ಹೊಸಬರೇ ಸೇರಿ ಮಾಡಿದ “ಗುಲ್ಟು’ ಚಿತ್ರ ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆದಿರುವುದು ಗೊತ್ತೇ ಇದೆ. ಮೊದಲ ವಾರ ಯಾವಾಗ, ಸಿನಿಮಾ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತೋ, ಎರಡನೇ ವಾರದಲ್ಲಿ ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚಾಯಿತು. ಅಷ್ಟೇ ಅಲ್ಲ, ಮಲ್ಟಿಪ್ಲೆಕ್ಸ್‌ನಲ್ಲೂ ಪ್ರದರ್ಶಗಳು ಹೆಚ್ಚಾದವು. ಈಗ “ಗುಲ್ಟು’ ಇನ್ನೊಂದು ಹೊಸ ಸುದ್ದಿ ಕೊಟ್ಟಿದ್ದಾನೆ. ಅದೇನೆಂದರೆ, ಮುಂದಿನ ವಾರ ವಿದೇಶದಲ್ಲೂ “ಗುಲ್ಟು’ ಮಿಂಚಲಿದ್ದಾನೆ. ಹೌದು, ಜರ್ಮನಿ ಮತ್ತು ಯುರೋಪ್ ದೇಶದಲ್ಲಿ “ಗುಲ್ಟು’ ಬಿಡುಗಡೆಯಾಗುತ್ತಿದೆ.
ಏಪ್ರಿಲ್ 15 ರಂದು ಫ್ರಾಂಕ್‌ಫರ್ಟ್, ಏ.21 ರಂದು ಬರ್ಲಿನ್ ಸೇರಿದಂತೆ ಏ.29 ರಂದು ಸ್ವೀಡನ್‌ನಲ್ಲೂ ಚಿತ್ರ ಪ್ರದರ್ಶನವಾಗುತ್ತಿದೆ. ಅಲ್ಲಿನ ಸುಮಾರು ಹತ್ತಕ್ಕೂ ಹೆಚ್ಚು ಪರದೆಗಳಲ್ಲಿ “ಗುಲ್ಟು ಚಿತ್ರ ಪ್ರದರ್ಶನವಾಗಲಿದೆ.
ಈಗಾಗಲೇ ಚಿತ್ರವನ್ನು ನೋಡಿರುವ ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು ಚಿತ್ರತಂಡವನ್ನು ಬೆಂಬಲಿಸಿ, ಪ್ರೋತ್ಸಾಹಿಸಿದ್ದಾರೆ. ನಟ ಯಶ್ ಕೂಡ ಬುಧವಾರ ನಿರ್ದೇಶಕ ಜನಾರ್ದನ್ ಅವರನ್ನು ಕರೆದು, “ಗುಲ್ಟು’ ಕುರಿತು ಮಾತನಾಡಿದ್ದಾರೆ. ಚಿತ್ರದ ಬಗ್ಗೆ ಒಳ್ಳೆಯ ವಿಮರ್ಶೆಗಳು ಹಾಗು ಜನರಿಂದ ಬಂದಂತಹ ಉತ್ತಮ ಪ್ರತಿಕ್ರಿಯೆಯನ್ನು ಗಮನಿಸಿದ ಯಶ್, “ಗುಲ್ಟು’ ಚಿತ್ರವನ್ನು ನೋಡುವುದಾಗಿ ಭರವಸೆ ನೀಡಿದ್ದಾರೆ.
ನಾಳೆ (ಶುಕ್ರವಾರ) ಓರಾಯನ್ ಮಾಲ್‌ನಲ್ಲಿ ಯಶ್ ಅವರು “ಗುಲ್ಟು’ ಚಿತ್ರ ನೋಡುವುದಾಗಿ ತಿಳಿಸಿದ್ದಾರೆ. ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ನಿರ್ದೇಶಕ ಜನಾರ್ದನ್, “ನಮ್ಮ ಚಿತ್ರಕ್ಕೆ ಎಲ್ಲೆಡೆಯಿಂದಲೂ ಒಳ್ಳೆಯ ಮಾತುಗಳು ಕೇಳಿಬಂದಿವೆ. ಎರಡನೇ ವಾರದಲ್ಲೂ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ಈಗಾಗಲೇ ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ “ಗುಲ್ಟು’ ವಿದೇಶದಲ್ಲೂ ಪ್ರದರ್ಶನವಾಗುತ್ತಿದೆ ಎಂಬುದೇ ಖುಷಿಯ ವಿಷಯ’ ಎನ್ನುತ್ತಾರೆ ನಿರ್ದೇಶಕ ಜನಾರ್ದನ್.