ಸೈಕಲ್ ಇದ್ದರೂ ನಾನೇ ಚಕ್ರದ ಗಾಳಿ ತೆಗೆದು ನಿನ್ನ ಜೊತೆ ಮಾತಾಡುತ್ತಾ ಬರುತ್ತಿದ್ದೆ. ಆಮೇಲೆ ನೀನೂ ನಿಮ್ಮ ಅಪ್ಪನನ್ನು ಕಾಡಿ, ಬೇಡಿ ಸೈಕಲ್ ತೆಗೆಸಿಕೊಂಡೆ…
ಇಳಿಸಂಜೆಯಲ್ಲಿ ಭೂಮಿಯನ್ನು ಅಗಲಿ ಸೂರ್ಯ ಬೇಸರದಿಂದ ಮರೆಯಾಗುತ್ತಿರುವಾಗ ನೆನಪಿನ ಬುತ್ತಿಯ ಗಂಟು ಬಿಚ್ಚಿಕೊಂಡಿತು. ಮನದ ಗೋಡೆಯ ಮೇಲೆ ಹೈಸ್ಕೂಲ್ ಗೆಳತಿಯ ಕಿರುಚಿತ್ರ ಅಸ್ಪಷ್ಟವಾಗಿ ಮೂಡಿ, ಹೃದಯವನ್ನು ರಂಗೇರಿಸಿತು. ಎಲ್ಲರ ಜೀವನದಲ್ಲೂ ಒಂದೊಂದು ಕರಾಳ ದಿನ ಇದ್ದೇ ಇರುತ್ತೆ. ನೀನು ನನ್ನನ್ನು ಬಿಟ್ಟು ಹೋದೆಯಲ್ಲ ಹುಡುಗೀ, ಅದೇ ನನ್ನ ಜೀವನದ ಕರಾಳ ದಿವಸ.
ಮನದ ಗೋಡೆಯ ಮೇಲೆ ನಮ್ಮಿಬ್ಬರ ಮೊದಲ ಪುಟ ಮೂಡಿತ್ತು. ನನಗೆ ಸೈಕಲ್ ಮೇಲೆ ಶಾಲೆಗೆ ಹೋಗುವುದು ಅಂದ್ರೆ ತುಂಬಾ ಇಷ್ಟ. ಅದರಲ್ಲೂ, ಮಳೆಗಾಲದಲ್ಲಿ ಸೈಕಲ್ ತುಳಿಯೋದು ಅಂದ್ರೆ ಎಲ್ಲಿಲ್ಲದ ಸಂತಸ. ಆದರೆ, ತುಂತುರು ಮಳೆಯ ಆ ದಿನ ನನ್ನ ಸೈಕಲ್ ಪಂಕ್ಚರ್ ಆಗಿತ್ತು. ನಾನು ಮಳೆಯಲ್ಲಿ ನಡೆದುಕೊಂಡು ಬರುತ್ತಿದ್ದೆ. ಆಗ ನೀನು ಹೆಗಲಿಗೆ ಬ್ಯಾಗ್ ಹಾಕಿಕೊಂಡು, ಪಿಂಕ್ ಕಲರಿನ ಕೊಡೆ ಹಿಡಿದುಕೊಂಡು ದೇವರಗಿ ಕ್ರಾಸ್‌ನಿಂದ ಮುಖ್ಯ ರಸ್ತೆಗೆ ಬಂದು, ಅಲ್ಲಿಂದ ಸೀದಾ ಶಾಲೆಗೇ ಹೋಗಿಬಿಟ್ಟೆ.
