Advertisement

ಗೂಳೂರು ಮಹಾಗಣಪತಿ ಭವ್ಯ ವಿಸರ್ಜನೆ

05:49 PM Nov 27, 2017 | |

ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರಿನ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವದ ಭವ್ಯ ಮೆರವಣಿಗೆ ಭಾನುವಾರ ಗೂಳೂರಿನ ಮುಖ್ಯ ರಸ್ತೆಗಳಲ್ಲಿ ವೈಭವಯುತವಾಗಿ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆ ರಂಗು ತಂದಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಮೆರವಣಿಗೆಗೆ ಸಾಕ್ಷಿಯಾದರು.

Advertisement

ಗೂಳೂರು ಗಣೇಶ ಮೂರ್ತಿಯನ್ನು ದಿಪಾವಳಿ ಬಲಿಪಾಡ್ಯಮಿಯಂದು ಪ್ರತಿಷ್ಠಾಪಿಸಿ ಒಂದು ತಿಂಗಳ ಕಾಲ ಪೂಜೆ ಸಲ್ಲಿಸಿ, ನಂತರ ವಿಶೇಷ ಮೆರವಣಿಗೆ ಮಾಡಿ ವಿಸರ್ಜಿಸಲಾಗುತ್ತದೆ. ಪ್ರಸಕ್ತ ವರ್ಷದ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಶನಿವಾರ ರಾತ್ರಿ ಆರಂಭಗೊಂಡಿದ್ದು, ಭಾನುವಾರ ಸಂಜೆ ಗೂಳೂರು ಕೆರೆಯಲ್ಲಿ ಸಹಸ್ರಾರು ಭಕ್ತರ ಸಮುಖದಲ್ಲಿ ವಿಸರ್ಜಿಸಲಾಯಿತು.

ರಾತ್ರಿ ಮೆರವಣಿಗೆ: ಗೂಳೂರು ಗ್ರಾಮದ 18 ಕೋಮುಗಳ ಜನರು ಒಗ್ಗೂಡಿ ಆಚರಿಸುವ ಗೂಳೂರು ಗಣೇಶನ ಪೂಜೆ ಶನಿವಾರ ರಾತ್ರಿ ಸಂಪನ್ನಗೊಂಡಿತು. ಆಸ್ಥಾನ ಮಂಟಪದಿಂದ ಗಣೇಶ ಮೂರ್ತಿಯನ್ನು ಮೆರವಣಿಗೆಯ ರಥಕ್ಕೆ ತಂದು ಕೂರಿಸಲಾಯಿತು. ನಂತರ ರಾತ್ರಿ 1.30ರ ಸುಮಾರಿಗೆ ಆರಂಭವಾದ ಗಣೇಶನ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳಾದ ನಾದಸ್ವರ, ಕರಡಿಮಜಲು, ನಾಸಿಕ್‌ ಡೋಲು, ಕರಡಿವಾದ್ಯ, ವೀರಗಾಸೆ, ಕೀಲುಕುದುರೆ, ನಂದಿಕೋಲು, ಡೊಳ್ಳು ಕುಣಿತ, ಸೋಮನ ಕುಣಿತ, ಪೂಜಾ ಕುಣಿತ ತಂಡಗಳ ಪ್ರದರ್ಶನದ ಜೊತೆಗೆ, ಪಟಾಕಿ, ಬಾಣ, ಬಿರುಸುಗಳ ಸಿಡಿತದೊಂದಿಗೆ ಭಾನುವಾರ ಬೆಳಗಿನ ಜಾವ 6.30ರವರೆಗೆ ಜರುಗಿತು. 

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಅಪಾರ ಭಕ್ತರು ಮಹಾ ಗಣಪತಿಗೆ ಪೂಜೆ ಸಲ್ಲಿಸಿದರು. ಭಾನುವಾರ ಸಂಜೆವರೆಗೂ ಗೂಳೂರಿನ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ಸಾಗಿ, ಸಂಜೆ 5 ಗಂಟೆಯವರೆಗೂ ನಡೆಯಿತು. ನಂತರ ಸಂಜೆ ಗೋಧೂಳಿ ಲಗ್ನದಲ್ಲಿ ಗೂಳೂರು ಕೆರೆಯಲ್ಲಿ ನಿರ್ಮಿಸಿರುವ ಕಲ್ಯಾಣಯಲ್ಲಿ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ ಅತಿ ವಿಜೃಂಭಣೆಯಿಂದ ಜರುಗಿತ್ತು. 

ಸಿಡಿ ಮದ್ದಿನ ಪ್ರದರ್ಶನ: ಜಿಲ್ಲೆಯಲ್ಲಿ ಗೂಳೂರು ಗಣೇಶನ ಪರಸೆ ಎಂದು ಪ್ರಸಿದ್ಧಿ ಪಡೆದಿರುವ ಗಣೇಶ ಮಹೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಉತ್ಸವದಲ್ಲಿ ಶನಿವಾರ ಮಧ್ಯರಾತ್ರಿ ಎರಡು ಗಂಟೆಯಲ್ಲಿ ನಡೆದ ಆಕರ್ಷಕ ಮದ್ದಿನ ಪ್ರದರ್ಶನ 500 ಅಡಿ ಉದ್ದದ ಜೋಗ್‌ ಫಾಲ್ಸ್‌ , ನೂರು ಬಾರಿ ಹೊಡೆಯುವ ಔಟ್ಸ್‌ ಮತ್ತು ಪ್ಯಾರಾಚೂಟ್‌ಗಳನ್ನು ನೋಡಿ ಸಂತಸಪಟ್ಟರು. 

Advertisement

ಭಾನುವಾರ ಸಂಜೆ ಐದು ಗಂಟೆಯಲ್ಲಿ ಗೂಳೂರು ಕೆರೆಯಲ್ಲಿ ಮಹಾ ಗಣಪತಿಯ ವಿಸರ್ಜನೆ ಮಾಡುವ ವೇಳೆಯಲ್ಲಿ ಕೆರೆಯ ಬಳಿ ಒಂದು ಸಾವಿರ ಅಡಿ ಮೇಲಕ್ಕೆ ಹೋಗುವ ಔಟ್ಸ್‌ನಲ್ಲಿ ಜೀವಂತ ಪಾರಿವಾಳ ಮತ್ತು ಕೋಲಿಗಳನ್ನು ಹಾರಿಸಿ ನೋಡುಗರ ಗಮನ ಸೆಳೆದರು.ಗಣೇಶ್‌ ವಿಸರ್ಜನೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಪ್ರಸಾದ ಮತ್ತು ಅನ್ನಸಂತರ್ಪಣೆ ನಡೆಯಿತು.

ಬಂದೋಬಸ್ತ್: ರಾಜ್ಯ ವಿವಿಧ ಬಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next