನಂತರ ಅದರ ನಾಯಕ ನಟ ನವೀನ್ ಶಂಕರ್ ಬೇರೆ ಯಾವ ಚಿತ್ರಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಅದೇ “ಗುಳ್ಟು’ ಖ್ಯಾತಿಯ ನವೀನ್ ಶಂಕರ್ ಹೊಸ ಚಿತ್ರವೊಂದನ್ನು ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಹೌದು, ನವೀನ್ ಹುಟ್ಟುಹಬ್ಬದ ಪ್ರಯುಕ್ತ ಅವರು ಅಭಿನಯಿಸುತ್ತಿರುವ ಮುಂಬರುವ ಚಿತ್ರದ, ಇನ್ನೂ ಹೆಸರಿಡದ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಇನ್ನು ಈ ಹೊಸ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಜೂನ್ ತಿಂಗಳಿನಲ್ಲಿ ಚಿತ್ರ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಈ ಹಿಂದೆ ಪುರಿ ಜಗನ್ನಾಥ್ ಸೇರಿದಂತೆ ಹಲವು ಖ್ಯಾತ ನಾಮ ನಿರ್ದೇಶಕರ ಜೊತೆಗೆ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಶ್ರೀಧರ್ ಷಣ್ಮುಖ ಎನ್ನುವ ನವ ಪ್ರತಿಭೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಅಂದಹಾಗೆ, ಇದೊಂದು ಹೈಪರ್ ಲಿಂಕ್ ಅಥವಾ ಹಾಫ್ ಬೀಟ್ ಶೈಲಿಯ ಚಿತ್ರ ಎಂದು ಹೇಳಲಾಗುತ್ತಿದ್ದು, ಕ್ರೈಮ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಕಾಮಿಡಿ, ಆ್ಯಕ್ಷನ್ಸ್ ಎಲ್ಲವೂ ಇರಲಿದೆಯಂತೆ. ಚಿತ್ರದಲ್ಲಿ ಪ್ರತಿಯೊಂದು ಪಾತ್ರಗಳೂ ಪ್ರಮುಖವಾಗಿದ್ದು, ಒಂದಕ್ಕೊಂದು ಪಾತ್ರಗಳು ಕನೆಕ್ಟ್ ಆಗುತ್ತ ಚಿತ್ರದ ಕಥೆ ಸಾಗುತ್ತ ಹೋಗುತ್ತವೆ. ಅಂತಿಮವಾಗಿ ಏನಾಗುತ್ತದೆ ಅನ್ನೋದೆ ಚಿತ್ರದ ಕ್ಲೈಮ್ಯಾಕ್ಸ್. ಎಲ್ಲಾ ವರ್ಗದ ಆಡಿಯನ್ಸ್‌ಗೂ ಇಷ್ಟವಾಗುವಂತ ಕಥೆ ಚಿತ್ರದಲ್ಲಿರಲಿದ್ದು, ಚಿತ್ರದ ಒಂದೊಂದೆ ಪಾತ್ರಗಳನ್ನ ಪರಿಚಯ ಮಾಡಿ, ಜೂನ್ ಅಂತ್ಯದೊಳಗೆ ಶೂಟಿಂಗ್‌ಗೆ ಹೊರಡುವ ಯೋಜನೆ ಇದೆ ಎನ್ನುತ್ತದೆ ಚಿತ್ರತಂಡ.
“ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಓಂಕಾರ್ ಮತ್ತು ಪ್ರಶಾಂತ್ ಅಂಚನ್ ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ. ಉಳಿದಂತೆ ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಗ್ರಹಣ, ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಗೌಸ್ ಪೀರ್ ,ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ ಸಾಹಿತ್ಯವಿದೆ. ಸದ್ಯ ಸೆಟ್ಟೇರಲು ತೆರೆಮರೆಯಲ್ಲಿ ತಯಾರಿ ನಡೆಸುತ್ತಿರುವ ಈ ಹೊಸ ಚಿತ್ರದ ಟೈಟಲ್, ಕಲಾವಿದರು, ತಂತ್ರಜ್ಞರು ಮತ್ತಿತರ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.