ಆ ನಿನ್ನ ಹಂಸದ ನಡಿಗೆ ನವಿಲು ಕೂಡ ನಾಚುವಂತಿತ್ತು. ಆ ದೃಶ್ಯವನ್ನೇ ಮತ್ತೆ ಮತ್ತೆ ನೆನೆಯುತ್ತಾ ಕುತೂಹಲದಿಂದಲೇ ಶಾಲೆಗೆ ಬಂದಾಗ ಗೊತ್ತಾಯಿತು ನೀನು ನಮ್ಮ ಶಾಲೆಗೆ ಹೊಸಬಳೆಂದು. ಅಂದಿನಿಂದ ದಿನವೂ ನಿನ್ನನ್ನು ನೋಡಲು ಬೇಗ ಬರಲು ಶುರು ಮಾಡಿದೆ. ಸೈಕಲ್ ಇದ್ದರೂ ನಾನೇ ಚಕ್ರದ ಗಾಳಿ ತೆಗೆದು ನಿನ್ನ ಜೊತೆ ಮಾತಾಡುತ್ತಾ ಬರುತ್ತಿದ್ದೆ. ಆಮೇಲೆ ನೀನೂ ನಿಮ್ಮ ಅಪ್ಪನನ್ನು ಕಾಡಿ, ಬೇಡಿ ಸೈಕಲ್ ತೆಗೆಸಿಕೊಂಡೆ. ನೆನಪಿದೆಯಾ ನಿನಗೆ? ನಾವಿಬ್ಬರೂ ದಿನವೂ ಒಟ್ಟಿಗೆ ಸೈಕಲ್ ಮೇಲೆ ಶಾಲೆಗೆ ಹೋಗುತ್ತಿದ್ದಿದ್ದು?
ನಾನು ನಿನ್ನ ಪರವಾಗಿ ಜಗಳವಾಡಿ ಯಾರಿಂದಲೋ ಬಡಿಸಿಕೊಂಡು ಬಂದಾಗ ನಿನ್ನ ಕೈವಸ್ತ್ರದಿಂದ ಗಾಯಕ್ಕೆ ಪಟ್ಟಿ ಕಟ್ಟಿದೆ. ಮಮತೆಯ ರೂಪ ತಾಳಿ ನನ್ನ ನೋವು ನುಂಗಿದೆ. ಇಡೀ ದಿನ ಜೊತೆಗಿದ್ದು ನನಗೆ ಸಮಾಧಾನ ಹೇಳಿದ್ದೆ. ನನ್ನ ಪರವಾಗಿ ಮಾತಾಡಿದ್ದಕ್ಕೆ ಹೀಗೆಲ್ಲಾ ಆಯ್ತು. ಸಾರಿ ಕಣೋ, ಅಂದಿದ್ದೆ.
ಗೆಳತಿ ಆ ಎಲ್ಲಾ ನೆನಪುಗಳು ನಡುರಾತ್ರಿಯಲ್ಲೂ ನನ್ನನ್ನು ಬಡಿದು ಎಬ್ಬಿಸುತ್ತಿವೆ ಈಗ. ನೀನು ಮುನಿಸಿಕೊಂಡಾಗ ಗುಲ್‌ಮೊಹರ್ ಹೂವಿನಂತೆ ಕಾಣುತ್ತಿದ್ದೆ. ನಿನ್ನ ಕೋಪವನ್ನು ತಣಿಸಲು ನಾನು ನಿನ್ನ ಇಷ್ಟದ ನೆಲ್ಲಿಕಾಯಿ ತಂದುಕೊಡುತ್ತಿದ್ದೆ. ಆಗ ನಗುಮೊಗದಿಂದ ನನಗೆ ಮುತ್ತಿಟ್ಟು ನೀನು ಓಡಿ ಹೋಗುತ್ತಿದ್ದೆ. ಏನೂ ಅರಿಯದ ವಯಸ್ಸಿನಲ್ಲಿ ಹುಟ್ಟಿದ ಈ ಪ್ರೀತಿಗೆ ಏನೆಂದು ಹೆಸರಿಡಲಿ ಹೇಳು? ನಿನ್ನ ತಂದೆಗೆ ಬೇರೆ ಕಡೆ ವರ್ಗಾವಣೆ ಆಗಿದೆ ಎಂದು ಅಳುತ್ತಾ ಬಂದು, ಕೊನೆಯ ಸಾರಿ ಕೆನ್ನೆಗೆ ಸಿಹಿ ಮುತ್ತಿಟ್ಟು, ನನ್ನ ಬಿಟ್ಟು ಹೋದೆ. ಅಂದಿನಿಂದ ನಾನು ಮೌನಿಯಾಗಿದ್ದೇನೆ. ಯಾವುದೋ ನೆಪದಲ್ಲಿ ಇವತ್ತಲ್ಲ ನಾಳೆ ನೀನು ನನ್ನನ್ನು ಹುಡುಕಿಕೊಂಡು ಬರುತ್ತೀಯ ಎಂದು ಕಾಯುವುದೇ ಈಗ ನನ್ನ ಖಯಾಲಿಯಾಗಿದೆ.
– ಎ.ಆರ್. ಆರೀಫ್ ವಾಲೀಕಾರ, ಬೆಳಗಾವಿ