Advertisement

ಗುಳೇದಗುಡ್ಡ ಬಸ್‌ ನಿಲ್ದಾಣ ಕಾಮಗಾರಿ ಕಳಪೆ

12:01 PM Oct 29, 2019 | Suhan S |

ಗುಳೇದಗುಡ್ಡ: ಕೋಟ್ಯಂತರ ರೂ. ಖರ್ಚು ಮಾಡಿ ನವೀಕರಿಸಿದ್ದ ಪಟ್ಟಣದ ಬಸ್‌ ನಿಲ್ದಾಣದ ಮೇಲ್ಛಾವಣಿ ಮಳೆ ಬಂದಾಗ ಸೋರುತ್ತಿದೆ. ಪಟ್ಟಣದಲ್ಲಿನ ಬಸ್‌ ನಿಲ್ದಾಣದ ನವೀಕರಣ, ರಸ್ತೆ ಕಾಂಕ್ರೀಟ್‌ ಕಾಮಗಾರಿ ಕೈಗೊಳ್ಳಲಾಗಿತ್ತು. ಗುತ್ತಿಗೆದಾರ, ಅ ಧಿಕಾರಿಗಳ ನಿರ್ಲಕ್ಷ್ಯಕ್ಕೆ ಯೋಜನೆ ವ್ಯರ್ಥವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

ಎಷ್ಟು ಹಣ: 2018ರಲ್ಲಿ ನಂಜುಡಂಪ್ಪ ವರದಿ ಯೋಜನೆಯಲ್ಲಿ ಸುಮಾರು 2.25 ಕೋಟಿ ವೆಚ್ಚದಲ್ಲಿ ಪಟ್ಟಣದ ಬಸ್‌ ನಿಲ್ದಾಣದ ರಸ್ತೆ ಕಾಂಕ್ರೀಟ್‌, ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೆತ್ತಿಕೊಂಡಿತ್ತು. ಆದರೆ, ಕಾಮಗಾರಿ ಕಳಪೆಯಾಗಿದೆ. ಇದರಿಂದ ಮಳೆ ಬಂದರೆ ಬಸ್‌ ನಿಲ್ದಾಣ ಸೋರುತ್ತದೆ. ಇದರಿಂದ ಪ್ರಯಾಣಿಕರು ಕುರ್ಚಿ ಬಿಟ್ಟು ಎದ್ದು ನಿಲ್ಲುವಂತಹ ಸ್ಥಿತಿಯಿದೆ. ಬಸ್‌ ನಿಲ್ದಾಣದ ಮೇಲ್ಛಾವಣಿಗೆ ತಗಡುಗಳನ್ನು ಹಾಕಿ, ಮೇಲ್ದರ್ಜೆಗೇರಿಸಲಾಗಿದೆ.  ಆದರೆ ಮೇಲ್ಛಾವಣಿಯ ತಗಡುಗಳಿಂದ ಹರಿಯುವ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ. ಅಲ್ಲದೇ ನೀರು ಹರಿಯುವ ಜಾಗದಲ್ಲಿ ಹಳೆಯ ತಗಡುಗಳನ್ನು ಸಹ ಅಳವಡಿಸಿದ್ದು, ನಿಲ್ದಾಣ ಸೋರಲು ಕಾರಣ ಎನ್ನುತ್ತಾರೆ ಸಾರ್ವಜನಿಕರು.

ಆರಂಭದಲ್ಲಿ ಕಳಪೆಯಾಗಿತ್ತು: ಈ ಬಸ್‌ ನಿಲ್ದಾಣಕ್ಕೆ ಪರಸಿ ಜೋಡಿಸುವಾಗ ಒಡೆದು ಹೋದ ಕಲ್ಲುಗಳನ್ನು ಹಾಕಿ, ಬೇಕಾಬಿಟ್ಟಿಯಾಗಿ ಕಾಮಗಾರಿ ಕೈಗೊಂಡಿದ್ದರು. ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದರು. ಅಧಿಕಾರಿಗಳು ಗುತ್ತಿಗೆದಾರರಿಗೆ ನೋಟಿಸ್‌ ನೀಡಿದ್ದರೂ ಎಚ್ಚೆತ್ತುಕೊಂಡಿಲ್ಲ.

ಈ ಸಂದರ್ಭದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಮತ್ತೆ ಸರಿಯಾಗಿ ಕಲ್ಲುಗಳನ್ನು ಜೋಡಣೆ ಮಾಡಿದ್ದರು. ಅಲ್ಲದೇ ಬಸ್‌ ನಿಲ್ದಾಣದ ತಗಡುಗಳು ಸೋರುವ ಬಗ್ಗೆ ಆರಂಭದಲ್ಲಿಯೇ ಎಚ್ಚರಿಕೆ ನೀಡಿದರೂ ಗಮಹರಿಸಿಲ್ಲ.

ಬಸ್‌ ನಿಲ್ದಾಣದ ಮೇಲ್ಛಾವಣಿಗೆ ಕೆಲವು ಹೊಸ ಹಾಗೂ ಕೆಲ ಹಳೆಯ ತಗಡುಗಳನ್ನು ಜೋಡಿಸಲಾಗಿದೆ. ಕೋಟ್ಯಂತರ ರೂ. ಖರ್ಚು ಮಾಡಿ ಸರಕಾರ ಕಾಮಗಾರಿ ಮಾಡಿಸಿದೆ. ಕಾಮಗಾರಿ ಕಳಪೆಯಾಗಿದ್ದು, ಸರಕಾರದ ಹಣ ಪೋಲಾಗಿದೆ. ಈ ಬಗ್ಗೆ ತನಿಖೆಯಾಗಬೇಕು. ಇಲಾಖೆ ಬಸ್‌ ನಿಲ್ದಾಣದ ಮೇಲ್ಛಾವಣಿ ಸೋರದಂತೆ ಕ್ರಮ ಕೈಗೊಳ್ಳಬೇಕು.  –ರಾಜು ತಾಪಡಿಯಾ, ಪುರಸಭೆ ಮಾಜಿ ಅಧ್ಯಕ್ಷರು, ಗುಳೇದಗುಡ್ಡ

Advertisement

ಗುಳೇದಗುಡ್ಡ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ದುರಸ್ತಿ ಮಾಡಲು ಸೂಚನೆ ನೀಡಿದ್ದು, ದುರಸ್ತಿಗೊಳಿಸಲಾಗುವುದು. ಬಸ್‌ ನಿಲ್ದಾಣದಲ್ಲಿ ಬಸ್‌ ಹೊರಡುವ ವೇಳಾಪಟ್ಟಿ ಹಾಕಲು ಹಾಗೂ ನಿಲ್ದಾಣ ಸ್ವತ್ಛವಾಗಿಟ್ಟುಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಬಸ್‌ ನಿಲ್ದಾಣಕ್ಕೆ ಪೇಟಿಂಗ್‌ ಮಾಡಲು, ಹೆಸರು ಬರೆಸಲು ಕೂಡಾ ಸೂಚಿಸಿದ್ದೇನೆ.  –ಬಸವರಾಜ ಅಮ್ಮನ್ನವರ, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕೆಎಸ್‌ಆರ್‌ಟಿಸಿ ಬಾಗಲಕೋಟ

 

-ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next