Advertisement

ದಿಲ್ಲಿಯಂತೆ ಇಲ್ಲೂ ಗಲ್ಲಿ ಕ್ಲಿನಿಕ್‌ !

11:15 AM Feb 23, 2021 | Team Udayavani |

ಬೆಂಗಳೂರು: ರಾಷ್ಟ್ರ ರಾಜಧಾನಿ ಮಾದರಿಯಲ್ಲಿಯೇ ರಾಜ್ಯ ರಾಜಧಾನಿಯಲ್ಲಿಯೂ ಸರ್ಕಾರಿ ಗಲ್ಲಿ ಕ್ಲಿನಿಕ್‌ಗಳು ಬರಲಿವೆ.

Advertisement

ಎಲ್ಲಾ ಅಂದುಕೊಂಡಂತೆ ಆದರೆ ಮಾ. 8 ರಂದು ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿಯೇ ಈ ಕುರಿತು ಘೋಷಣೆಯಾಗಲಿದೆ. ದೆಹಲಿ ಮಹಾನಗರದಲ್ಲಿ ಈಗಾಗಲೇ 450 ಕ್ಲಿನಿಕ್‌ಗಳು (ಮೊಹಲ್ಲಾ ಕ್ಲಿನಿಕ್‌) ಕಾರ್ಯನಿರ್ವಹಿಸುತ್ತಿವೆ. ಕಳೆದ ಐದು ವರ್ಷಗಳಿಂದ ಕೋಟ್ಯಂತರ ಸ್ಥಳೀಯರಿಗೆ ಉಚಿತ ರೋಗಪತ್ತೆ ಮತ್ತು ಚಿಕಿತ್ಸೆ ಪಡೆದಿದ್ದಾರೆ.

ಕಡಿಮೆ ಸಿಬ್ಬಂದಿ, ನಿರ್ವಹಣೆ ವೆಚ್ಚ ಹಾಗೂ ಸಾರ್ವಜನಿಕರಿಗೆ ಸಮೀಪದಲ್ಲಿ ತ್ವರಿತ ಚಿಕಿತ್ಸೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನ 57 ಕಡೆಗಳಲ್ಲಿ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭಗಳನ್ನು ನಿರ್ವಹಣೆ ಮಾಡಲು ಮಹಾನಗರಗಳಲ್ಲಿ ಆರೋಗ್ಯ ಕೇಂದ್ರಗಳು ಸಂಖ್ಯೆ ಹೆಚ್ಚಿಸಬೇಕು. ಅದರಲ್ಲೂ ತ್ವರಿತ ಚಿಕಿತ್ಸೆ ಸಿಗುವ ಆರೋಗ್ಯ ಕೇಂದ್ರಗಳ ಅವಶ್ಯಕತೆ ಹೆಚ್ಚಿದೆ ಎಂಬುದನ್ನು ಸರ್ಕಾರ ಅರಿತಿದೆ. ಪ್ರಮುಖವಾಗಿ ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದ ಕಡೆಗಳಲ್ಲಿ ಮತ್ತು ಸ್ಲಂಗಳು, ಬಡವರು ಹೆಚ್ಚಿರುವ ಕಡೆಗಳಲ್ಲಿ ಗಲ್ಲಿ ಕ್ಲಿನಿಕ್‌ಗಳನ್ನು ಆರಂಭಿಸುವ ಚಿಂತನೆ ನಡೆದಿದೆ.

ವಾರ್ಡ್‌ಗೆ ಒಂದು ಆರೋಗ್ಯ ಕೇಂದ್ರಕ್ಕೆ ಪ್ರಸ್ತಾವನೆ:

ಇನ್ನೊದೆಡೆ ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್‌ ಇದ್ದು, 141 ಆರೋಗ್ಯ ಕೇಂದ್ರ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ವಾರ್ಡ್‌ಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಅವಶ್ಯಕವಿದ್ದು, ಈ ನಿಟ್ಟಿನಲ್ಲಿ ಹೊಸ 57 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನುದಾನ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಈಗಾಗಲೇ ಬಿಬಿಎಂಪಿ ಪ್ರಸ್ತಾ ವನೆ ಸಲ್ಲಿಸಿದೆ. ಪ್ರಾಥಮಿಕ ಆರೋಗ್ಯಕೇಂದ್ರ ಇಲ್ಲದ ಕಡೆಗಳಲ್ಲಿಯೆ ಮೊದಲು ಗಲ್ಲಿ ಕ್ಲಿನಿಕ್‌ಗಳು ಆರಂಭವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಕಡಿಮೆ ಸಿಬ್ಬಂದಿ, ಕಡಿಮೆ ವೆಚ್ಚ: ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 10ಕ್ಕೂ ಹೆಚ್ಚು ಸಿಬ್ಬಂದಿ ಇರಲಿದ್ದು, ದೊಡ್ಡ ಕಟ್ಟಡಗಳಿರುತ್ತವೆ. ಆದರೆ, ಗಲ್ಲಿ ಕ್ಲಿನಿಕ್‌ಗಳಲ್ಲಿ ಒಬ್ಬ ವೈದ್ಯ, ನರ್ಸ್‌, ಫಾರ್ಮಸಿಸ್ಟ್‌, ಗ್ರೂಪ್‌ ಡಿ ನೌಕರರಿರುತ್ತಾರೆ. ಮನೆ, ಸಣ್ಣ ಕಟ್ಟಡಗಳಲ್ಲಿಯೂ ಕಾರ್ಯಾರಂಭಿಸಬಹುದು. ಒಟ್ಟಾರೆ ನಿರ್ಮಾಣ ಮತ್ತು ನಿರ್ವಹಣೆ ವೆಚ್ಚವೂ ಕಡಿಮೆ. ಹೆಚ್ಚು ಜನರಿಗೆ ತಲುಪಬಹುದು. ಜತೆಗೆ ನಗರದ ಪ್ರಮುಖ ಆಸ್ಪತ್ರೆಗಳ ಹೊರೆಯನ್ನು ಕಡಿಮೆ ಮಾಡಲಿದ್ದು, ಹೆಚ್ಚುವರಿ ಚಿಕಿತ್ಸೆ ಇದ್ದರೆ ಮಾತ್ರವೇ ತೆರಳುವ ಅವಶ್ಯಕತೆ ಬೀಳುತ್ತದೆ.

ಈಗಾಗಲೇ ಬೆಂಗಳೂರಲ್ಲಿದೆ ಮೊಹಲ್ಲಾ ಕ್ಲಿನಿಕ್‌ :

ಆಮ್‌ಆದ್ಮಿ ಪಾರ್ಟಿಯು ದೆಹಲಿ ಮಾದರಿಯಲ್ಲಿ ಶಾಂತಿನಗರದ ಬಳಿ ಮೊಹಲ್ಲಾ ಕ್ಲಿನಿಕ್‌ ಅನ್ನು “ಆಮ್‌ ಆದ್ಮಿ ಕ್ಲಿನಿಕ್‌’ ಹೆಸರಿನಲ್ಲಿ ಆರಂಭಿಸಿದೆ. ನವೆಂಬರ್‌ನಿಂದ ಕಾರ್ಯಾರಂಭಿಸಿದ್ದು, ಉಚಿತವಾಗಿ ಚಿಕಿತ್ಸೆನೀಡುತ್ತಿದೆ. ನಿತ್ಯ 50 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ಬಿಬಿಎಂಪಿ ಚುನಾವಣೆಯನ್ನು ಗುರಿಯಾಗಿಸಿಕೊಂಡು ಈ ಕ್ಲಿನಿಕ್‌ ಆರಂಭಿಸಲಾಗಿದೆ.

ಯಾವ ಚಿಕಿತ್ಸೆ ಸೌಲಭ್ಯ ಲಭ್ಯ? :  ಸಂಪೂರ್ಣ ಉಚಿತವಾಗಿ ಸೇವೆ ಇರಲಿದೆ. ಜ್ವರ ಶೀತ ಮಾದರಿಯ ವೈರಲ್‌ ಕಾಯಿಲೆಗಳ ಚಿಕಿತ್ಸೆಯಿಂದ ಹಿಡಿದು ಹೃದ್ರೋಗ, ರಕ್ತದೊತ್ತಡ, ಮಧುಮೇಹ ಸೇರಿದಂತೆ ದೀರ್ಘ‌ ಕಾಲದ ಆರೋಗ್ಯ ಸಮಸ್ಯೆಗಳ ಫಾಲೋ ಅಪ್‌ ತಪಾಸಣೆಯೂ ಲಭ್ಯವಿದೆ. 50ಕ್ಕೂ ಹೆಚ್ಚು ರೋಗಪತ್ತೆ ಪರೀಕ್ಷೆಗಳು ಅವುಗಳಿಗೆ ಚಿಕಿತ್ಸೆ ಸೌಲಭ್ಯ ಇರಲಿದೆ. ಹೆಚ್ಚುವರಿ ಚಿಕಿತ್ಸೆ ಇದ್ದರೆ ಶೀಘ್ರ ರೆಫೆರಲ್‌ ಆಸ್ಪತ್ರೆಗೆ ವರ್ಗಾಯಿಸಲಾಗುತ್ತದೆ. ಇನ್ನು ಈ ಕ್ಲಿನಿಕ್‌ಗಳು ಯಾವುದೇ ದತ್ತಾಂಶ ಸಂಗ್ರಹ, ಸಮೀಕ್ಷೆಗೆ ಈ ಕೇಂದ್ರ ಗಳನ್ನು ಬಳಸದೇ ಇವು ಸಂಪೂರ್ಣವಾಗಿ ಚಿಕಿತ್ಸೆಗೆ ಮೀಸಲಿರಲಿವೆ.

 

 – ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next